ಬೆಂಗಳೂರು: ಕೋವಿಡ್ 19 ಲಾಕ್‌ಡೌನ್ ಹಂತ 4 ಮೇ 31ಕ್ಕೆ ಮುಗಿಯುವ ಹಿನ್ನೆಲೆಯಲ್ಲಿ ಜೂನ್ 1ರಿಂದ ಕೈಗೊಳ್ಳಬೇಕಾದ ತೀರ್ಮಾನಗಳ ಬಗ್ಗೆ ರಾಜ್ಯ ಸರ್ಕಾರ ಕೇಂದ್ರದತ್ತ ದೃಷ್ಟಿ ನೆಟ್ಟಿದ್ದು ಈ ಮಧ್ಯೆ, ರಾಜ್ಯದ ಪರಿಸ್ಥಿತಿ ಬಗ್ಗೆ ವರದಿಯೊಂದನ್ನು ರವಾನಿಸಲು ಸಿದ್ಧಪಡಿಸಿದೆ. ಮೇ 31 ಕ್ಕೆ ಪ್ರಧಾನಿ ಮೋದಿ ಅವರು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಸಂವಾದ ನಡೆಸಿ ಲಾಕ್‌ಡೌನ್ ಹಂತ 5 ರ ಬಗ್ಗೆ ತೀರ್ಮಾನ ಕೈಗೊಳ್ಳಲಿದು ಅದಕ್ಕೆ ಮುನ್ನ ರಾಜ್ಯ ಸರ್ಕಾರ ಲಾಕ್ ಡೌನ್‌ನಲ್ಲಿ ಸಡಿಲ ಕೋರಿ ಸಲ್ಲಿಸಲು ಮುಂದಾಗಿದೆ.
ಈಗಾಗಲೇ ಜೂ.1 ರಿಂದ ದೇವಾಲಯ, ಮಸೀದಿ, ಚರ್ಚ್ ತೆರೆಯಲು ರಾಜ್ಯ ಸರ್ಕಾರ ತೀರ್ಮಾನಿಸಿದ್ದು ಅದಕ್ಕಾಗಿ ಮಾರ್ಗ ಸೂಚಿ ರಚನೆಯಲ್ಲಿ ತೊಡಗಿದೆ. ಅದರ ಪ್ರತಿ ಸಲ್ಲಿಸಿ ಕೇಂದ್ರದಿಂದ ಅಧಿಕೃತವಾಗಿ ಹಸಿರು ನಿಶಾನೆ ಪಡೆಯಲಿದೆ. ಧರ್ಮಸ್ಥಳ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ಅವರು ದೇವಾಲಯ ತೆರೆಯುವ ಸಂಬಂಧ ಪಾಲಿಸಬೇಕಾದ ಕ್ರಮಗಳ ಬಗ್ಗೆ ಸರ್ಕಾರಕ್ಕೆ ಕೆಲ ಸಲಹೆ ನೀಡಿದ್ದು ಅದರ ಪ್ರಕಾರ ನಿಯಮಾವಳಿ ರೂಪಿಸಲಾಗಿದೆ ಎಂದು ಹೇಳಲಾಗಿದೆ.
ಇನ್ನು ಹೋಟೆಲ್, ಮಾಲ್ ಪ್ರಾರಂಭಕ್ಕೆ ಸಾಕಷ್ಟು ಬೇಡಿಕೆ ಹಾಗೂ ಒತ್ತಡ ಇದೆ. ಹೋಟೆಲ್ ಹಾಗೂ ಮಾಲ್ ತೆರೆದ ನಂತರ ಚಿತ್ರಮಂದಿರಕ್ಕೆ ಯಾಕೆ ನಿರ್ಬಂಧ ಎಂಬ ಪ್ರಶ್ನೆಯೂ ಚಿತ್ರರಂಗದ ಕಡೆಯಿಂದ ಕೇಳಿಬಂದಿದ್ದು ನಮಗೂ ಅವಕಾಶ ಕೊಡಿ ಎಂದು ಚಿತ್ರೋದ್ಯಮದ ಗಣ್ಯರು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದಾರೆ. ಇದರ ನಡುವೆ ಹೊರ ರಾಜ್ಯಗಳಿಂದ ಕರ್ನಾಟಕಕ್ಕೆ ಪ್ರವೇಶ ಕಲ್ಪಿಸಿದ ನಂತರ ಕೋವಿಡ್ 19 ಪ್ರಕರಣಗಳು ಹೆಚ್ಚಾಗುತ್ತಿರುವ ಬಗ್ಗೆ ತಜ್ಞರು ಆತಂಕ ವ್ಯಕ್ತಪಡಿಸಿ, ಇದಕ್ಕೆ ಕಡಿವಾಣ ಹಾಕಲು ಹಂತ ಹಂತವಾಗಿ ಹೊರ ರಾಜ್ಯಗಳಿಂದ ಪ್ರವೇಶಕ್ಕೆ ಅವಕಾಶ ಕೊಡಬೇಕು.
ಇದರಿಂದ ರಾಜ್ಯ ಸರ್ಕಾರವು ಪರಿಸ್ಥಿತಿ ನಿಭಾಯಿಸಲು ಅನುಕೂಲವಾಗಲಿ ದೆ ಎಂದು ಸಲಹೆ ನೀಡಿದ್ದಾರೆ ಎಂದು ಹೇಳಲಾಗಿದೆ. ಇದೇ ಕಾರಣಕ್ಕೆ ಸಂಪುಟದಲ್ಲಿ ಐದು ರಾಜ್ಯಗಳಿಗೆ ಸಂಬಂಧಿಸಿದಂತೆ ಪ್ರವೇಶ ತಾತ್ಕಾಲಿಕವಾಗಿ ನಿರ್ಬಂಧ ತೀರ್ಮಾನ ಕೈಗೊಳ್ಳಲಾಯಿತು. ಮುಖ್ಯಮಂತ್ರಿಯವರ ಸೂಚನೆ ಮೇರೆಗೆ ಮುಖ್ಯ ಕಾರ್ಯದರ್ಶಿಯವರು ಅಧಿಕಾರಿಗಳ ಜತೆ ಸಭೆ ನಡೆಸಿದ್ದಾರೆ. ರಾಜ್ಯದ ಪರಿಸ್ಥಿತಿ, ತಜ್ಞರ ಅಭಿಪ್ರಾಯ , ಸಂಪುಟದಲ್ಲಿ ವ್ಯಕ್ತವಾದ ಸಲಹೆ, ಸೂಚನೆ ಒಳಗೊಂಡ ವರದಿ ಸಿದ್ಧಪಡಿಸಿ ಕೇಂದ್ರಕ್ಕೆ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ಹೇಳಲಾಗಿದೆ.
ಪ್ರತಿ ಭಾನುವಾರ ಸಂಪೂರ್ಣ ಲಾಕ್‌ಡೌನ್?: ಪ್ರತಿ ಭಾನುವಾರ ಸಂಪೂರ್ಣ ಲಾಕ್‌ಡೌನ್ ಬಗ್ಗೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಆದರೆ, ಕೇಂದ್ರದ ಸಲಹೆ ಏನು ಎಂಬುದು ಭಾನುವಾರ ತೀರ್ಮಾನಗೊಳ್ಳಲಿದೆ. ಕೇಂದ್ರ ಸರ್ಕಾರ ದೇಶಾದ್ಯಂತ ಲಾಕ್‌ಡೌನ್ ಮುಂದುವರಿಸುವ ಸಂಬಂಧ ಬಹುತೇಕ ಸರ್ಕಾರಗಳಿಗೆ ಅಧಿಕಾರ ನೀಡಿರುವುದರಿಂದ ಜೂ. 1 ರಿಂದ ಸರ್ಕಾರ ಸುರಕ್ಷತೆಯ ಖಾತರಿ ನೀಡಿದರೆ, ಪ್ರಕರಣಗಳ ಸಂಖ್ಯೆಯಲ್ಲಿ ನಿಯಂತ್ರಣ ಕಂಡು ಬಂದರೆ ದೇವಾಲಯ, ಚರ್ಚ್, ಮಸೀದಿ, ಹೋಟೆಲ್, ಮಾಲ್, ಸಿನಿಮಾ ಮಂದಿರಗಳ ಆರಂಭಕ್ಕೆ ಅವಕಾಶ ಸಿಗಬಹುದು ಎಂದು ಹೇಳಲಾಗಿದೆ.