Advertisement

ಮಧ್ಯಾಹ್ನದಿಂದಲೇ ಲಾಕ್‌ಡೌನ್‌ಗೆ ಜನಾಕ್ರೋಶ

06:24 PM Apr 23, 2021 | Team Udayavani |

ರಾಯಚೂರು: ನೈಟ್‌ ಕರ್ಫ್ಯೂ ಜಾರಿಗೊಳಿಸಿದ ಮರುದಿನವೇ ಕೊರೊನಾ ಅಟ್ಟಹಾಸ ಮೆರೆದಿದ್ದು, ಗುರುವಾರ ಮಧ್ಯಾಹ್ನದಿಂದಲೇ ಲಾಕ್‌ಡೌನ್‌ ಜಾರಿಗೊಳಿಸಲಾಯಿತು. ಸರ್ಕಾರದ ಈ ದಿಢೀರ್‌ ನಿರ್ಧಾರವನ್ನು ಖಂಡಿಸಿ ಬೀದಿ ಬದಿ ವರ್ತಕರು ಪ್ರತಿಭಟಿಸಿದರು. ಅವರನ್ನು ಚದುರಿಸಲು ಪೊಲೀಸರು ಲಾಠಿ ಬೀಸಬೇಕಾಯಿತು. ಅಗತ್ಯ ಸೇವೆಗಳಾದ ಆಸ್ಪತ್ರೆ, ಮೆಡಿಕಲ್‌, ಊಟ, ದಿನಸಿ ಹೊರತುಪಡಿಸಿ ಉಳಿದೆಲ್ಲ ಸೇವೆಗಳನ್ನು ಪೊಲೀಸರು ಬಂದ್‌ ಮಾಡಿಸಿದರು.

Advertisement

ಬುಧವಾರ ರಾತ್ರಿ 9ಗಂಟೆಯಿಂದ ನೈಟ್‌ ಕರ್ಫ್ಯೂ ಜಾರಿ ಮಾಡಲಾಗಿತ್ತು. ಎಲ್ಲ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಲಾಯಿತು. ರಾತ್ರಿ ಪೊಲೀಸ್‌ ವಾಹನಗಳು ಪೆಟ್ರೋಲಿಂಗ್‌ ನಡೆಸಿದವು. ಅನಗತ್ಯವಾಗಿ ಓಡಾಡುತ್ತಿರುವವರನ್ನು ಪೊಲೀಸರು ತಡೆದು ವಿಚಾರಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಗುರುವಾರ ಜನಜೀವನ ಎಂದಿನಂತಿತ್ತು. ಆದರೆ, ಪಾಸಿಟಿವ್‌ ಪ್ರಕರಣಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿರುವ ವರದಿ ಬರುತ್ತಿದ್ದಂತೆ ಪೊಲೀಸರು ಲಾಕ್‌ ಡೌನ್‌ ಜಾರಿ ಮಾಡಿಬಿಟ್ಟರು. ಅಂಗಡಿ ಮುಂಗಟ್ಟುಗಳನ್ನು ಬಲವಂತವಾಗಿ ಮುಚ್ಚಿಸಿದ ದೃಶ್ಯ ಕಂಡು ಬಂತು.

ಕೆಲವೊಂದು ವ್ಯಾಪಾರ ವಹಿವಾಟು ಮಾತ್ರ ಎಂದಿನಂತಿದ್ದರೆ ಬಹುತೇಕ ವ್ಯಾಪಾರ ಸ್ಥಗಿತಗೊಳಿಸಲಾಯಿತು. ಆದರೆ, ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ವರ್ತಕರು, ಈ ರೀತಿ ಏಕಾಏಕಿ ಲಾಕ್‌ಡೌನ್‌ ಜಾರಿ ಮಾಡಿದರೆ ಹೇಗೆ? ಎಂದು ಆಕ್ರೋಶ ಹೊರಹಾಕಿದರು. ಅಲ್ಲದೇ, ಡಿಸಿ ಕಚೇರಿ ಎದುರು ಜಮಾಯಿಸಿ ಪ್ರತಿಭಟನೆ ನಡೆಸಿದರು.

ರಾತ್ರಿ ಒಂಭತ್ತು ಗಂಟೆ ನಂತರ ಎಂದು ಹೇಳಲಾಗಿತ್ತು. ಈಗ ಏಕಾಏಕಿ ಬಂದ್‌ ಮಾಡಿದರೆ ಹೇಗೆ? ಮೊದಲೇ ತಿಳಿಸಿದರೆ ಕನಿಷ್ಠ ನಮಗೆ ಆಗುವ ನಷ್ಟ ತಪ್ಪಿಸಿಕೊಳ್ಳುತ್ತಿದ್ದೇವು ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಲಾಕ್‌ಡೌನ್‌ಗೆ ಸೀಮಿತ ಎನ್ನುವಂತಾಗಿತ್ತು. ಗ್ರಾಮೀಣ ಭಾಗದಲ್ಲಿ ಇದರ ಬಿಸಿ ಜನರಿಗೆ ತಟ್ಟಲಿಲ್ಲ. ಹಳ್ಳಿ ಜನ ಎಂದಿನಂತೆ ತಮ್ಮ ದೈನಂದಿನ ಚಟುವಟಿಕೆಯಲ್ಲಿ ತೊಡಗಿದ್ದು ಕಂಡುಬಂತು.

ಸೆಮಿ ಲಾಕ್‌ಡೌನ್‌ಗೆ ಜನ ಸುಸ್ತು
ಸರ್ಕಾರ ಮತ್ತೆ ಲಾಕ್‌ಡೌನ್‌ ಮಾಡಲಿದೆ ಎಂಬ ಸುದ್ದಿ ಎಲ್ಲೆಡೆ ಹರಿದಾಡಿತು. ಇದರಿಂದ ಗ್ರಾಮೀಣ ಭಾಗದ ಜನ ತಮ್ಮ ಬಾಕಿ ಕೆಲಸಗಳನ್ನು ಮುಗಿಸಿಕೊಳ್ಳಲು ಕಚೇರಿಗಳಿಗೆ ಮುಗಿಬಿದ್ದ ದೃಶ್ಯ ಕಂಡು ಬಂತು. ಈಗಿನ ಸುದ್ದಿಗಳ ಜತೆಗೆ ಮೊದಲ ಬಾರಿ ಲಾಕ್‌ ಡೌನ್‌ ಮಾಡಿದಾಗಿನ ಅನೇಕ ಸುದ್ದಿಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ಜನರನ್ನು ಗೊಂದಲಕ್ಕೀಡು ಮಾಡಿದವು. ಕಚೇರಿ ಕೆಲಸಗಳನ್ನು ಬೇಗನೇ ಮುಗಿಸಿಕೊಳ್ಳುವ ತವಕದ ಜತೆಗೆ ಅಗತ್ಯ ವಸ್ತುಗಳ ಖರೀದಿಸಿಕೊಳ್ಳಲು ಜನ ನಗರಗಳಿಗೆ ಆಗಮಿಸಿದ್ದರು. ಮಧ್ಯಾಹ್ನ ಯಾವುದೇ ಮುನ್ಸೂಚನೆ ಇಲ್ಲದೇ ದಿಢೀರ್‌ ಲಾಕ್‌ಡೌನ್‌ ಜಾರಿ ಮಾಡಿದ್ದು ಕಂಡು ಜನರು ಕಂಗಾಲಾದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next