Advertisement
ಬಂಧ ಮುಕ್ತವಾದ ನಂತರ ಅಂದರೆ ಕಳೆದ 15 ದಿನಗಳಲ್ಲಿ ವ್ಯಾಪಾರ ಮತ್ತು ವಾಣಿಜ್ಯ ಚಟುವಟಿಕೆಗಳು ಚುರುಕುಗೊಂಡಿದ್ದು, ಜನಜೀವನ ಈಗಷ್ಟೇ ಸಹಜ ಸ್ಥಿತಿಯತ್ತ ಮರಳುತ್ತಿತ್ತು. ಈ ಮಧ್ಯೆಯೇ ಹೆಚ್ಚುತ್ತಿರುವ ಪಾಸಿಟಿವ್ ಪ್ರಕರಣಗಳು ಜನರನ್ನು ಮನೆಗಳಲ್ಲೇ ಕಟ್ಟಿಹಾಕುತ್ತಿದೆ. ಮಂಗಳವಾರ ಮೆಜೆಸ್ಟಿಕ್‌ನಂತಹ ಜನನಿ ಬಿಡ ಪ್ರದೇಶಗಳು ಕೂಡ ಬಿಕೋ ಎನ್ನುತ್ತಿದ್ದವು. ಇನ್ನಷ್ಟು ದಿನ ಲಾಕ್‌ಡೌನ್ ಮಾಡುವುದು ಸೂಕ್ತ ಎಂಬ ಅಭಿಪ್ರಾ ಯಗಳು ಸಾರ್ವಜನಿಕ ವಲಯದಿಂದ ವ್ಯಕ್ತವಾಗುತ್ತಿವೆ.
Related Articles
Advertisement
ಉದ್ಯೋಗ ಕಳೆದುಕೊಳ್ಳುವ ಭೀತಿ: ನಗರದಲ್ಲಿ ಲಾಕ್ ಡೌನ್ ಸಂದರ್ಭದಲ್ಲಿ ಪ್ರತಿಷ್ಠಿತ ಸಂಸ್ಥೆಗಳಲ್ಲಿನ ವೇತನ ಮತ್ತು ಉದ್ಯೋಗಕ್ಕೂ ಕತ್ತರಿ ಹಾಕಲಾಗಿದೆ. ಈಗ ಮತ್ತೂಮ್ಮೆ ಲಾಕ್‌ಡೌನ್ ಜಾರಿಯಾದರೆ, ಮತ್ತಷ್ಟು ಜನ ಬೀದಿಗೆ ಬೀಳಲಿದ್ದಾರೆ. ಈಗಾಗಲೇ ಹಲವು ಸಂಸ್ಥೆಗಳು ನಷ್ಟದಲ್ಲಿದ್ದು, ಮತ್ತೂಮ್ಮೆ ಲಾಕ್‌ಡೌನ್ ಆದರೆ ಪರಿಸ್ಥಿತಿ ಕಷ್ಟವಾಗುತ್ತದೆ ಎಂದು ಹೆಸರು ಹೇಳಲಿಚ್ಛಿಸದ ಬಿಬಿಎಂಪಿಯ ಅಧಿಕಾರಿಯೊಬ್ಬರು ತಿಳಿಸುತ್ತಾರೆ.
ಈ ಹಿಂದೆ ಯಾವುದೇ ಸಿದ್ಧತೆಗಳನ್ನು ಮಾಡಿಕೊಳ್ಳದೆ ಸರ್ಕಾರ ದಿಢೀರ್ ಲಾಕ್‌ಡೌನ್ ಘೋಷಣೆ ಮಾಡಿತ್ತು. ಇದು ಗಾರ್ಮೆಂಟ್ ಉದ್ಯೋಗಿಗಳನ್ನು ಕೆಲಸ ಕಳೆದು ಕೊಳ್ಳುವಂತೆ ಮಾಡಿತು. ಉತ್ಪಾದನಾ ವಲಯಕ್ಕೆ ತನ್ನದೆ ಕೊಡುಗೆ ನೀಡುತ್ತಿದ್ದ ಗಾರ್ಮೆಂಟ್ ಉದ್ಯೋಗಿಗಳು ಈಗಾ ಗಲೇ ಉದ್ಯೋಗ ಕಳೆದುಕೊಂಡು ಪರದಾಡುತ್ತಿದ್ದಾರೆ. ಬೆಂಗಳೂರು ಸುತ್ತ ಸುಮಾರು ಐದು ಲಕ್ಷ ಜನ ಕೆಲಸ ಕಳೆದು ಕೊಂಡಿದ್ದಾರೆ. ಇದಕ್ಕೆಲ್ಲ ಯಾರು ಹೊಣೆ ಎಂದು ಸಿಐಟಿಐ ಅಧ್ಯಕ್ಷೆ ವರಲಕ್ಷ್ಮೀ ಪ್ರಶ್ನಿಸುತ್ತಾರೆ.
ಸರ್ಕಾರದ ಕೆಲವು ತಪ್ಪು ನಿರ್ಧಾರಗಳಿಂದ ಕಾರ್ಮಿಕ ವಲಯ ಕಣ್ಣೀರು ಹಾಕುತ್ತಿದೆ. ಈಗಾಗಲೇ ಸುಮಾರು 4,500ಕ್ಕೂ ಹೆಚ್ಚು ಕಾರ್ಮಿಕರು ಹಲವು ತಿಂಗಳ ವೇತನ ಇಲ್ಲದೆ ನ್ಯಾಯಕ್ಕಾಗಿ ಕಾರ್ಮಿಕ ಇಲಾಖೆ ಮೊರೆಹೋಗಿದ್ದಾರೆ. ಸರ್ಕಾರ ಕಾರ್ಮಿಕರ ಖಾತೆಗಳಿಗೆ ಹಣ ಹಾಕಿ ಮುಂದಿನ ಹೆಜ್ಜೆ ಇಡಲಿ ಎಂದು ಒತ್ತಾಯಿಸಿದ ಅವರು, ಲಾಕ್‌ಡೌನ್‌ನಿಂದಲೇ ಎಲ್ಲ ಸಮಸ್ಯೆ ಬಗೆಹರಿಯುವುದಿಲ್ಲ. ಸರ್ಕಾರ ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಹೆಲ್ತ್‌ಕೇರ್ ಸೆಂಟರ್ ತೆರೆಯಲಿ ಎಂದು ಸಲಹೆ ನೀಡಿದ್ದಾರೆ.
ಶ್ರಮಿಕ ವರ್ಗದ ನಿದ್ದೆಗೆಡಿಸಿದ ಲಾಕ್‌ಡೌನ್ ಕೂಗು: ಹಿಂದಿನ ಲಾಕ್‌ಡೌನ್‌ನಿಂದ ಬೀದಿ ವ್ಯಾಪಾರಿಗಳು ನಲುಗಿಹೋಗಿದ್ದಾರೆ. ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಶೇ. 95ರಷ್ಟು ವ್ಯಾಪಾರಕ್ಕೆ ಹೊಡೆತ ಬಿದ್ದಿದೆ. ಮತ್ತೆ ಸರ್ಕಾರ ಲಾಕ್‌ಡೌನ್ ಮಾಡಿದರೆ, ಬೀದಿ ವ್ಯಾಪಾರಿಗಳು ಅಕ್ಷರಶಃ ಬೀದಿಗೆ ಬೀಳಲಿದ್ದಾರೆ ಎಂದು ರಾಜ್ಯ ಬೀದಿಬದಿ ವ್ಯಾಪಾರಿಗಳ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ರಂಗಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರಿನಲ್ಲಿ ಸುಮಾರು 24 ಸಾವಿರಕ್ಕೂ ಅಧಿಕ ನೋಂದಾಯಿತ ವ್ಯಾಪಾರಿಗಳಿದ್ದಾರೆ. ಕೆಲವು ಕಡೆಗಳಲ್ಲಿ ವ್ಯಾಪಾರ ಕಷ್ಟವಾಗಿದೆ. ಹೀಗೆ ಪರಿಸ್ಥಿತಿ ಮುಂದುವರಿದರೆ ಜೀವನವೂ ಕಷ್ಟವಾಗಲಿದೆ ಎಂದು ಅಲವತ್ತುಕೊಂಡರು. ಅದೇ ರೀತಿ, ಆಟೋ ಚಾಲಕರು, ಆ್ಯಪ್ ಆಧಾರಿತ ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್, ಟೂರಿಸ್ಟ್ ಟ್ಯಾಕ್ಸಿ ಚಾಲಕರು ಈಗಷ್ಟೇ ಚೇತರಿಸಿಕೊಳ್ಳುತ್ತಿದ್ದರು. ಕಳೆದ ಮೂರ್‍ನಾಲ್ಕು ದಿನಗಳಿಂದ ಜನರ ಸಂಚಾರ ವಿರಳವಾಗಿದ್ದು, ವ್ಯಾಪಾರ ಇಲ್ಲದಂತಾಗಿದೆ. ಈ ಮಧ್ಯೆ ಲಾಕ್‌ಡೌನ್ ಕೂಗು ಈ ವಲಯದ ನಿದ್ದೆಗೆಡಿಸಿದೆ.
“ಲಾಕ್‌ಡೌನ್ ಮುಂಚೆ ತಜ್ಞರ ಅಭಿಪ್ರಾಯ ಪಡೆಯಲಿ’: ರಾಜ್ಯದಲ್ಲಿ ಕೋವಿಡ್ 19 ಪ್ರಕರಣಗಳು ಹೆಚ್ಚುತ್ತಿರುವುದರಿಂದ ಮತ್ತೆ ಲಾಕ್ ಡೌನ್ ಮಾಡುವ ಬಗ್ಗೆ ತಜ್ಞರ ಅಭಿಪ್ರಾಯ ಪಡೆದು ಸರ್ಕಾರ ನಿರ್ಧಾರ ಕೈಗೊಳ್ಳಲಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಪೂರ್ವ ಸಿದ್ಧತೆಯಿಲ್ಲದೆ ಲಾಕ್‌ಡೌನ್ ಮಾಡಿದ್ದರಿಂದ ಸಾಕಷ್ಟು ಸಮಸ್ಯೆಯಾಗಿದೆ. ವೆಂಟಿಲೇಟರ್ ದುಬಾರಿ ಬೆಲೆಗೆ ಖರೀದಿ ಮಾಡಿದ್ದಾರೆ. ಪಿಪಿಎ ಕಿಟ್ ಕಳಪೆಯಾಗಿವೆ ಎಂಬ ಆರೋಪವಿದೆ ಎಂದು ಖಂಡ್ರೆ ತಿಳಿಸಿದರು.