Advertisement

ಲಾಕ್‌ಡೌನ್‌ ಅಧಿಕಾರ ದುರ್ಬಳಕೆ ಬೇಡ: ತಿಮ್ಮಾಪುರ

03:22 PM Apr 27, 2020 | Suhan S |

ಮುಧೋಳ: ಕೋವಿಡ್ 19 ವೈರಸ್‌ ನಿಯಂತ್ರಣಕ್ಕೆ ಲಾಕ್‌ಡೌನ್‌ ಮುಂದುವರಿದಿದ್ದು, ಅಧಿಕಾರಿಗಳು ನಿಯಮ ದುರ್ಬಳಕೆ ಮಾಡಿಕೊಂಡು ಜನ ಸಾಮಾನ್ಯರಿಗೆ ತೊಂದರೆ ಕೊಡುತ್ತಿದ್ದಾರೆ. ಅಗತ್ಯ-ತುರ್ತು ಸಂದರ್ಭದಲ್ಲೂ ಜನರಿಗೆ ತೊಂದರೆಯಾಗದಂತೆ ಜಿಲ್ಲಾಡಳಿತ ಎಚ್ಚರಿಕೆ ವಹಿಸಬೇಕು ಎಂದು ಮಾಜಿ ಸಚಿವ, ವಿಧಾನಪರಿಷತ್‌ ಸದಸ್ಯ ಆರ್‌.ಬಿ. ತಿಮ್ಮಾಪುರ ಒತ್ತಾಯಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಲಾಕ್‌ಡೌನ್‌ ಜಾರಿಗೊಂಡು ತಿಂಗಳು ಮುಗಿದಿವೆ. ಹೀಗಾಗಿ ಪ್ರಧಾನಿ ಮೋದಿಯವರು ದೇಶಾದ್ಯಾಂತ ಲಾಕ್‌ಡೌನ್‌ ವಿಸ್ತರಿಸಿದ್ದಾರೆ. ಅದರ ಜತೆಗೆ ಅವರು ಜನ ಸಾಮಾನ್ಯರಿಗೆ ತೊಂದರೆಯಾದಂತೆ ಕೆಲ ಸಡಿಲಿಕೆಗಳನ್ನೂ ಕೂಡಾ ಘೋಷಿಸಿದ್ದಾರೆ. ರಾಜ್ಯದಲ್ಲೂ ಸಿಎಂ ಯಡಿಯೂರಪ್ಪನವರೂ ಸಹ ಕೆಲವು ಸಡಿಲಿಕೆ ಘೋಷಿಸಿದ್ದಾರೆ. ಆದರೆ, ನಮ್ಮ ರಾಜ್ಯದಲ್ಲೀಗ ಅಧಿಕಾರಿಗಳ ದರ್ಬಾರ್‌ ನಡೆಯತೊಡಗಿದೆ. ತಮಗೆ ಬೇಕಾದಂತೆ ನಿಯಮ ರೂಪಿಸತೊಡಗಿದ್ದಾರೆ. ಇದರಿಂದ ಜನಸಾಮಾನ್ಯರು ತೊಂದರೆಗೀಡಾಗಿದ್ದಾರೆ ಎಂದರು.

ರಾಜ್ಯದಲ್ಲೀಗ ಅ ಧಿಕಾರಿಗಳು ತುಘಲಕ ಆಡಳಿತ ನಡೆಸಿದ್ದಾರೆ. ಅವಶ್ಯ ಕಾರಣಗಳಿದ್ದರೆ ಹೋಗಬಹುದೆಂದು ಪ್ರಧಾನಿ, ಮುಖ್ಯಮಂತ್ರಿಗಳು ಆದೇಶಿಸಿದ್ದರೂ ಕೂಡಾ ಅದ್ಯಾವುದನ್ನು ಲೆಕ್ಕಕ್ಕೆ ತೆಗೆದುಕೊಳ್ಳದೇ ಮನಬಂದಂತೆ ಅಧಿ ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ರಸ್ತೆಯಲ್ಲಿ ಯಾರಾದರೂ ಹೊರಟಿದ್ದರೆ, ಕಾರಣ ವಿಚಾರಿಸದೇ ಅವರನ್ನು ಮನಬಂದಂತೆ ಲಾಠಿಯಿಂದ ಹೊಡೆಯುವುದು ಅಮಾನವಿಯತೆಯ ಲಕ್ಷಣವಾಗಿದೆ ಎಂದು ಹೇಳಿದರು. ನಗರದ ಯಾವ ಸ್ಥಳದಲ್ಲಿ ಕೋವಿಡ್ 19  ಸೋಂಕು ಕಂಡುಬಂದಿದೆಯೋ ಅಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿ. ಅದು ಬಿಟ್ಟು ಬೇರೆ ಕಡೆ ಸಾರ್ವಜನಿಕರಿಗೆ ತೊಂದರೆ ನೀಡುವುದು ತಪ್ಪು ಎಂದರು.

ಜಿಲ್ಲಾಧಿಕಾರಿಗಳು ಒಂದು ನಿಯಮ ಹೇಳಿದರೆ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಮತ್ತೂಂದು ನಿಯಮ ಹೇಳುತ್ತಾರೆ. ಹೀಗೆ ಕೆಳಹಂತದ ಅಧಿ ಕಾರಿಗಳ ತನಕ ತಮಗೆ ಬೇಕಾದಂತೆ ಕಾಯ್ದೆಗಳನ್ನು ಹೇಳಿ ಜನಸಾಮಾನ್ಯರನ್ನು ತೊಂದರೆಗೀಡು ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಜನಸಾಮಾನ್ಯರಿಗೆ ಬೇಕಾದಂತಹ ದಿನಸಿ ವಸ್ತುಗಳು, ಔಷಧ ಅಂಗಡಿಗಳು, ತರಕಾರಿ ಅಂಗಡಿಗಳನ್ನೆಲ್ಲ ಬಂದ್‌ ಮಾಡಲಾಗಿದೆ. ಈ ಬಗ್ಗೆ ವಿಚಾರಿಸಿದರೆ ಅದನ್ನು ಮನೆಗಳಿಗೆ ಹೋಮ್‌ ಡಿಲೆವರಿ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳುತ್ತಾರೆ.

ಆದರೆ ಬಡವರು, ಕೂಲಿ-ಕಾರ್ಮಿಕರು ಇಂತಹವರಿಗೆ ಅಲ್ಪ ಸ್ವಲ್ಪ ತಂದು ಜೀವನ ಸಾಗಿಸುವುದೇ ದುಸ್ತರವಾಗಿರುವಾಗ ಇನ್ನು ಅವರು ಫೋನ್‌ ಮಾಡಿ ಮನೆಗೆ ತರಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು. ಕೆಲವು ಗಂಟೆಗಳ ಕಾಲ ಸಾಮಾಜಿಕ ಅಂತರದೊಂದಿಗೆ ಕಿರಾಣಿ, ಔಷಧ, ತರಕಾರಿ ಅಂಗಡಿಗಳಿಗೆ ನಿಗದಿತ ಸಮಯ ನೀಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.  ನಗರದಲ್ಲಿ ಔಷಧ ಅಂಗಡಿಗಳು ಕಳೆದ ಮೂರು ದಿನಗಳಿಂದ ಸಂಪೂರ್ಣವಾಗಿ ಬಂದ್‌ ಇವೆ. ಜನಸಾಮಾನ್ಯರಿಗೆ ಕೆಲ ಸಣ್ಣ-ಪುಟ್ಟ ಕಾಯಿಲೆಗಳಿಗೆ ಔಷ ಧ ಅಂಗಡಿಗಳಿಗೆ ತೆರಳುತ್ತಾರೆ. ಆದರೆ ಅಧಿಕಾರಿಗಳು ಔಷಧ ಅಂಗಡಿಯವರಿಗೆ ನೆಗಡಿ, ಕೆಮ್ಮು, ಜ್ವರ ಇಂತಹ ಕಾಯಿಲೆ ಇರುವ ವ್ಯಕ್ತಿಗಳು ಔಷಧ ಖರೀದಿಗೆ ಬಂದರೆ ಅವರ ವಿವರ ನೀಡಲು ಆದೇಶಿಸಿದ್ದಾರೆ.

Advertisement

ಇಂತಹ ತೊಂದರೆಯೇ ಬೇಡವೆಂದು ಔಷಧ ಅಂಗಡಿಯವರು ಅಂಗಡಿ ಬಂದ್‌ ಮಾಡಿದ್ದಾರೆ. ಹೀಗಾದರೆ ಕೆಲ ಸಂದರ್ಭಗಳಲ್ಲಿ ಪ್ರಮುಖ ಕಾಯಿಲೆಗಳಿಗೆ ಔಷಧ ದೊರೆಯದೇ ಪರದಾಡುವ ಪರಿಸ್ಥಿತಿ ಮುಧೋಳದಲ್ಲಿ ನಿರ್ಮಾಣವಾಗಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next