Advertisement

ಮೇ.10 ರಿಂದ ಕಠಿನ ಲಾಕ್‌ಡೌನ್‌ :ನಿಯಮ ಉಲ್ಲಂಘಿಸಿದರೆ ಕಟ್ಟುನಿಟ್ಟಿನ ಕ್ರಮ; ಉಡುಪಿ ಡಿಸಿ

08:20 PM May 08, 2021 | Team Udayavani |

ಉಡುಪಿ : ಸೋಮವಾರದಿಂದ ಜಾರಿಯಾಗುವ ಎರಡನೆಯ ಹಂತದ ಲಾಕ್‌ಡೌನ್‌ ನಿಯಮಾವಳಿಗಳನ್ನು ಉಲ್ಲಂಘಿಸಿದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್‌ ಹೇಳಿದ್ದಾರೆ.

Advertisement

ಈಗಾಗಲೇ ಚೆಕ್‌ಪೋಸ್ಟ್‌ಗಳು ಕಾರ್ಯಾಚರಿಸುತ್ತಿದ್ದು ಜಿಲ್ಲೆಯೊಳಗೆ ಯಾರನ್ನೂ ಬಿಡುವುದಿಲ್ಲ. ಈ ಕುರಿತು ಪೊಲೀಸ್‌ ಅಧಿಕಾರಿಗಳ ಸಭೆ ನಡೆಸಿ ನಿರ್ದೇಶನ ನೀಡಿದ್ದೇವೆ ಎಂದು ಜಿಲ್ಲಾಧಿಕಾರಿಯವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಪ್ರಶ್ನೆಗೆ ಉತ್ತರಿಸಿದ ಜಿಲ್ಲಾಧಿಕಾರಿಯವರು ಹಳ್ಳಿಗಳಲ್ಲಿ ಪೇಟೆಗೆ ಬರಲು ಬಹಳ ದೂರ ಇರುವುದರಿಂದ ಸರಕಾರದ ಗಮನಕ್ಕೆ ತರುತ್ತೇವೆ ಎಂದರು.

ಶಾಸಕರಾದ ರಘುಪತಿ ಭಟ್‌, ಲಾಲಾಜಿ ಮೆಂಡನ್‌, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರ್‌ ರತ್ನಾಕರ ಹೆಗ್ಡೆ, ಜಿ.ಪಂ. ಸಿಇಒ ಡಾ|ನವೀನ್‌ ಭಟ್‌, ಎಡಿಸಿ ಸದಾಶಿವ ಪ್ರಭು, ಸಹಾಯಕ ಕಮಿಷನರ್‌ ರಾಜು ಉಪಸ್ಥಿತರಿದ್ದರು.

ಇದನ್ನೂ ಓದಿ :ಪಾಲಿಕೆ ಚುನಾವಣೆಯಿಂದಾಗಿ ರಾಜ್ಯದಲ್ಲಿ ಕೋವಿಡ್ ಸೋಂಕು ಹೆಚ್ಚಳ – ಸುದೀನ್ ಧವಳೀಕರ್

Advertisement

ಪ್ರಮುಖ ಅಂಶಗಳು :
– ಹೊಟೇಲುಗಳಲ್ಲಿ ಬೆಳಗ್ಗಿನಿಂದ ರಾತ್ರಿವರೆಗೆ ಆಹಾರ ಪಾರ್ಸೆಲ್‌ ಕೊಂಡೊಯ್ಯಬಹುದು. ಆದರೆ ಗ್ರಾಹಕರು ವಾಹನಗಳಲ್ಲಿ ಬಂದು ಪಾರ್ಸೆಲ್‌ ಕೊಂಡೊಯ್ಯುವಂತಿಲ್ಲ. ಪಕ್ಕದ ಹೊಟೇಲುಗಳಿಗೆ ಹೋಗಿ ಪಾರ್ಸೆಲ್‌ ತೆಗೆದುಕೊಳ್ಳಬಹುದು.

– ಅಂಗಡಿಗಳಲ್ಲಿ ಬೆಳಗ್ಗೆ 6ರಿಂದ ಬೆಳಗ್ಗೆ 10 ಗಂಟೆವರೆಗೆ ಸಾಮಗ್ರಿ ಖರೀದಿಸಬಹುದು. ಆದರೆ ಮನೆ ಸಮೀಪದ ಅಂಗಡಿಗಳಿಗೆ ಮಾತ್ರ ನಡೆದುಕೊಂಡು ಹೋಗಬೇಕು.

– ಔಷಧಿಗಳನ್ನು ಖರೀದಿಸುವವರೂ ಸಮೀಪದ ಅಂಗಡಿಗಳಲ್ಲಿ ಖರೀದಿಸಬೇಕು.

– ಸ್ವತಂತ್ರ ಮದ್ಯದ ಮಳಿಗೆಗಳಲ್ಲಿ ಬೆಳಗ್ಗೆ 6ರಿಂದ ಬೆಳಗ್ಗೆ 10 ಗಂಟೆವರೆಗೆ ಖರೀದಿಸಬಹುದು.

– ತಳ್ಳುಗಾಡಿಗಳಲ್ಲಿ ಹಣ್ಣು ಮತ್ತು ತರಕಾರಿ ಕೊಂಡೊಯ್ಯುವವರು ಬೆಳಗ್ಗೆ 6ರಿಂದ ಸಂಜೆ 6ರ ವರೆಗೆ ಸಂಚರಿಸಬಹುದು. ಇವರು ಮನೆಗಳಿಗೂ ಕೊಂಡೊಯ್ದು ಕೊಡಬಹುದು. ಇದು ಸಾರ್ವಜನಿಕರ ಖರೀದಿ ಅನುಕೂಲಕ್ಕಾಗಿ.

– ಹಾಪ್‌ಕಾಮ್ಸ್‌ ಮತ್ತು ಕೆಎಂಎಫ್ ಹಾಲಿನ ಬೂತುಗಳನ್ನು ಬೆಳಗ್ಗೆ 6ರಿಂದ ಸಂಜೆ 6ರ ವರೆಗೆ ತೆರೆದಿಟ್ಟುಕೊಳ್ಳಬಹುದು. ಬೇಕರಿ, ಇತರ ಅಂಗಡಿಗಳಲ್ಲಿ ಹಾಲು ಮಾರುತ್ತೇವೆಂದರೆ ಅವಕಾಶಗಳಿಲ್ಲ.

– ಬಂದರು ಪ್ರದೇಶಗಳಿಗೆ ಸಾರ್ವಜನಿಕರು ಪ್ರವೇಶಿಸಿ ಮೀನು ಖರೀದಿ ಮಾಡುವಂತಿಲ್ಲ. ಅಲ್ಲಿಂದ ರೀಟೇಲರ್‌ ಮೂಲಕ ಮಾರುಕಟ್ಟೆಯಲ್ಲಿ ಖರೀದಿಸಬಹುದು. ಮೀನನ್ನು ಮನೆಗೆ ಸ್ಕೂಟರ್‌ನಲ್ಲಿ ಕೊಂಡೊಯ್ದು ಮಾರಾಟಕ್ಕೆ ಅವಕಾಶವಿದೆ.

– ಆರೋಗ್ಯ ತುರ್ತು ಸ್ಥಿತಿ, ಆರೋಗ್ಯ ಇಲಾಖೆ ಸಿಬಂದಿಗಳ ಕರ್ತವ್ಯಕ್ಕೆ, ನ್ಯಾಯಾಂಗ ಸಿಬಂದಿಗಳ ಕರ್ತವ್ಯಕ್ಕೆ, ರೈಲು-ವಿಮಾನದಲ್ಲಿ ಪ್ರಯಾಣಿಸುವವರು ಟಿಕೆಟ್‌ ದಾಖಲೆಯೊಂದಿಗೆ, ತುರ್ತು ಆರೋಗ್ಯ ಸ್ಥಿತಿಗೆ ಟ್ಯಾಕ್ಸಿ ಪ್ರಯಾಣ, ರೋಗಿಗಳ ಪರಿಚಾರಕರಿಗೆ ಪ್ರಯಾಣ ಹೊರತುಪಡಿಸಿ ಅಂತಾರಾಜ್ಯ ಮತ್ತು ಅಂತರ್ಜಿಲ್ಲಾ ಸಂಚಾರವನ್ನು ನಿರ್ಬಂಧಿಸಲಾಗಿದೆ.

– ಬ್ಯಾಂಕ್‌, ಎಟಿಎಂ, ವಿಮಾ ಕಚೇರಿಗಳು ಹಿಂದಿನಂತೆ ಕಾರ್ಯನಿರ್ವಹಿಸುತ್ತವೆ.

– ಅಗತ್ಯ ವಸ್ತುಗಳ ತಯಾರಿಕ ಘಟಕಗಳಿಗೆ ಅವಕಾಶವಿದೆ.

– ಕಾರ್ಮಿಕರನ್ನು ಕಾಮಗಾರಿ ನಿವೇಶನದಲ್ಲಿ ಉಳಿಸಿಕೊಂಡು ನಿರ್ಮಾಣ ಕಾಮಗಾರಿ ಮಾಡುವುದಾದರೆ ಮಾತ್ರ ಅವಕಾಶವಿದೆ. ಕಾರ್ಮಿಕರು ಹೊರಗಿನಿಂದ ಬರಲು ಅವಕಾಶಗಳಿಲ್ಲ. ಯಾರೂ ಕೂಡ ಕಾರ್ಮಿಕರನ್ನು ಕರೆತರಿಸಿ ಜಿಲ್ಲಾಡಳಿತ ಇವರ ಹೊಣೆ ಹೊರಬೇಕೆಂದರೆ ಮಾಲಿಕರ ವಿರುದ್ಧ ಪ್ರಕರಣ ದಾಖಲಿಸುತ್ತೇವೆ. ಇಂತಹ ಕಾರ್ಮಿಕರನ್ನು ರವಿವಾರದ ಒಳಗೆ ಎಲ್ಲಿಗೆ ಕಳುಹಿಸಬೇಕೋ ಅಲ್ಲಿಗೆ ಕಳುಹಿಸಬೇಕು. ಅವರನ್ನು ತಂದು ಅರ್ಧದಲ್ಲಿ ಕೈಬಿಡಬಾರದು.

– ಕಟ್ಟಡ ನಿರ್ಮಾಣ ಅಂಗಡಿಗಳೂ ತೆರೆದಿರುವುದಿಲ್ಲ. ಹೀಗಾಗಿ ಸಾಮಗ್ರಿಗಳನ್ನು ರವಿವಾರದೊಳಗೆ ಸಂಗ್ರಹಿಸಿಟ್ಟುಕೊಳ್ಳಬೇಕು.

– ಹೊಯಿಗೆ, ಮಣ್ಣು ಸಹಿತ ಸಾಮಗ್ರಿಗಳ ಸಾಗಾಟಕ್ಕೆ ಅವಕಾಶವಿದೆ.

– ಹೋಮ್‌ ಡೆಲಿವರಿಗೆ ಅವಕಾಶವಿದೆ.

– 50 ಜನರ ಒಳಗೆ ಮದುವೆಗೆ ಅವಕಾಶವಿದೆ. ಎಲ್ಲಿ ಮದುವೆಯಾಗುತ್ತದೋ ಅಲ್ಲಿನ ತಹಶೀಲ್ದಾರರಿಗೆ ಅರ್ಜಿ ಸಲ್ಲಿಸಿ ಸಂಚಾರ ಅನುಮತಿ ಪಡೆದುಕೊಳ್ಳಬೇಕು. ಮೆಹಂದಿ, ಬೀಗರ ಔತಣಗಳಿಗೆ ಅವಕಾಶಗಳಿಲ್ಲ.

– ಅಂತ್ಯಸಂಸ್ಕಾರವನ್ನು ಐದು ಜನರ ಒಳಗೆ ನಡೆಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next