Advertisement

ಲಾಕ್‌ಡೌನ್‌ ಸಡಿಲಿಕೆ: ಆರ್ಥಿಕತೆಗೆ ಇಂಬು ನೀಡಿದ ಕೋವಿಡ್ ನಿಯಂತ್ರಣ

08:12 AM May 01, 2020 | Hari Prasad |

ಉಡುಪಿ: ಕೋವಿಡ್ 19 ವೈರಸ್ ಸೋಂಕಿನಿಂದ ದೂರವಾದ ಉಡುಪಿ ಜಿಲ್ಲೆಯಲ್ಲಿ ಬುಧವಾರದಿಂದ ಲಾಕ್‌ಡೌನ್‌ ಸಡಿಲಿಕೆಯಾಗಿದೆ.

Advertisement

ಈ ಮಧ್ಯೆ ಹಸುರು ಹಂತಕ್ಕೆ ಪರಿವರ್ತನೆಗೊಂಡ ಜಿಲ್ಲೆಯಲ್ಲಿ ಕೃಷಿ, ಕಟ್ಟಡ ನಿರ್ಮಾಣ, ಅಭಿವೃದ್ಧಿ ಕೆಲಸಗಳ ಸಹಿತ ಕೆಲ ಚಟುವಟಿಕೆಗಳು ಗರಿಗೆದರಿಕೊಂಡಿವೆ.

ಜಿಲ್ಲೆ ಹಸುರು ವಲಯವಾಗಿ ಪರಿವರ್ತನೆಯಾದ ಅನಂತರ ಗ್ರಾಮೀಣ ಭಾಗದಲ್ಲಿ ನಿರ್ಮಾಣ ಹಂತದ ಕೆಲಸಗಳು, ಕೃಷಿ ಹೀಗೆ ರಿಯಾಯಿತಿ ಕ್ಷೇತ್ರಗಳ ಚಟುವಟಿಕೆಗಳು ಆರಂಭಗೊಂಡಿವೆ. ಇದನ್ನು ಹೊರತುಪಡಿಸಿ ಜನಜೀವನ ಲಾಕ್‌ಡೌನ್‌ನ ಈ ಹಿಂದಿನ ಸ್ಥಿತಿಯಲ್ಲೇ ಮುಂದುವರಿದಿತ್ತು.

ದಿನಸಿ, ಬೇಕರಿ, ಹಾಲಿನ ಡೈರಿ, ಮಿಲ್ಕ್ ಪಾರ್ಲರ್‌ ಅಂಗಡಿಗಳು ಬೆಳಗ್ಗೆ 7ರಿಂದ 11 ಗಂಟೆ ತನಕ ತೆರೆದಿದ್ದವು. ಜನಸಂಚಾರ ನಗರದಲ್ಲಿ ತುಸು ಹೆಚ್ಚಿತ್ತು. ಬೆಳಗ್ಗೆ 11ರ ಬಳಿಕ ಅಂಗಡಿಗಳು ಮುಚ್ಚಿದವು. ತುರ್ತು ಸೇವೆಯ ವಾಹನಗಳ ಹೊರತು ಇತರ ವಾಹನಗಳು ಓಡಾಟ ನಿಲ್ಲಿಸಿದವು.

ಬೇಕಾಬಿಟ್ಟಿ ಓಡಾಟ ಬೇಡ
ಲಾಕ್‌ಡೌನ್‌ ಸಡಿಲಿಸಿದ್ದರೂ ಬೇಕಾಬಿಟ್ಟಿ ಓಡಾಟಕ್ಕೆ ಅವಕಾಶವಿಲ್ಲ ಎಂದು ಜಿಲ್ಲಾಧಿಕಾರಿಗಳು ಮುಂಚಿತವಾಗಿಯೇ ಸೂಚಿಸಿದ್ದರು. ನಿಯಮವನ್ನು ಮೀರಿದವರ ವಿರುದ್ಧಕ್ರಮ ಜರಗಿಸುವುದಾಗಿಯೂ ತಿಳಿಸಿದ್ದಾರೆ.

Advertisement

ಜನರು ಅದನ್ನು ಪಾಲಿಸಿದ್ದಲ್ಲದೆ ಸಾಮಾಜಿಕ ಅಂತರ ಕಾಯ್ದುಕೊಂಡಿದ್ದಾರೆ. ಪೊಲೀಸರು ಕೂಡ ನಗರದ ಅಲ್ಲಲ್ಲಿ ಚೆಕ್‌ಪೋಸ್ಟ್‌ ನಿರ್ಮಿಸಿ ರಸ್ತೆಯಲ್ಲಿ ಓಡಾಡುತ್ತಿದ್ದ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದರು.

ಕೈಗಾರಿಕೆ ಚಟುವಟಿಕೆ ಪ್ರಾರಂಭ
ಗ್ರಾಮೀಣ ಪ್ರದೇಶಗಳಲ್ಲಿ ಕಟ್ಟಡ ಕಾಮಗಾರಿ ಸಹಿತ ಇನ್ನಿತರ ಕಾಮಗಾರಿಗಳು ಪ್ರಾರಂಭಗೊಂಡಿದ್ದವು. ಸ್ವಚ್ಛತೆಗೆ ಧಕ್ಕೆ ಬಾರದಂತೆ ಕಾರ್ಮಿಕರು ಸಾಮಾಜಿಕ ಅಂತರ ಕಾಯ್ದುಕೊಂಡು ಕೆಲಸ ನಿರ್ವಹಿಸುತ್ತಿದ್ದರು.

ಮಣಿಪಾಲದ ಶಿವಳ್ಳಿ ಕೈಗಾರಿಕಾ ಪ್ರದೇಶಗಳಲ್ಲಿಯೂ ಕಾರ್ಯಚಟುವಟಿಕೆಗಳು ಸರಕಾರ ನೀಡಿದ ಸೂಚನೆಗನುಸಾರ ಬೆಳಗ್ಗಿನಿಂದ ಸಂಜೆಯವರೆಗೆ ನಡೆದವು.

ಎಲೆಕ್ಟ್ರೀಶಿಯನ್‌, ಪ್ಲಂಬರ್‌ಗಳಿಗೆ ಅವಕಾಶ
ಎಲೆಕ್ಟ್ರಿಶೀಯನ್‌ ಮತ್ತು ಪ್ಲಂಬರ್‌ಗಳು ಮನೆಗಳಿಗೆ ಹೋಗಿ ಕೆಲಸ ನಿರ್ವಹಿಸುವುದಕ್ಕೆ ಯಾವುದೇ ಅಭ್ಯಂತರವಿಲ್ಲ.

ಕೃಷಿ, ಕಟ್ಟಡ ನಿರ್ಮಾಣ, ಅಭಿವೃದ್ಧಿ
ಕೆಲಸಗಳ ಸಹಿತ ಕೆಲವು ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದ್ದು, ಈ ಸಂದರ್ಭದಲ್ಲಿ ಜನರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲೇಬೇಕು. ಅದಕ್ಕಾಗಿ ನೋಡಲ್‌ ಅಧಿಕಾರಿಗಳನ್ನು ನೇಮಿಸಲಾಗಿದ್ದು, ಅವರು ಚಟುವಟಿಕೆಗಳ ಮೇಲೆ ಕಣ್ಣಿಡಲಿದ್ದಾರೆ.
– ಜಿ. ಜಗದೀಶ್‌, ಉಡುಪಿ ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next