Advertisement

ಲಾಕ್‌ಡೌನ್‌ ನೆಪ: ಹಣ್ಣು, ತರಕಾರಿಗೆ ತರಹೇವಾರಿ ದರ

11:34 PM Apr 17, 2020 | Sriram |

ಮಂಗಳೂರು: ಲಾಕ್‌ಡೌನ್‌ ಹಾಗೂ ಸೆಂಟ್ರಲ್‌ ಮಾರ್ಕೆಟ್‌ನಲ್ಲಿ ವ್ಯವಹಾರ ಸ್ಥಗಿತವಾಗಿರುವ ಸಂದರ್ಭ ಹಣ್ಣು-ತರಕಾರಿಗಳಿಗೆ ನಗರದ ಒಂದೊಂದು ಮಾರುಕಟ್ಟೆಯಲ್ಲಿ ಒಂದೊಂದು ದರ ವಸೂಲು ಮಾಡಲಾಗುತ್ತಿದೆ. ಕೆಲವು ಕಡೆ ಮನಬಂದಂತೆ ಹಣ ವಸೂಲಿ ಮೂಲಕ ವ್ಯಾಪಾರಿಗಳು ಹಗಲು ದರೋಡೆ ನಡೆಸುತ್ತಿರುವ ಆರೋಪಗಳೂ ಕೇಳಿ ಬರುತ್ತಿವೆ.

Advertisement

ಆವಶ್ಯಕ ವಸ್ತುಗಳ ಮಾರಾಟಕ್ಕೆ ಬೆಳಗ್ಗೆ 7ರಿಂದ 12 ಗಂಟೆ ತನಕ ಮಾತ್ರ ಅವಕಾಶ ಇದ್ದು, ಈ ಸೀಮಿತ ಅವಧಿಯಲ್ಲಿ ವ್ಯಾಪಾರಿಗಳು ಹೇಳಿದಷ್ಟು ಹಣ ತೆತ್ತು ಸಿಕ್ಕಿದ್ದನ್ನು ಕೊಂಡೊಯ್ಯುವ ಅನಿವಾರ್ಯ ಗ್ರಾಹಕರದು. ಕೆಲವು ವ್ಯಾಪಾರಿಗಳು ಇದನ್ನೇ ಸುಸಂದರ್ಭ ಎಂದುಕೊಂಡು ಬೇಕಾಬಿಟ್ಟಿ ವಸೂಲಿ ಮಾಡುತ್ತಿದ್ದಾರೆ. ಈ ಬಗ್ಗೆ ಪತ್ರಿಕಾ ಕಚೇರಿಗೆ ದೂರುಗಳು ಬರುತ್ತಿವೆ.

ಕೇಂದ್ರ ಮಾರುಕಟ್ಟೆಯ ತರಕಾರಿ ಮತ್ತು ಹಣ್ಣು-ಹಂಪಲು ಸಗಟು ವ್ಯವಹಾರವನ್ನು ಬೈಕಂಪಾಡಿಯ ಎಪಿಎಂಸಿ ಯಾರ್ಡ್‌ಗೆ ಸ್ಥಳಾಂತರಿಸಲಾಗಿದ್ದು, ಮಾರ್ಕೆಟ್‌ನಲ್ಲಿ ಹೊಸ ಕಟ್ಟಡ ನಿರ್ಮಿಸಲು ಉದ್ದೇಶಿಸಿರುವ ಕಾರಣ ಅಲ್ಲಿ ರಿಟೇಲ್‌ ವ್ಯಾಪಾರವನ್ನು ರದ್ದುಪಡಿಸಲಾಗಿದೆ. ಆದ್ದರಿಂದ ತರಕಾರಿ ಮಾರಾಟಕ್ಕೆ ನಿದಿಷ್ಟ ವ್ಯವಸ್ಥೆಯಿಲ್ಲ. ಬೈಕಂಪಾಡಿಯ ಸಗಟು ವ್ಯಾಪಾರಿಗಳಿಂದ ಖರೀದಿಸುವ ರಿಟೇಲ್‌ ವ್ಯಾಪಾರಿಗಳು ತಾವೇ ಒಂದು ದರ ನಿಗದಿಪಡಿಸಿ ಗ್ರಾಹಕರಿಗೆ ಮಾರುತ್ತಾರೆ.

ಸೆಂಟ್ರಲ್‌ ಮಾರ್ಕೆಟ್‌ನಲ್ಲಿ ರಿಟೇಲ್‌ ವ್ಯಾಪಾರ ಇದ್ದಾಗ ಅಲ್ಲಿರುವ ದರಗಳನ್ನು ಪರಿಗಣಿಸಿ ಇತರ ಮಾರ್ಕೆಟ್‌ಗಳಲ್ಲಿ ತರಕಾರಿಗಳ ದರ ನಿಗದಿ ಮಾಡಲಾಗುತ್ತಿತ್ತು. ಆದರೆ ಈಗ ಒಂದೊಂದು ಕಡೆ ಒಂದೊಂದು ದರ ಇದೆ. ಮಹಾನಗರ ಪಾಲಿಕೆ ಮತ್ತು ಜಿಲ್ಲಾಡಳಿತವು ಹಾಪ್‌ಕಾಮ್ಸ್‌ ಮಳಿಗೆಗಳಲ್ಲಿ ಇರುವ ದರವನ್ನು ಮಾನದಂಡವಾಗಿ ಪರಿಗಣಿಸುತ್ತಿವೆ. ಆದರೆ ಈಗ ಎಲ್ಲ ವ್ಯಾಪಾರಿಗಳೂ ಅದೇ ಮಾನದಂಡ ಅನುಸರಿಸುತ್ತಿದ್ದಾರೆ ಎನ್ನುವುದಕ್ಕೆ ಯಾವ ಆಧಾರವೂ ಇಲ್ಲ. (ಈ ಹಿಂದೆ ಸೆಂಟ್ರಲ್‌ ಮಾರ್ಕೆಟ್‌ನಲ್ಲಿ ತರಕಾರಿ ದರಗಳು ಹಾಪ್‌ಕಾಮ್ಸ್‌ನ ದರಗಳಿಗಿಂತ ಕಡಿಮೆ ಇದ್ದವು ಎನ್ನುವುದು ಬೇರೆ ಪ್ರಶ್ನೆ).

ಬಿಲ್‌ ಸಹಿತ ದೂರು ನೀಡಿ
ಗ್ರಾಹಕರು ಖರೀದಿಸಿದ ಸಾಮಗ್ರಿಗೆ ಅಂಗಡಿಯವರಿಂದ ಬಿಲ್‌ ತೆಗೆದುಕೊಳ್ಳಬೇಕು. ಅಧಿಕ ಹಣ ವಸೂಲಿ ಮಾಡಿದ್ದಾರೆ ಎನಿಸಿದರೆ ಅಂತಹ ವ್ಯಾಪಾರಿಯ ವಿರುದ್ಧ ಬಿಲ್‌ನ ಪ್ರತಿಯ ಸಹಿತ ಪಾಲಿಕೆಗೆ ದೂರು ನೀಡಬಹುದು. ಹಾಗಾದರೆ ನಮಗೆ ವಿಚಾರಣೆ ನಡೆಸಿ ವ್ಯಾಪಾರಿಯ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ.
 - ಅಜಿತ್‌ ಕುಮಾರ್‌ ಹೆಗ್ಡೆ ಶಾನಾಡಿ, ಮನಪಾ ಆಯುಕ್ತರು

Advertisement

ಗ್ರಾಮಾಂತರದಲ್ಲಿ ಇದೆ ದರ ಪಟ್ಟಿ
ಗ್ರಾಮಾಂತರ ಪ್ರದೇಶಗಳಲ್ಲಿನ ಅಂಗಡಿಗಳಲ್ಲಿ ದರ ಪಟ್ಟಿ ನಮೂದಿಸುವಂತೆ ಸ್ಥಳೀಯಾಡಳಿತಗಳು ಸೂಚಿಸಿವೆ. ಆದರೆ ಮಂಗಳೂರಿನಲ್ಲಿ ಅಂತಹ ವ್ಯವಸ್ಥೆ ಇಲ್ಲ. ಹಾಪ್‌ಕಾಮ್ಸ್‌ ಮಳಿಗೆಗಳಲ್ಲಿ ಮಾತ್ರ ದರ ಪಟ್ಟಿ ಇದೆ.

ವ್ಯಾಪಾರಿಗಳು ಮನಬಂದಂತೆ ವಸೂಲಿ ಮಾಡುತ್ತಿರುವ ವಿಚಾರವನ್ನು ಉದಯವಾಣಿಯು ನಗರ ಪಾಲಿಕೆಯ ಆಯುಕ್ತರ ಗಮನಕ್ಕೆ ತಂದಾಗ, ತರಕಾರಿ, ಹಣ್ಣು ಹಂಪಲುಗಳ ದರವನ್ನು ಹಾಪ್‌ಕಾಮ್ಸ್‌ ನಿಗದಿಪಡಿಸುತ್ತದೆ. ಹಾಪ್‌ಕಾಮ್ಸ್‌ ಮಳಿಗೆಗಳಲ್ಲಿ ಮತ್ತು ಇತರ ಮಾರ್ಕೆಟ್‌ಗಳಲ್ಲಿ ದರ ಸುಮಾರಾಗಿ ಒಂದೇ ರೀತಿಯಲ್ಲಿರುತ್ತದೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next