Advertisement

ದಕ್ಷಿಣ ಕನ್ನಡ ಜಿಲ್ಲೆ ಲಾಕ್‌ ಡೌನ್‌: ಇಂದು ತೀರ್ಮಾನ

01:51 AM Jul 13, 2020 | Hari Prasad |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ 19 ಪರಿಸ್ಥಿತಿಯ ಬಗ್ಗೆ ಸೋಮವಾರ ಬೆಳಗ್ಗೆ 11ಕ್ಕೆ ಮುಖ್ಯಮಂತ್ರಿಗಳ ಜತೆ ವೀಡಿಯೋ ಕಾನ್ಫರೆನ್ಸ್‌ ನಡೆಯಲಿದೆ.

Advertisement

ಆ ಬಳಿಕ ಲಾಕ್‌ಡೌನ್‌ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸ್ಪಷ್ಟಪಡಿಸಿದ್ದಾರೆ.

ಜಿಲ್ಲೆಯ ಕೋವಿಡ್‌ ಪರಿಸ್ಥಿತಿ ಅಧ್ಯಯನ ಮಾಡಲು ರವಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಂಸದ ನಳಿನ್‌ ಕುಮಾರ್‌ ಹಾಗೂ ಜಿಲ್ಲಾಧಿಕಾರಿಗಳ ಜತೆ ನಡೆದ ಸಭೆಯ ಬಳಿಕ ಅವರು ಮಾಧ್ಯಮಗಳ ಜತೆ ಮಾತನಾಡಿದರು.

ಜಿಲ್ಲೆಯ ಅಲ್ಲಲ್ಲಿ ಸಾರ್ವಜನಿಕರು ಸ್ವಯಂ ಪ್ರೇರಿತವಾಗಿ ಲಾಕ್‌ಡೌನ್‌ ನಡೆಸುತ್ತಿರುವುದು ಗಮನಕ್ಕೆ ಬಂದಿದೆ. ಜನರಿಗೆ ತೊಂದರೆ ಆಗುವ ಯಾವುದೇ ನಿರ್ಧಾರವನ್ನು ದಿಢೀರನೇ ಜಾರಿಗೆ ತರುವುದಿಲ್ಲ. ಜನರು ಗೊಂದಲಕ್ಕೀಡಾಗಬಾರದು ಎಂದು ಸಚಿವರು ತಿಳಿಸಿದ್ದಾರೆ.

ಯಶಸ್ವೀ ಲಾಕ್‌ಡೌನ್‌


ಕೋವಿಡ್‌-19 ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರವಿವಾರ ನಡೆದ ಎರಡನೇ ವಾರದ ಲಾಕ್‌ಡೌನ್‌ ಉಭಯ ಜಿಲ್ಲೆಗಳಲ್ಲಿ ಸಂಪೂರ್ಣ ಯಶಸ್ವಿಯಾಗಿದೆ. ಸರಕಾರಿ, ಖಾಸಗಿ, ಸಿಟಿ ಬಸ್‌ಗಳು, ರಿಕ್ಷಾ, ಕಾರುಗಳು ರಸ್ತೆಗೆ ಇಳಿದಿರಲಿಲ್ಲ. ತರಕಾರಿ, ಮಾಂಸದ ಅಂಗಡಿಗಳು ಕೂಡ ಬಂದ್‌ ಆಗಿದ್ದವು. ಅನಾವಶ್ಯಕವಾಗಿ ವಾಹನ ಚಲಾಯಿಸಿದವರನ್ನು ಪೊಲೀಸರು ತಡೆದು ವಾಪಸ್‌ ಕಳುಹಿಸಿದರು.

Advertisement

ಪೊಲೀಸ್‌, ಆಸ್ಪತ್ರೆ ಮತ್ತು ಔಷಧ ಅಂಗಡಿ, ಆರೋಗ್ಯ ಇಲಾಖೆ, ಹಾಲು, ಮಾಧ್ಯಮ, ಅಗ್ನಿಶಾಮಕ, ಅಡುಗೆ ಅನಿಲ ಪೂರೈಕೆ ಸೇರಿದಂತೆ ಅವಶ್ಯ ಸೇವೆಯ ಬೆರಳೆಣಿಕೆಯ ವಾಹನಗಳು ಮಾತ್ರ ಓಡಾಡಿದವು.

ಜನರು ಮನೆಯಲ್ಲಿಯೇ ಉಳಿದು ಜಿಲ್ಲಾಡಳಿತಕ್ಕೆ ಸಹಕರಿಸಿದರು. ಪ್ರಮುಖ ಜಂಕ್ಷನ್‌ಗಳಲ್ಲಿ ಮತ್ತು ಆಯಕಟ್ಟಿನ ಜಾಗಗಳಲ್ಲಿ ಪೊಲೀಸರು ಬ್ಯಾರಿಕೇಡ್‌ ಅಳವಡಿಸಿ ಚೆಕ್‌ ಪಾಯಿಂಟ್‌ ನಿರ್ಮಿಸಿ ಅನಾವಶ್ಯಕ ವಾಹನ ಸಂಚಾರವನ್ನು ತಡೆದರು. ನಿಯಮ ಉಲ್ಲಂಘನೆಗೆ ಸಂಬಂಧಿಸಿ ಯಾವುದೇ ಪ್ರಕರಣ ದಾಖಲಾಗಿಲ್ಲ.


ಕೋವಿಡ್ 19 ಲಕ್ಷಣ ಇದ್ದಲ್ಲಿ ಕರೆ ಮಾಡಿ
ಯಾರಿಗಾದರೂ ಉಸಿರಾಟದ ತೊಂದರೆ, ಜ್ವರ, ಕೆಮ್ಮು, ಶೀತ ಮೊದಲಾದ ರೋಗ ಗುಣಲಕ್ಷಣಗಳಿದ್ದಲ್ಲಿ ಆತಂಕಪಡದೆ ಕರ್ನಾಟಕ ಸರಕಾರದ ಆಪ್ತಮಿತ್ರ ಸಹಾಯವಾಣಿಗೆ ಕರೆ ಮಾಡುವಂತೆ ದ.ಕ. ಜಿಲ್ಲಾಡಳಿತ ಮನವಿ ಮಾಡಿದೆ.

ರೋಗ ಲಕ್ಷಣಗಳನ್ನು ಪತ್ತೆಮಾಡಲು ವೈದ್ಯರು ನೆರವು ನೀಡುವ ಜತೆಗೆ ಸಲಹೆಯನ್ನೂ ನೀಡಲಿದ್ದಾರೆ. ಇದು ಸರಕಾರದ ಟೆಲಿಮೆಡಿಸಿನ್‌ ಮತ್ತು ವೈದ್ಯಕೀಯ ಸಲಹಾ ಸೇವೆಯಾಗಿರುತ್ತದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಸಹಾಯವಾಣಿ ಸಂಖ್ಯೆ 14410

Advertisement

Udayavani is now on Telegram. Click here to join our channel and stay updated with the latest news.

Next