Advertisement

ದೇಶದಲ್ಲಿ ಸದ್ಯಕ್ಕೆ ತೆರವಾಗದು ಲಾಕ್‌ಡೌನ್‌?

12:46 AM Apr 18, 2020 | Sriram |

ಹೊಸದಿಲ್ಲಿ: ದೇಶದಲ್ಲಿ ದಿನದಿಂದ ದಿನಕ್ಕೆ ಕೋವಿಡ್‌ 19 ಹಾವಳಿ ಹೆಚ್ಚುತ್ತಲೇ ಇರುವ ಹಿನ್ನೆಲೆಯಲ್ಲಿ ಮೇ 3ರಂದು ಕೂಡ ಲಾಕ್‌ಡೌನ್‌ ತೆರವಾಗುವ ಸಾಧ್ಯತೆ ತೀರಾ ಕಡಿಮೆ ಎಂದೇ ವಿಶ್ಲೇಷಿಸಲಾಗುತ್ತಿದೆ.

Advertisement

ಕೇಂದ್ರ ಆರೋಗ್ಯ ಸಚಿವಾಲಯ ಲಾಕ್‌ಡೌನ್‌ ಸಂಬಂಧ ಸಮಗ್ರ ಸಲಹೆ-ಸೂಚನೆಗಳನ್ನು ಹೊರಡಿಸಿದ್ದು, ಲಾಕ್‌ಡೌನ್‌, ಸೀಲ್‌ಡೌನ್‌, ಬಫ‌ರ್‌ ಝೋನ್‌ಗಳ ತೆರವಿನ ಬಗ್ಗೆ ಅಗತ್ಯ ಮಾರ್ಗಸೂಚಿ ನೀಡಿದೆ. ಇದರ ಪ್ರಕಾರ, ನಿಯಂತ್ರಿತ ವಲಯವೊಂದರಲ್ಲಿ ಕೊನೆಯ ನೆಗೆಟಿವ್‌ ಪ್ರಕರಣ ವರದಿಯಾದ ನಾಲ್ಕು ವಾರಗಳ ಅನಂತರವೇ ನಿರ್ಬಂಧ ತೆರವು ಮಾಡಬಹುದು. ಅಂದರೆ ಇಡೀ ಪ್ರದೇಶ ಕೋವಿಡ್‌ 19ದಿಂದ ಮುಕ್ತವಾದ ಒಂದು ತಿಂಗಳಿನ ಅನಂತರವಷ್ಟೇ ಆ ಪ್ರದೇಶದಲ್ಲಿ ಮುಕ್ತ ಓಡಾಟಕ್ಕೆ ಅವಕಾಶ ಸಿಗಲಿದೆ.

ಸದ್ಯ ದೇಶದ ಕೆಲವು ಕಡೆಗಳಲ್ಲಿ ಲಾಕ್‌ಡೌನನ್ನು ಇನ್ನೂ ಗಂಭೀರವಾಗಿ ಪರಿಗಣಿಸಿಲ್ಲ. ಆಗಾಗ ನಿರ್ಬಂಧ, ಸಾಮಾಜಿಕ ಅಂತರವನ್ನು ಮೀರಲಾಗುತ್ತಿದೆ. ಹೀಗಾಗಿ ಸೋಂಕುಪೀಡಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇದು ಹೀಗೆಯೇ ಮುಂದುವರಿದರೆ ಲಾಕ್‌ಡೌನ್‌ ತೆರವು ಇನ್ನಷ್ಟು ಮುಂದಕ್ಕೆ ಹೋಗಬಹುದಾಗಿದೆ.

ಬಫ‌ರ್‌ ವಲಯ
ನಿಯಂತ್ರಿತ ವಲಯದ ಸುತ್ತ ನಗರದಲ್ಲಾದರೆ 5 ಕಿ.ಮೀ. ಮತ್ತು ಗ್ರಾಮೀಣ ಪ್ರದೇಶದಲ್ಲಿ 7 ಕಿ.ಮೀ. ಪ್ರದೇಶವನ್ನು ಬಫ‌ರ್‌ ಝೋನ್‌ ಎಂದು ಗುರುತಿಸಲಾಗುತ್ತದೆ. ಇಲ್ಲಿ ಸದಾ ನಿಗಾ ವಹಿಸಿ ಸಾಮಾಜಿಕ ಅಂತರ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡಬೇಕು ಎಂದು ಸೂಚಿಸಲಾಗಿದೆ. ನಿಯಂತ್ರಿತ ವಲಯದ ಸುತ್ತಲಿನ 1 ಕಿ.ಮೀ. ಪ್ರದೇಶವನ್ನು ತೀವ್ರ ಬಫ‌ರ್‌ ವಲಯ ಎಂದು ಪರಿಗಣಿಸಿ ಮನೆ ಮನೆಗೆ ತೆರಳಿ ಪರೀಕ್ಷೆ ನಡೆಸಬೇಕು ಎಂಬ ಸೂಚನೆಯನ್ನೂ ನೀಡಲಾಗಿದೆ.

ಸೀಲ್‌ಡೌನ್‌ ಬಗ್ಗೆ ಸೂಚನೆ
ನಗರ ಪ್ರದೇಶಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸೀಲ್‌ಡೌನ್‌ ಹೇಗಿರಬೇಕು ಎಂಬ ಬಗ್ಗೆಯೂ ಸಂಪೂರ್ಣ ವಿವರ ನೀಡಲಾಗಿದೆ. ಇದರ ಪ್ರಕಾರ ಸೀಲ್‌ಡೌನ್‌ ಪ್ರದೇಶಗಳಲ್ಲಿ ಒಂದೇ ಆಗಮನ ಮತ್ತು ನಿರ್ಗಮನ ದ್ವಾರ ಇರಬೇಕು. ಯಾವುದೇ ಕಾರಣಕ್ಕೂ ಜನರು ಮನೆಯಿಂದ ಆಚೆ ಬರಬಾರದು, ಖಾಸಗಿ ವಾಹನ ಸಂಚಾರಕ್ಕೂ ಆಸ್ಪದ ಇಲ್ಲ. ಈ ಬಗ್ಗೆ ಪೊಲೀಸರೇ ಹೊಣೆ ಹೊರಬೇಕು ಎಂಬ ಸೂಚನೆ ನೀಡಲಾಗಿದೆ. ಕೇವಲ ತುರ್ತು ಸಂದರ್ಭಗಳಿಗಷ್ಟೇ ಪೊಲೀಸರು ಪಾಸ್‌ ನೀಡಬಹುದು ಎಂಬ ಅಂಶ ಸೇರಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next