Advertisement

ಲಾಕ್‌ಡೌನ್‌ ಇಲ್ಲ ಸೀಲ್‌ಡೌನ್‌ ಮಾತ್ರ ; ಕೈಮೀರಿದರೆ ಸರಕಾರ ಹೊಣೆ: ವಿಪಕ್ಷ

01:42 AM Jun 27, 2020 | Sriram |

ಬೆಂಗಳೂರು: ರಾಜಧಾನಿಯಲ್ಲಿ ಕೋವಿಡ್ 19 ಪೀಡಿತರು ಮತ್ತು ಸಾವು ಹೆಚ್ಚಾಗುತ್ತಿರುವ ಬೆನ್ನಲ್ಲೇ ಎಚ್ಚೆತ್ತ ಸರಕಾರವು ಸರ್ವ ಪಕ್ಷಗಳ ಪ್ರಮುಖರ ಸಭೆ ನಡೆಸಿ ಅಭಿ ಪ್ರಾಯ ಸಂಗ್ರಹಿಸಿದೆ. ಆದರೆ ಲಾಕ್‌ಡೌನ್‌ ಜಾರಿಗೊಳಿಸದಿರಲು ನಿರ್ಧರಿಸಿದ್ದು, ಬದಲಿಗೆ ಸೀಲ್‌ಡೌನ್‌ ವ್ಯಾಪ್ತಿ ವಿಸ್ತರಣೆ ಮತ್ತು ಸಮರ್ಪಕ ಸೋಂಕು ಪತ್ತೆ ಪರೀಕ್ಷೆ, ಚಿಕಿತ್ಸೆ ಹಾಗೂ ಹಾಸಿಗೆ ವ್ಯವಸ್ಥೆ ಹೊಂದಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಲು ಸಜ್ಜಾಗಿದೆ.

Advertisement

ಕೋವಿಡ್ 19 ಹೆಚ್ಚುತ್ತಿರುವ ಹಿನ್ನೆಲೆ ಯಲ್ಲಿ ಸಿಎಂ ಯಡಿಯೂರಪ್ಪ ಶುಕ್ರವಾರ ಸಚಿವರು, ಎಲ್ಲ ಪಕ್ಷಗಳ ಸಂಸದರು, ಶಾಸಕರ ಸಭೆ ನಡೆಸಿ ಮುಂದಿನ ಒಂದು ತಿಂಗಳ ಕಾಲ ಸೋಂಕು ನಿಯಂತ್ರಣಕ್ಕೆ ಕೈಗೊಳ್ಳ ಬೇಕಾದ ಕ್ರಮಗಳ ಬಗ್ಗೆ ಮುಕ್ತವಾಗಿ ಚರ್ಚೆ ನಡೆಸಿದರು.

ತಜ್ಞರ ಜತೆ ಸಿಎಂ ಸಭೆ
ಈ ಮಧ್ಯೆ ಶುಕ್ರವಾರ ಸಂಜೆ ತಜ್ಞ ವೈದ್ಯರೊಂದಿಗೆ ಸಮಾಲೋಚನೆ ನಡೆಸಿದ ಸಿಎಂ, ಕೋವಿಡ್‌-19 ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ 2-3 ದಿನಗಳಲ್ಲಿ ವರದಿ ನೀಡುವಂತೆ ಸೂಚಿಸಿದ್ದಾರೆ. ಆ ವರದಿ ಆಧರಿಸಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಸೋಂಕು ನಿಯಂತ್ರಣಕ್ಕೆ ಇನ್ನಷ್ಟು ಬಿಗಿ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

ಪರೀಕ್ಷಾ ಪ್ರಮಾಣ ಹೆಚ್ಚಳ
ರಾಜಧಾನಿಯಲ್ಲಿ ಸೋಂಕು ನಿಯಂತ್ರಣಕ್ಕೆ ಒತ್ತು ನೀಡಿರುವ ಸರಕಾರವು ನಿತ್ಯ ನಡೆಸುವ ಸೋಂಕು ಪತ್ತೆ ಪರೀಕ್ಷಾ ಪ್ರಮಾಣವನ್ನು 4,000ದಿಂದ 7,500ಕ್ಕೆ ಹೆಚ್ಚಿಸಲು ನಿರ್ಧರಿಸಿದೆ. ಜತೆಗೆ ಖಾಸಗಿ ಆಸ್ಪತ್ರೆ ತಪಾಸಣೆಯಲ್ಲಿ ಸೋಂಕು ದೃಢಪಟ್ಟವರಿಗೆ 8 ತಾಸುಗಳಲ್ಲಿ ಹಾಸಿಗೆ ವ್ಯವಸ್ಥೆ ಕಲ್ಪಿಸಲು ಪ್ರಯತ್ನಿಸುವುದಾಗಿ ಪ್ರಕಟಿಸಿದೆ.

ಆಯುರ್ವೇದ ಔಷಧ?
ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಆಯುರ್ವೇದ ಔಷಧ ನೀಡುವ ಬಗ್ಗೆ ಗಂಭೀರ ಚಿಂತನೆ ನಡೆಸಿದೆ. ಸೀಲ್‌ಡೌನ್‌ ಪ್ರದೇಶದ ಜನರಿಗೆ ಆಹಾರ, ವೈದ್ಯಕೀಯ ಸೇವೆ ಮತ್ತಿತರ ಅಗತ್ಯ ವಸ್ತು ಒದಗಿಸಲು ಪ್ರತೀ ವಾರ್ಡ್‌ ನಲ್ಲಿ ತಲಾ 25 ಲಕ್ಷ ರೂ. ಅನುದಾನ ಬಳಸಲು ತೀರ್ಮಾನಿಸಿದೆ.

Advertisement

ಸರಕಾರವೇ ಹೊಣೆ
ಲಾಕ್‌ಡೌನ್‌ ಜಾರಿಗೊಳಿಸುವಂತೆ ವಿಪಕ್ಷಗಳ ಸಲಹೆ ನೀಡಿದರೂ ಪರಿಗಣಿಸಿಲ್ಲ. ಹಾಗಾಗಿ ಸೋಂಕು ನಿಯಂತ್ರಣಕ್ಕೆ ಸರಕಾರ ಸೂಕ್ತ ಕ್ರಮ ಕೈಗೊಂಡಿರುವ ಬಗ್ಗೆ ವಿಶ್ವಾಸ ಮೂಡುತ್ತಿಲ್ಲ ಎಂದಿರುವ ಕಾಂಗ್ರೆಸ್‌, ಸಮಸ್ಯೆ ಉಲ್ಬಣಿಸಿದರೆ ಸರಕಾರವೇ ಹೊಣೆ ಎಂದಿದೆ.

ಲಾಕ್‌ಡೌನ್‌ ಪ್ರಶ್ನೆ ಇಲ್ಲ
ಲಾಕ್‌ಡೌನ್‌ ಮಾಡುವ ಪ್ರಶ್ನೆ ಇಲ್ಲ. ಕೆಲವು ಪ್ರದೇಶಗಳ ಸೀಲ್‌ಡೌನ್‌ ಬಿಟ್ಟರೆ ಬೇರೆ ಕಡೆ ಮಾಡುವುದಿಲ್ಲ. ರಾಜ್ಯದ ಆರ್ಥಿಕ ಪರಿಸ್ಥಿತಿ ಸುಧಾರಣೆಯೂ ಮುಖ್ಯ ಎಂದು ಸಿಎಂ ಯಡಿಯೂರಪ್ಪ ಅವರು ಹೇಳಿದರು.

ಇತ್ತೀಚೆಗೆ ಸೋಂಕು ಸ್ವಲ್ಪ ಹೆಚ್ಚಿದ್ದು, ಇದನ್ನು ತಡೆಯಲು ಎಲ್ಲರ ಸಹಕಾರ ಅಗತ್ಯವಿದೆ ಎಂದು ಸರ್ವಪಕ್ಷಗಳ ಸಂಸದರು, ಶಾಸಕರ ಸಭೆಗೂ ಮುನ್ನ ಯಡಿಯೂರಪ್ಪ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next