ಬೆಂಗಳೂರು: ಲಾಕ್‌ಡೌನ್ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಇತರ ಯಾವುದೇ ಸಮುದಾಯಕ್ಕೆ ಸದ್ಯಕ್ಕೆ ಪ್ಯಾಕೇಜ್ ಘೋಷಿಸುವ ಪ್ರಸ್ತಾವನೆ ಸರಕಾರದ ಮುಂದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಿಳಿಸಿದ್ದಾರೆ. ಸರಕಾರವು ಈಗಾಗಲೇ ಶಕ್ತಿ ಮೀರಿ ಏನೆಲ್ಲ ಸಾಧ್ಯವೋ ಅಷ್ಟು ಪರಿಹಾರ ಘೋಷಿಸಿದೆ. ಹೀಗಾಗಿ ಮತ್ತೆ ಪ್ಯಾಕೇಜ್ ಘೋಷಿಸುವುದಿಲ್ಲ ಎಂದು ಹೇಳಿದ್ದಾರೆ.
ಮಾಜಿ ಪ್ರಧಾನಿ ದಿವಂಗತ ಪಂಡಿತ್ ಜವಾಹರಲಾಲ್ ನೆಹರೂ ಅವರ 56ನೇ ಪುಣ್ಯತಿಥಿ ಅಂಗವಾಗಿ ವಿಧಾನಸೌಧ ಆವರಣದ ನೆಹರೂ ಪ್ರತಿಮೆಗೆ ಪುಷ್ಪ ಅರ್ಪಿಸಿ ಗೌರವ ಸಲ್ಲಿಸಿದ ಅನಂತರ ಮಾತನಾಡಿದ ಅವರು, ಈಗ ಘೋಷಿಸಿರುವ ಪ್ಯಾಕೇಜ್ ತಲುಪಿಸುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.
ದೇವಸ್ಥಾನಗಳನ್ನು ತೆರೆಯುವ ತೀರ್ಮಾನ ಮಾಡಿ ಚರ್ಚ್, ಮಸೀದಿ ಯಾಕೆ ತೆರೆ ಯುವು ದಿಲ್ಲ ಎಂಬ ವಿಪಕ್ಷ ಗಳ ಟೀಕೆಗೆ ಉತ್ತರಿಸಿದ ಅವರು, ದೇವಾ ಲಯ ಗಳು ತೆರೆಯ ಬಹುದು ಎಂದರೆ ಚರ್ಚ್ ಮತ್ತು ಮಸೀದಿಗಳು ತೆರೆಯುತ್ತವೆ ಎಂದೇ ಅರ್ಥ ಎಂದು ಹೇಳಿದರು.
ಜೂ. 1ರಿಂದ ಧರ್ಮಸ್ಥಳದಲ್ಲೂ ದೇವರ ದರ್ಶನಕ್ಕೆ ಅವಕಾಶ ಕೊಡುವು ದಾಗಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಹೇಳಿದ್ದಾರೆ. ಸುರಕ್ಷತಾ ಕ್ರಮಗಳೊಂದಿಗೆ ಕೇವಲ ದರ್ಶನಕ್ಕೆ ಮಾತ್ರ ಅವಕಾಶವಿದ್ದು, ಅಲ್ಲಿ ಉಳಿದುಕೊಳ್ಳಲು ಅವಕಾಶ ಇರುವುದಿಲ್ಲ ಎಂದು ಹೇಳಿದರು.
ಇನ್ನು ಮುಂದೆ ಕೋವಿಡ್‌ನೊಂದಿಗೆ ನಾವು ಬದುಕಬೇಕಾಗಿದೆ. ಸುರಕ್ಷತೆ ವಹಿಸಿ ಎಲ್ಲ ವಹಿವಾಟು, ಚಟುವಟಿಕೆ ಪ್ರಾರಂಭಿಸಬೇಕಾಗಿದೆ. ಕೆಲವೊಂದು ಕೇಂದ್ರದ ಮಾರ್ಗದರ್ಶನದಡಿ ನಡೆಯ ಬೇಕಾಗುತ್ತದೆ ಎಂದರು.