Advertisement

ಲಾಕ್‌ಡೌನ್‌, ನೈಟ್‌ ಕರ್ಫ್ಯೂ ಪರಿಹಾರವಲ್ಲ: ಸಚಿವ ಜೋಶಿ

05:16 PM Apr 18, 2021 | Team Udayavani |

 ಹುಬ್ಬಳ್ಳಿ: ಕೋವಿಡ್‌-19 ನಿಯಂತ್ರಣಕ್ಕೆ ಲಾಕ್‌ಡೌನ್‌, ನೈಟ್‌ ಕರ್ಫ್ಯೂ ಒಂದೇ ಪರಿಹಾರವಲ್ಲ. ಸೋಂಕು ನಿಯಂತ್ರಣಕ್ಕೆ ಅಗತ್ಯವಾದ ಎಲ್ಲಾ ಸೌಲಭ್ಯಗಳನ್ನು ಹೊಂದಿದ್ದೇವೆ. ಯಾವುದೇ ಕಾರಣಕ್ಕೂ ಲಾಕ್‌ಡೌನ್‌ ಅಗತ್ಯವಿಲ್ಲ ಎಂದು ಕೇಂದ್ರ ಸಂಸದೀಯ ವ್ಯವಹಾರಗಳು, ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ ಜೋಶಿ ತಿಳಿಸಿದರು.

Advertisement

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷ ದೇಶದಲ್ಲಿ ಸೋಂಕು ಕಾಣಿಸಿಕೊಂಡ ಸಂದರ್ಭದಲ್ಲಿ ಯಾವುದೇ ಪೂರ್ವ ಸಿದ್ಧತೆ ಇರಲಿಲ್ಲ. ಚಿಕಿತ್ಸೆಗೆ ಬೇಕಾದ ಎನ್‌-95 ಮಾಸ್ಕ್, ಪಿಪಿಇ ಕಿಟ್‌ ಸೇರಿದಂತೆ ಸಣ್ಣ ಪುಟ್ಟ ವೈದ್ಯಕೀಯ ಪರಿಕರಗಳು ನಮ್ಮಲ್ಲಿರಲಿಲ್ಲ. ಆದರೆ ಇಂದಿನ ಪರಿಸ್ಥಿತಿ ಹಿಂದಿನಂತೆ ಇಲ್ಲ. ವೆಂಟಿಲೇಟರ್‌ನಿಂದ ಹಿಡಿದು ಪ್ರತಿಯೊಂದು ವ್ಯವಸ್ಥೆ ಮಾಡಿಕೊಂಡಿದ್ದೇವೆ. ಆಕ್ಸಿಜೆನ್‌ಗೆ ಯಾವುದೇ ಕೊರತೆಯಾಗಿಲ್ಲ. ಹೀಗಾಗಿ ಈ ಬಾರಿ ಯಾವುದೇ ಕಾರಣಕ್ಕೂ ಲಾಕ್‌ಡೌನ್‌, ನೈಟ್‌ ಕರ್ಫ್ಯೂ ಅಗತ್ಯವಿಲ್ಲ ಎಂದರು.

ಜನರಲ್ಲಿ ನಿರ್ಲಕ್ಷ್ಯ ಬೇಡ:

ಸೋಂಕಿನ ಬಗ್ಗೆ ಜನರಲ್ಲಿ ನಿರ್ಲಕ್ಷé ಹಾಗೂ ಭಯ ಬೇಡ. ಲಸಿಕೆ, ಪರೀಕ್ಷೆ, ಚಿಕಿತ್ಸೆ ಮೂರರ ಬಗ್ಗೆ ಕಾಳಜಿ ಇರಲಿ. ಸೋಂಕು ಕಾಣಿಸಿಕೊಂಡರೆ ಕೂಡಲೆ ಪರೀಕ್ಷೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯಬೇಕು. ಹಿಂದಿನ ವರ್ಷಕ್ಕೆ ಹೋಲಿಸಿದರೆ ಸಾವಿನ ಪ್ರಮಾಣ ಸಾಕಷ್ಟು ಕಡಿಮೆಯಿದೆ. ಆದರೆ ಎರಡನೇ ಅಲೆ ಹಬ್ಬುವಿಕೆ ತೀವ್ರವಾಗಿದೆ. ಹೀಗಾಗಿ ಜನರು ಸರಕಾರ ಜಾರಿಗೆ ತಂದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಜಿಲ್ಲೆಯಲ್ಲಿ ಅಗತ್ಯವಾದ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸೋಂಕು ನಿಯಂತ್ರಿಸುವಲ್ಲಿ ಸಾರ್ವಜನಿಕರ ಪಾತ್ರ ಬಹು ದೊಡ್ಡದು ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಮಾತನಾಡಿ, ಜಿಲ್ಲೆಯಲ್ಲಿ ಕೋವಿಡ್‌-19 ನಿಯಂತ್ರಣ, ಜಾಗೃತಿ, ಚಿಕಿತ್ಸೆ, ಲಸಿಕೆ ಪ್ರತಿಯೊಂದು ವಿಷಯಗಳನ್ನು ಗಂಭೀರವಾಗಿ ತೆಗೆದುಕೊಂಡು ಸಿದ್ಧತೆ ಮಾಡಿಕೊಳ್ಳಲಾಗಿದೆ. ಸರಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆ ಮೀಡಲಿರುವ ಕುರಿತು ಚರ್ಚಿಸಲಾಗಿದೆ. ಈಗಾಗಲೇ ಹುಬ್ಬಳ್ಳಿ, ಧಾರವಾಡದಲ್ಲಿ ತಲಾ ಒಂದು ಕೋವಿಡ್‌ ಕೇರ್‌ ಸೆಂಟರ್‌ ಆರಂಭಿಸಲಾಗಿದೆ. 18 ಜನರು ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶೇ.70 ಜನರು ಹೋಮ್‌ ಐಸೋಲೇಶನ್‌ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.

Advertisement

ಈ ಹಿಂದೆ ಒಂದು ಸೋಂಕಿತ ಪ್ರಕರಣ ಪತ್ತೆಯಾದಾಗ ಸುತ್ತಲಿನ 3 ಕಿ.ಮೀ. ಪ್ರದೇಶ ಸೀಲ್‌ಡೌನ್‌ ಮಾಡಲಾಗಿತ್ತು. ಆದರಿಂದು ಸೋಂಕಿತರ ಪ್ರಮಾಣ ದಿನಕ್ಕೆ 200 ದಾಟಿದರು ಅಂತಹ ಪರಿಸ್ಥಿತಿಯಿಲ್ಲ. ಕಾರಣ ಲಸಿಕೆ, ಪರೀಕ್ಷೆ ಹಾಗೂ ಚಿಕಿತ್ಸೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪ್ರಕರಣ ನೋಡಿಕೊಂಡು ಹಾಸಿಗೆ ಹೆಚ್ಚಿಸುವ ನಿಟ್ಟಿನಲ್ಲೂ ತಯಾರಿ ಮಾಡಿಕೊಳ್ಳಲಾಗಿದೆ. ಜಿಲ್ಲಾಡಳಿತ, ಆರೋಗ್ಯ ಇಲಾಖೆ ಸೇರಿದಂತೆ ಎಲ್ಲಾ ಇಲಾಖೆಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಸಚಿವರು ಸಾರ್ವಜನಿಕರು ಸೋಂಕು ಹರಡದಂತೆ ಎಚ್ಚರ ವಹಿಸುವಲ್ಲಿ ದೊಡ್ಡ ಪಾತ್ರ ಎಂದರು.

ಜಿಲ್ಲಾಧಿಕಾರಿ ನಿತೇಶ ಪಾಟೀಲ, ಮಹಾನಗರ ಪೊಲೀಸ್‌ ಆಯುಕ್ತ ಲಾಭೂ ರಾಮ, ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ, ಜಿಪಂ ಸಿಇಒ ಡಾ|ಬಿ. ಸುಶೀಲಾ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next