ಹೊಸದಿಲ್ಲಿ: ಕೋವಿಡ್ 19 ಸೋಂಕು ಪ್ರಸರಣವನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರಸ್ತುತ ದೇಶದಲ್ಲಿ ಜಾರಿಯಲ್ಲಿರುವ ಲಾಕ್‌ಡೌನ್ ಅವಧಿಯಲ್ಲಿ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಹಾಗೂ ಹಿರಿಯ ಸ್ಪಿನ್ನರ್ ಆರ್. ಅಶ್ವಿನ್ ಅವರು ತಮ್ಮ ಅಕಾಡೆಮಿಗಳಲ್ಲಿ ಆನ್‌ಲೈನ್ ಕ್ರಿಕೆಟ್ ತರಬೇತಿ ಕಾರ್ಯಕ್ರಮಗಳಿಗೆ ಅವಕಾಶ ಕಲ್ಪಿಸಿದ್ದಾರೆ.
ಎಂ.ಎಸ್. ಧೋನಿ ಕ್ರಿಕೆಟ್ ಅಕಾಡೆಮಿ ಕಾರ್ಯಕ್ರಮದಲ್ಲಿ ಕೂಲ್ ಕ್ಯಾಪ್ಟನ್ ನೇರವಾಗಿ ಭಾಗಿಯಾಗಿಲ್ಲ. ಆದರೆ, ಕಳೆದ ಒಂದು ವಾರದಿಂದ ತನ್ನ ತರಬೇತುದಾರರಿಗೆ ಫೇಸ್‌ಬುಕ್ ಲೈವ್ ತರಗತಿಗಳಿಗೆ ಅವಕಾಶ ಕಲ್ಪಿಸಿದ್ದಾರೆ. ಅಶ್ವಿನ್ ಅವರು ತಮ್ಮ ಅಕಾಡೆಮಿಯಲ್ಲಿ ಆನ್‌ಲೈನ್ ಸ್ಪಿನ್ ಬೌಲಿಂಗ್ ಬಗ್ಗೆ ನೇರವಾಗಿ ತರಬೇತಿಗಳನ್ನು ನೀಡುತ್ತಿದ್ದಾರೆ ಎಂದು ವರದಿಯಾಗಿದೆ.
ಭಾರತ ದೇಶದಲ್ಲಿ ಕ್ರಿಕೆಟ್ ಅಪಾರ ಮೆಚ್ಚುಗೆ ಗಳಿಸಿದೆ. ಅದೆಷ್ಟೋ ಕ್ರೀಡಾ ಪಟುಗಳಿಗೆ ತರಬೇತಿಯ ಕೊರತೆ ಕಾಡುತ್ತಿರುತ್ತದೆ. ಹೀಗಿರುವಾಗ ಧೋನಿ ಮತ್ತು ಅಶ್ವಿನ್ ಅವರ ಕಾರ್ಯ ಶ್ಲಾಘನೀಯವಾದುದು. ಇವರ ತರಬೇತಿಯಿಂದ ಇನ್ನೂ ಹೆಚ್ಚಿನ ಪ್ರತಿಭಾವಂತರು ಕ್ರಿಕೆಟ್ ಕ್ರೀಡೆಯ ಬಗ್ಗೆ ಆಸಕ್ತಿ ಪಡೆಯಲು ಇದು ನೆರವಾಗುತ್ತದೆ.
ಮಾಜಿ ಪ್ರಥಮ ದರ್ಜೆ ಕ್ರಿಕೆಟಿಗ ಮತ್ತು ಧೋನಿ ಅಕಾಡೆಮಿಯ ಮುಖ್ಯ ತರಬೇತುದಾರ ಸತ್ರಜಿತ್ ಲಾಹಿರಿ ಅವರು ಪೋಸ್ಟ್ ಮಾಡಿದ ಪ್ರತಿ ವೀಡಿಯೊ ತುಣುಕನ್ನು ಸಾಮಾಜಿಕ ಜಾಲತಾಣದಲ್ಲಿ ಸರಿ ಸುಮಾರು ಹತ್ತು ಸಾವಿರ ವೀಕ್ಷಿಸುತ್ತಿದ್ದಾರೆ ಎಂದು ಲಾಹಿರಿ ಹೇಳಿದ್ದಾರೆ.
“ಕ್ರಿಕೆಟರ್’ ಎನ್ನುವ ಅಪ್ಲಿಕೇಶನ್ ಅನ್ನು ತರಬೇತಿಗೆ ಬಳಸುತ್ತಿದ್ದು ಅದರಲ್ಲಿ ತಮ್ಮ ಡೆಮೊ ಡ್ರಿಲ್‌ಗಳನ್ನು ಅಪ್ಲೋಡ್ ಮಾಡುತ್ತಿರುವುದಾಗಿ ಲಾಹಿರಿ ತಿಳಿಸಿದ್ದಾರೆ. ಉಳಿದಂತೆ ತರಬೇತಿ ಪಡೆಯುವ ಆಸಕ್ತರು ತಮ್ಮ ವೀಡಿಯೊಗಳನ್ನು ಈ ಆ್ಯಪ್‌ನಲ್ಲಿ ಅಪ್ಲೋಡ್ ಕೂಡ ಮಾಡಬಹುದು. ಇದನ್ನು ನಾವು ನೋಡಿ ಕೆಲವು ಸಲಹೆಯನ್ನು ನೀಡುತ್ತೇವೆ ಎಂದು ಲಾಹಿರಿ ತಿಳಿಸಿದ್ದಾರೆ.