Advertisement
ಕೆಲ ರಾಜ್ಯಗಳಲ್ಲಿ ಹಠಾತ್ತನೆ ಏರಿಕೆಈಗ ದೇಶದ 18 ರಾಜ್ಯಗಳಲ್ಲಿ 1 ಸಾವಿರಕ್ಕೂ ಅಧಿಕ ಪ್ರಕರಣಗಳು ಇದ್ದು, ಇವುಗಳಲ್ಲಿ 11 ರಾಜ್ಯಗಳಲ್ಲಿ ರೋಗ ದ್ವಿಗುಣಗೊಳ್ಳುವ ವೇಗ ರಾಷ್ಟ್ರೀಯ ಸರಾಸರಿಗಿಂತಲೂ ಅಧಿಕವಿದೆ. ಅತಿ ಕಡಿಮೆ ವೇಗ ದಾಖಲಾಗಿರುವುದು ಪಂಜಾಬ್‌ನಲ್ಲಿ. ಪ್ರಸಕ್ತ ಪಂಜಾಬ್‌ನಲ್ಲಿ ಪ್ರತಿ 47 ದಿನಕ್ಕೆ ಸೋಂಕಿತರ ಸಂಖ್ಯೆ ದ್ವಿಗುಣಗೊಳ್ಳುತ್ತಿದೆ! ಆದಾಗ್ಯೂ, ಗಮನಿಸಬೇಕಾದ ಅಂಶವೆಂದರೆ, ಆ ರಾಜ್ಯದಲ್ಲಿ ಜೂನ್ 2ರ ವೇಳೆಗೆ 2342 ಪ್ರಕರಣಗಳು ಪತ್ತೆಯಾದರೆ, ಅದರಲ್ಲಿ ಈಗಾಗಲೇ 2017 ಜನ ಚೇತರಿಸಿಕೊಂಡಿದ್ದಾರೆ. ಟಾಪ್ 5 ಕೋವಿಡ್ ಹಾಟ್‌ಸ್ಪಾಟ್‌ಗಳಲ್ಲಿ ಒಂದಾಗಿರುವ ಗುಜರಾತ್‌ನಲ್ಲಿ 2 ವಾರಗಳಿಂದ ರೋಗ ಬೆಳವಣಿಗೆ ದರವು ತಗ್ಗಿದ್ದು, ಇದೇ ವೇಗದಲ್ಲೇ ಮುಂದುವರಿದರೆ, ಆ ರಾಜ್ಯದಲ್ಲಿ ಪ್ರತಿ 27 ದಿನಕ್ಕೆ ಪ್ರಕರಣಗಳ ಸಂಖ್ಯೆ ದ್ವಿಗುಣಗೊಳ್ಳಲಿದೆ. ಅಂತೆಯೇ ಈಗಿನ ರೋಗವೇಗವನ್ನು ಗಮನಿಸಿದರೆ ತಮಿಳುನಾಡಿನಲ್ಲಿ 14 ದಿನಕ್ಕೆ, ದಿಲ್ಲಿಯಲ್ಲಿ 12 ದಿನಕ್ಕೆ ರೋಗ ದ್ವಿಗುಣಗೊಳ್ಳಲಿದೆ. ಗಮನಾರ್ಹ ಸಂಗತಿಯೆಂದರೆ, ಈಶಾನ್ಯ ರಾಜ್ಯಗಳಲ್ಲಿ ಹಠಾತ್ತನೆ ಕೊರೊನಾ ಪ್ರಕರಣಗಳ ಸಂಖ್ಯೆ ರಾಷ್ಟ್ರೀಯ ಸರಾಸರಿಗೆ ಹೋಲಿಸಿದರೆ, ಬಹಳ ಬೇಗನೇ ದ್ವಿಗುಣಗೊಂಡಿದೆ. ಆದರೆ ಬಹುತೇಕ ಸೋಂಕಿತರು ಮುಂಬೈ, ದಿಲ್ಲಿಯಿಂದ ಹಿಂದಿರುಗಿದವರೇ ಆಗಿದ್ದಾರೆ.
ಒಟ್ಟಾರೆಯಾಗಿ ನೋಡಿದರೆ ಭಾರತದಲ್ಲಿ ಕೋವಿಡ್ ಪ್ರಕರಣಗಳು ದ್ವಿಗುಣಗೊಳ್ಳಲು ಅಧಿಕ ಸಮಯ ಹಿಡಿಯುತ್ತಿದೆ ಎನ್ನುವುದು ಉತ್ತಮ ಸಂಗತಿ. ಆದರೆ ಈಗ ಲಾಕ್‌ಡೌನ್ ನಿರ್ಬಂಧಗಳು ಸಡಿಲಗೊಂಡಿರುವುದರಿಂದಾಗಿ, ಮುಂದಿನ ದಿನಗಳಲ್ಲಿ ಪರಿಸ್ಥಿತಿ ಹೇಗಿರಬಹುದೋ ಎಂಬ ಆತಂಕ ಎದುರಾಗಿದೆ. ಮೊದಲ ಹಂತದ ಲಾಕ್‌ಡೌನ್‌ನಲ್ಲಿ (ಮಾರ್ಚ್ 25-ಎಪ್ರಿಲ್ 14), ಪ್ರಕರಣಗಳು ಪ್ರತಿ 5 ದಿನಕ್ಕೆ ದ್ವಿಗುಣಗೊಂಡವು. ಎರಡನೇ ಹಂತದ ಲಾಕ್‌ಡೌನ್‌ನಲ್ಲಿ (ಎಪ್ರಿಲ್ 15-ಮೇ 3), ಸೋಂಕು ಹರಡುವಿಕೆ ವೇಗ ತಗ್ಗಿ, ಪ್ರಕರಣಗಳು ಪ್ರತಿ 10 ದಿನಕ್ಕೆ ದ್ವಿಗುಣಗೊಳ್ಳಲಾರಂಭಿಸಿದವು. ಮೂರನೇ ಹಂತದ ಲಾಕ್‌ಡೌನ್‌ನಲ್ಲಿ (ಮೇ 4-ಮೇ 17), ಪ್ರತಿ 12 ದಿನಕ್ಕೊಮ್ಮೆ ಪ್ರಕರಣಗಳು ದ್ವಿಗುಣಗೊಂಡರೆ ಲಾಕ್‌ಡೌನ್ ನಾಲ್ಕನೇ ಚರಣದಲ್ಲಿ
(ಮೇ 18-ಮೇ 31), ಪ್ರಕರಣಗಳು ದ್ವಿಗುಣಗೊಳ್ಳಲು 14 ದಿನ ಹಿಡಿದವು. ನಾಲ್ಕನೇ ಚರಣದಲ್ಲಿ ಹೇಗಿತ್ತು ಸ್ಥಿತಿ?
ಲಾಕ್‌ಡೌನ್ 4.0 ಅವಧಿಯಲ್ಲಿ ಪ್ರಕರಣಗಳ ದ್ವಿಗುಣಗೊಳ್ಳುವ ವೇಗ ತಗ್ಗಿದ್ದರೂ, ಪ್ರಕರಣಗಳ ಸಂಖ್ಯೆ ಅಧಿಕವಾಯಿತು. ಇದಕ್ಕೆ ದೇಶಾದ್ಯಂತ ನಡೆಸಲಾದ ವ್ಯಾಪಕ ಟೆಸ್ಟಿಂಗ್ ಕೂಡ ಒಂದು ಕಾರಣ ಎನ್ನಲಾಗುತ್ತದೆ. ಲಾಕ್‌ಡೌನ್ ಮೂರನೇ ಚರಣದ ಅಂತ್ಯದ ವೇಳೆಗೆ ದೇಶದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 91000ಕ್ಕೂ ತುಸು ಕಡಿಮೆಯಿತ್ತು. ನಾಲ್ಕನೇ ಚರಣದ ಅಂತ್ಯದ ವೇಳೆಗೆ (ಮೇ 31) ಪ್ರಕರಣಗಳ ಸಂಖ್ಯೆ 1,90,500 ತಲುಪಿತು. ಇದರರ್ಥ, ನಾಲ್ಕನೇ ಚರಣದಲ್ಲಿ ಪ್ರತಿ ಗಂಟೆಗೆ ಸರಾಸರಿ 296 ಪ್ರಕರಣಗಳು ಪತ್ತೆಯಾಗಿವೆ. ಲಾಕ್‌ಡೌನ್ ನಾಲ್ಕನೇ ಚರಣದಲ್ಲಿ ಮೃತಪಟ್ಟವರ ಸಂಖ್ಯೆಯಲ್ಲೂ ಏರಿಕೆಯಾಯಿತಾದರೂ, ಚೇತರಿಸಿಕೊಂಡವರ ಪ್ರಮಾಣವೂ ಈ ಅವಧಿಯಲ್ಲೇ ಅಧಿಕವಿತ್ತು ಎನ್ನುವುದು ಗಮನಾರ್ಹ. ಮೇ 18-ಮೇ 31ರ ಸಂಜೆಯ ವೇಳೆಗೆ ದೇಶದಲ್ಲಿ 57,600ಕ್ಕೂ ಅಧಿಕ ಜನ ಚೇತರಿಸಿಕೊಂಡರು.
Related Articles
ಭಾರತಕ್ಕೆ ಹೋಲಿಸಿದರೆ ಅನೇಕ ರಾಷ್ಟ್ರಗಳಲ್ಲಿ ನಿತ್ಯ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದೆ. ಅದರಲ್ಲೂ ಇಟಲಿ, ಬ್ರಿಟನ್ ಮತ್ತು ಟರ್ಕಿಯಲ್ಲಿ ಸೋಂಕಿತರ ಸಂಖ್ಯೆ ಗಮನಾರ್ಹವಾಗಿ ತಗ್ಗುತ್ತಿದ್ದು, ಇನ್ನೊಂದೆಡೆ ರಷ್ಯಾದಲ್ಲೂ ಸೋಂಕಿತರ ನಿತ್ಯ ಸಂಖ್ಯೆ ಕಡಿಮೆಯಾಗುತ್ತಿದೆ (ಆದರೆ ಈಗಲೂ ಭಾರತಕ್ಕಿಂತ ಅಧಿಕ ಪ್ರಕರಣಗಳು ಅಲ್ಲಿ ವರದಿಯಾಗುತ್ತಿವೆ). ಹಾಗಿದ್ದರೆ, ಈ ದೇಶಗಳಲ್ಲೆಲ್ಲ ಕೊರೊನಾ ಉತ್ತುಂಗಕ್ಕೆ ಏರಿ ಇಳಿಯಿತೇ? ಎನ್ನುವ ಪ್ರಶ್ನೆ ಈಗ ತಜ್ಞರಿಗೆ ಎದುರಾಗುತ್ತಿದೆ. ಏಕೆಂದರೆ, ಭಾರತದಲ್ಲಿ ಈ ಪ್ರಮಾಣದಲ್ಲಿ ಸೋಂಕು ಏರುತ್ತಿದ್ದರೂ, ರೋಗ ಇನ್ನೂ ಉತ್ತುಂಗಕ್ಕೇರಲು ಕೆಲವು ವಾರಗಳೇ ಹಿಡಿಯಬಹುದು ಎಂದು ಪರಿಣತರು ಎಚ್ಚರಿಸುತ್ತಿದ್ದಾರೆ. ಹಾಗೇನಾದರೂ ಆದರೆ ಆಗ ನಿತ್ಯ ಎಷ್ಟು ಸೋಂಕಿತರು ಪತ್ತೆಯಾಗಬಹುದು ಎನ್ನುವ ಪ್ರಶ್ನೆ ಎದುರಾಗುತ್ತದೆ. ರಷ್ಯಾದತ್ತ ನೋಡುವುದಾದರೆ, ಅಲ್ಲಿ ರೋಗ ಉತ್ತುಂಗಕ್ಕೇರಿದ್ದು ಮೇ 11ರಂದು. ಅಂದು ಆ ದೇಶದಲ್ಲಿ 11, 656 ಪ್ರಕರಣಗಳು ದಾಖಲಾಗಿದ್ದವು. ಇದೇನೇ ಇದ್ದರೂ ಈ ರಾಷ್ಟ್ರಗಳೆಲ್ಲ ಕೊರೊನಾ ಎರಡನೆಯ ಅಲೆಗೆ ಸಿದ್ಧವಾಗಬೇಕು ಎಂದು ಪರಿಣತರು ಎಚ್ಚರಿಸುತ್ತಿದ್ದಾರೆ.
Advertisement