Advertisement

ಅನಗತ್ಯ ಪೇಟೆಗೆ ಬಂದರೆ ಪೊಲೀಸ್‌ ವಶಕ್ಕೆ !

10:58 PM May 03, 2021 | Team Udayavani |

ಉಡುಪಿ/ ಕುಂದಾಪುರ: ದಿನಸಿ ಅಂಗಡಿಗಳು ತೆರೆದಿಡುವ ಸಮಯವನ್ನು 10 ಗಂಟೆಯ ಬದಲಿಗೆ 12ರ ವರೆಗೆ ವಿಸ್ತರಿಸಿದ್ದು ಕೆಲವರಿಗೆ ಅನುಕೂಲವಾಗಿದೆ. ಅನಗತ್ಯ ಪೇಟೆಗೆ ಬಂದವರನ್ನು ಪೊಲೀಸರು ವಶಕ್ಕೆ ತೆಗೆದುಕೊಳ್ಳುತ್ತಿದ್ದು ವಾಹನಗಳನ್ನೂ ವಶಪಡಿಸಿಕೊಳ್ಳುತ್ತಿದ್ದಾರೆ.

Advertisement

ದಿನಸಿ ಕೊಳ್ಳುವಾಗ ನೂಕು ನುಗ್ಗಲಾಗುತ್ತದೆ, ಜನದಟ್ಟಣೆ ಹೆಚ್ಚಾಗುತ್ತದೆ, ಸಾಮಾಜಿಕವಾಗಿ ದೈಹಿಕ ಅಂತರ ಮರೆಯಾಗುತ್ತದೆ ಎಂಬ ಕಾರಣದಿಂದ ಸರಕಾರ ನಿಯಮಾವಳಿಯನ್ನು ಕೊಂಚ ಸಡಿಲಿಸಿತ್ತು. ಆದರೆ ಅದನ್ನೇ ಬಂಡವಾಳ ಮಾಡಿಕೊಂಡ ಕೆಲವರು 12 ಗಂಟೆಯವರೆಗೆ ಬೀದಿ ತಿರುಗಲು ಸಿಕ್ಕ ಅವಕಾಶ ಎಂದು ಬಳಸಿ ಕೊಳ್ಳತೊಡಗಿದ್ದಾರೆ.

ಉಡುಪಿಯ ಸಂತೆಕಟ್ಟೆ ಹಾಗೂ ಕುಂದಾಪುರ ಫಿಶ್‌ ಮಾರ್ಕೆಟ್‌ ರಸ್ತೆಯಲ್ಲಿ ರವಿವಾರ ವಾಹನ ದಟ್ಟಣೆ ಉಂಟಾದ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದಂತೆಯೇ ಎಚ್ಚೆತ್ತ ಪೊಲೀಸರು ಸೋಮವಾರ ಕಠಿನ ಕ್ರಮ ಕೈಗೊಂಡಿದ್ದಾರೆ. ಜಿಲ್ಲೆಯ ಚೆಕ್‌ಪೋಸ್ಟ್‌ ಗಳಲ್ಲಿ ವಾಹನಗಳನ್ನು ತಡೆದು ತಪಾಸಣೆ ನಡೆಸಿ ಅಗತ್ಯ ಇರುವವರನ್ನು, ಸಕಾರಣವಾಗಿ ಬಂದವರನ್ನು ಮಾತ್ರ ಬಿಟ್ಟಿದ್ದಾರೆ. ಉಳಿದಂತೆ 12ರವರೆಗೆ ಪೇಟೆಗೆ ಬರಲು ಅವಕಾಶ ಇದೆ ಎಂದು “ಕಾನೂನು’ ಮಾತಾಡಿದವರನ್ನು ಠಾಣೆಗೆ ಕರೆದೊಯ್ದಿದ್ದಾರೆ.

ಮುಂದುವರಿದ ತಪಾಸಣೆ :

ಅನಗತ್ಯ ಸಂಚರಿಸುವವರ ವಾಹನಗಳನ್ನು ತಪಾಸಣೆ ಮಾಡಲಾಗುತ್ತಿದೆ. ಸೋಮವಾರವೂ ಪೊಲೀಸರ ಈ ಕಾರ್ಯಾಚರಣೆ ಮುಂದುವರಿಯಿತು. ಉಡುಪಿ ಟ್ರಾಫಿಕ್‌ ಪೊಲೀಸ್‌ ಠಾಣೆಯ ನಿರೀಕ್ಷಕ ಅಬ್ದುಲ್‌ ಖಾದರ್‌ ಅವರು ನಗರದ ಸಂತೆಕಟ್ಟೆ, ಸರ್ವೀಸ್‌ ಬಸ್‌ತಂಗುದಾಣ, ಕಲ್ಸಂಕ ವೃತ್ತಗಳಲ್ಲಿ ವಾಹನಗಳನ್ನು ತಡೆದು ದಾಖಲೆಪತ್ರಗಳನ್ನು ಪರಿಶೀಲಿಸಿದರು. ಸೂಕ್ತ ದಾಖಲೆಪತ್ರ ಹಾಗೂ ವಿನಾಕಾರಣ ಸುತ್ತಾಡುತ್ತಿದ್ದವರಿಗೆ ದಂಡ ವಿಧಿಸಲಾಯಿತು.

Advertisement

ಗೊಂದಲ :

ದಿನಸಿ ಅಂಗಡಿಗಳನ್ನು 12ರ ವರೆಗೆ ತೆರೆದಿಡಬಹುದು, ತಳ್ಳುಗಾಡಿ ತರಕಾರಿ ಸಂಜೆವರೆಗೆ ಮಾರಾಟ ಮಾಡಬಹುದು ಎಂದು ಸುತ್ತೋಲೆಯಲ್ಲಿ ಹೇಳಿದೆ. ಅದನ್ನು ನಂಬಿ ತರಕಾರಿ ಅಂಗಡಿ 10 ಗಂಟೆಯ ಬಳಿಕ ತೆರೆದಿಟ್ಟವರನ್ನು ಸ್ಥಳೀಯಾಡಳಿತದವರು ಮುಚ್ಚಿಸಿದ್ದಾರೆ. ಗ್ರಾಮಾಂತರದಲ್ಲಿ ಪೊಲೀಸರು ದಿನಸಿ ಅಂಗಡಿಗಳನ್ನು ಕೂಡ ಮುಚ್ಚಿಸಿದ್ದಾರೆ. ತಮಗೆ ಯಾವುದೇ ಬಗೆಯ ಆದೇಶ ಬಂದಿಲ್ಲ ಎಂದು ಹೇಳಿ 10 ಗಂಟೆಯ ಅನಂತರ ದಿನಸಿ ಅಂಗಡಿಗಳು ಕೂಡ ತೆರೆದಿಡಬಾರದು ಎಂದು ಮುಚ್ಚಿಸುತ್ತಿದ್ದಾರೆ. ಈ ಕುರಿತು ಜಿಲ್ಲೆಯ ವಿವಿಧೆಡೆಯಿಂದ ದೂರುಗಳು ಕೇಳಿ ಬರುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next