ಹಾಸನ: ಜಿಲ್ಲೆಯಲ್ಲಿ ಮೇ 3ರವರೆಗೂ ಲಾಕ್‌ಡೌನ್ ಜಾರಿಯಲ್ಲಿದ್ದು, ಲಾಕ್‌ಡೌನ್‌ನಲ್ಲಿ ಸಡಿಲಿಕೆಯಿಲ್ಲ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವು ನಿಯಮಗಳಲ್ಲಿ ಸಡಿಲಿಕೆ ಮಾಡಲಾಗಿದೆಯೇ ಹೊರತು ಲಾಕ್‌ಡೌನ್ ಸಡಿಲಿಕೆ ಮಾಡಿಲ್ಲ. ಹಾಗಾಗಿ ಜನತೆ ಲಾಕ್‌ಡೌನ್ ನಿಯಮಗಳನ್ನು ಪಾಲಿಸಬೇಕು. ಕೃಷಿ ಚಟುವಟಿಕೆಗಳ ಮೇಲಿನ ನಿರ್ಬಂಧವನ್ನು ಈ ಹಿಂದೆಯೇ ಹಿಂತೆಗೆದುಕೊಳ್ಳಲಾಗಿತ್ತು. ಗುರುವಾರ ದಿಂದ ಜಾರಿಗೆ ಬರುವಂತೆ ಫಾರ್ಮಾಸುಟಿಕಲ್ಸ್ ಆ್ಯಂಡ್ ಬಲ್ಬ್, ಆಹಾರ ಸಂಸ್ಕರಣೆ ಹಾಗೂ ಮುನಿಸಿಪಲ್ ವ್ಯಾಪ್ತಿ ಹೊರತು ಪಡಿಸಿ ಕಟ್ಟಡ ನಿರ್ಮಾಣ ಚಟುವಟಿಕೆಗಳನ್ನು ಮುಂದುವರಿಸಲು ಸರ್ಕಾರವು ಅವಕಾಶ ಕಲ್ಪಿಸಿದೆ ಎಂದರು.
ಅಗತ್ಯ ವಸ್ತುಗಳ ಖರೀದಿಗೆ ಅವಕಾಶ: ಈ ಹಿಂದಿನಂತೆಯೇ ವಾರದಲ್ಲಿ ಮೂರು ದಿನ ಮಾತ್ರ ತರಕಾರಿ, ದಿನಸಿ ಖರೀದಿಗೆ ಅವಕಾಶ ನೀಡಲಾಗುತ್ತಿದೆ. ಆದರೆ ಗುರುವಾರ ಬೆಳಗ್ಗೆ ಯಿಂದ ಮಧ್ಯಾಹ್ನ 12 ಗಂಟೆವರೆಗೆ ಇದ್ದ ಅವಧಿಯನ್ನು ಮಧ್ಯಾಹ್ನ 2 ಗಂಟೆವರೆಗೂ ವಿಸ್ತರಿಸಲಾಗಿದೆ. ಅಂಗಡಿಗಳ ಮುಂದೆ ಸಾರ್ವಜನಿಕರು ಎಂದಿನಂತೆ ಸಾಮಾಜಿಕ ಅಂತರ ಕಾಯ್ದುಕೊಂಡು ಖರೀದಿ ಮಾಡ ಬೇಕು ಎಂದು ಹೇಳಿದರು.
ಪಾಸಿಟಿವ್ ಪ್ರಕರಣಗಳಿಲ್ಲ: ಜಿಲ್ಲೆಯಲ್ಲಿ ಈ ವರೆಗೆ 829 ಸ್ಕ್ಯಾಬ್ ಮಾದರಿ ಗಳನ್ನು ಪರೀಕ್ಷೆ ನಡೆಸಿದ್ದು ಎಲ್ಲವೂ ಕೋವಿಡ್ 19 ನೆಗೆಟಿವ್ ವರದಿ ಬಂದಿದೆ. ಪ್ರತಿದಿನವೂ ಜ್ವರದ ಪ್ರಕರಣಗಳನ್ನು ಪರೀಕ್ಷೆ ನಡೆಸಲಾಗು ತ್ತಿದೆ ಎಂದು ತಿಳಿಸಿದರು.
ಶೇ.96 ಪಡಿತರ ವಿತರಣೆ: ಈ ತಿಂಗಳ ಮೊದಲ ವಾರದಲ್ಲಿ 2 ತಿಂಗಳ ಪಡಿತರ ವಿತರಣೆ ಮಾಡಲಾಗಿದ್ದು, ಶೇ.96ರಷ್ಟು ಪಡಿತರ ಕಾರ್ಡುದಾರರು ಪಡಿತರವನ್ನು ಪಡೆದುಕೊಂಡಿದ್ದಾರೆ. ಕಾರ್ಡ್‌ಗೆ ಅರ್ಜಿ ಸಲ್ಲಿಸಿದವರಿಗೂ ಪಡಿತರ ವಿತರಿಸಬೇಕೆಂಬ ಸೂಚನೆ ಸರ್ಕಾರದಿಂದ ಬಂದಿದ್ದು, ಅಂತಹ 900 ಫಲಾನುಭವಿಗಳನ್ನು ಗುರ್ತಿಸಿದ್ದು, ಅವರಿಗೆ ಪಡಿತರ ವಿತರಣೆ ವ್ಯವಸ್ಥೆ ಮಾಡಲಾಗುವುದು. ಪಡಿತರ ವಿತರಣೆ ವೇಳೆ ಹಚ್ಚುದರ ಪಡೆದ ಹಾಗೂ ಇತರೆ ವಸ್ತುಗಳ ಖರೀದಿಗೆ ಒತ್ತಡ ಹೇರಿದ ಪ್ರಕರಣಗಳೂ ಸೇರಿದಂತೆ ಅಕ್ರಮವೆಸಗಿದ 12 ನ್ಯಾಯಬೆಲೆ ಅಂಗಡಿಗಳ ಲೈಸೆನ್ಸ್ ಅಮಾನತು ಮಾಡಲಾಗಿದೆ. ವರ್ತಕರು ಎಂಆರ್‌ಪಿಗಿಂತ ಹೆಚ್ಚು ದರ ಪಡೆಯುತ್ತಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಎಲ್ಲಾ ತಾಲೂಕುಗಳಲ್ಲಿಯೂ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ ಎಂದರು.
ರೈತರಿಗೆ ಪಹಣಿಯೇ ಗುರ್ತಿನ ಚೀಟಿ: ಕೃಷಿ ಚಟುವಟಿಕೆಗಳ ಮೇಲಿನ ನಿರ್ಬಂಧವನ್ನು ಹಿಂತೆಗೆದುಕೊಂಡಿದ್ದು, ರೈತರು ಬಿತ್ತನೆ ಬೀಜ, ಗೊಬ್ಬರ, ಕೃಷಿ ಉಪಕರಣಗಳ ಖರೀದಿಗೆ ಗ್ರಾಮೀಣ ಪ್ರದೇಶದಿಂದ ನಗರ ಮತ್ತು ಪಟ್ಟಣ ಪ್ರದೇಶಕ್ಕೆ ಬರುವಾಗಿ ಚೆಕ್‌ಪೋಸ್ಟ್‌ಗಳಲ್ಲಿ ಜಮೀನಿನ ಪಹಣಿ ಪ್ರತಿ ತೋರಿಸಿದರೆ ಪೊಲೀಸರು ಬಿಡುತ್ತಾರೆ. ಹಾಗಾಗಿ ರೈತರಿಗೆ ಪಾಸ್ ಅಗತ್ಯವಿಲ್ಲ. ಈ ಸಂಬಂಧ ಪೊಲೀಸ್ ಇಲಾಖೆಗೂ ಸೂಚನೆ ನೀಡಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಲೋಕೋಪಯೋಗಿ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಇಲಾಖೆಯ ನಿರ್ಮಾಣ ಕಾಮಗಾರಿಗಳನ್ನು ನಡೆಸಲು ಯಾವುದೇ ನಿರ್ಬಂಧವಿಲ್ಲ ಎಂದು ಜಿಲ್ಲಾಧಿಕಾರಿಯವರು ಸ್ಪಷ್ಟಪಡಿಸಿದರು.
ಎಡೀಸಿ ಕವಿತಾ ರಾಜಾರಾಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ್‌ಕುಮಾರ್ ಮೊದಲಾದವರು ಹಾಜರಿದ್ದರು.