ಕಾಪು: ಕೋವಿಡ್ ಎರಡನೇ ಅಲೆ ನಿಯಂತ್ರಣಕ್ಕಾಗಿ ರಾಜ್ಯ ಸರಕಾರ ಘೋಷಿಸಿರುವ ಲಾಕ್ ಡೌನ್ ಅನ್ನು ಯಶಸ್ವಿಗೊಳಿಸುವ ಹಿನ್ನೆಲೆಯಲ್ಲಿ ಕಾಪು ಪೊಲೀಸ್ ವೃತ್ತ ವ್ಯಾಪ್ತಿಯಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಕಾಪು ವೃತ್ತ ನಿರೀಕ್ಷಕ ಪ್ರಕಾಶ್ ಅವರ ಮಾರ್ಗದರ್ಶನ ಮತ್ತು ನೇತೃತ್ವದಲ್ಲಿ ಕಾಪು ಎಸ್ಐ ರಾಘವೇಂದ್ರ ಸಿ., ಪಡುಬಿದ್ರಿ ಎಸ್ಐ ದಿಲೀಪ್ ಕುಮಾರ್, ಶಿರ್ವ ಎಸ್ಐ ಶ್ರೀಶೈಲ ಮುರಗೋಡ ಅವರ ನೇತೃತ್ವದಲ್ಲಿ ಸೋಮವಾರ ಮುಂಜಾನೆಯಿಂದಲೇ ಪೊಲೀಸರು ಆಯಕಟ್ಟಿನ ಪ್ರದೇಶಗಳಲ್ಲಿ ಚೆಕ್ ಪೋಸ್ಟ್ ಗಳನ್ನು ಅಳವಡಿಸಿ ವಾಹನಗಳನ್ನು ತಪಾಸಣೆಗೊಳ ಪಡಿಸುತ್ತಿರುವುದು ಕಂಡು ಬಂದಿದೆ.
ಸಕಾರಣವಿಲ್ಲದೆ ಅನಗತ್ಯವಾಗಿ ತಿರುಗಾಡುತ್ತಿದ್ದ ವಾಹನಗಳ ದಾಖಲೆಗಳನ್ನು ತಪಾಸಣೆಗೊಳಪಡಿಸಿದ ಪೊಲೀಸರು ವಾಹನ ಸವಾರರಿಗೆ ಎಚ್ಚರಿಕೆ ನೀಡಿ, ವಾಪಾಸ್ ಕಳುಹಿಸಿದರು. ಕೆಲವೆಡೆ ದಾಖಲೆ ಪತ್ರಗಳು ಇಲ್ಲದ ವಾಹನಗಳನ್ನು ಪೊಲೀಸ್ ಠಾಣೆಗೆ ಕೊಂಡೊಯ್ದಿದ್ದಾರೆ.
ಕಾಪು ಪೊಲೀಸ್ ವೃತ್ತ ವ್ಯಾಪ್ತಿಯಲ್ಲಿ ಹೆಚ್ಚಿನ ವಾಹನ ಸಂಚಾರ ಕಂಡು ಬರುವ ಕಾಪು ಜಂಕ್ಷನ್, ಮಜೂರು ಸರ್ಕಲ್, ಉಚ್ಚಿಲ – ಪಣಿಯೂರು ಜಂಕ್ಷನ್, ಬೆಳಪು ಜಂಕ್ಷನ್ ಸಹಿತ ವಿವಿಧೆಡೆಗಳಲ್ಲಿ ಅಧಿಕಾರಿಗಳೇ ಖುದ್ದು ಉಪಸ್ಥಿತರಿದ್ದು ವಾಹನಗಳನ್ನು ತಪಾಸಣೆಗೊಳಪಡಿಸಿದರು.
ವಾಹನ ಸವಾರರಿಗರ ಕೋವಿಡ್ 19 ರ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡಿ, ಕೋವಿಡ್ ಜಾಗೃತಿಗಾಗಿ ಸರಕಾರದ ನಿಯಮಾವಳಿಗಳನ್ನು ಪಾಲಿಸುವಂತೆ ಸೂಚನೆ ನೀಡಿದ ಪ್ರಸಂಗವೂ ಕಂಡು ಬಂದಿದೆ.