Advertisement

ಬಿರುಬಿಸಿಲಿನ ಮಧ್ಯೆ ಪೊಲೀಸರ ಲಾಠಿ ಬಿಸಿ

09:54 AM May 11, 2021 | Team Udayavani |

ಬಾಗಲಕೋಟೆ: ಪ್ರತಿ ದಿನವೂ ಬೆಂಬಿಡದೇ ಕಾಡುತ್ತಿರುವ ಕೊರೊನಾ 2ನೇ ಅಲೆ ನಿಯಂತ್ರಣಕ್ಕೆ ಸರ್ಕಾರ ಕೊರೊನಾ ಕರ್ಫ್ಯೂ ಜಾರಿಗೊಳಿಸಿದ್ದು, ಮೊದಲ ದಿನವಾದ ಸೋಮವಾರ ಬೆಳ್ಳಂಬೆಳಗ್ಗೆ ವಾಹನ ಸಮೇತ ರಸ್ತೆಗಿಳಿದವರಿಗೆ ಪೊಲೀಸರ ಬಿಸಿ ಕಾದಿತ್ತು.

Advertisement

ನಗರದ ಬಸವೇಶ್ವರ ವೃತ್ತ, ವಲ್ಲಭಬಾಯಿ ವೃತ್ತದಲ್ಲಿ ಕಿರಾಣಿ ಅಂಗಡಿ, ಒತ್ತು ಗಾಡಿಗಳಲ್ಲಿ ತರಕಾರಿ ಮಾರಾಟ ಶುರುವಾಗಿತ್ತು. ಬಹುತೇಕರು, ಹತ್ತು ಗಂಟೆಯ ವರೆಗೆ ಮಾರುಕಟ್ಟೆ ಆರಂಭ ಇರುತ್ತದೆ ಎಂಬ ಕಲ್ಪನೆಯಲ್ಲಿಯೇ ಬೈಕ್‌, ಕಾರು ಸಮೇತ ಬಂದಿದ್ದರು. ಈ ವೇಳೆ ವಾಹನ, ಬೈಕ್‌ ತಡೆದ ಪೊಲೀಸರು ಕೆಲವರಿಗೆ ಲಾಠಿ ಬಿಸಿ ತೋರಿಸಿದರೆ, ಇನ್ನೂ ಕೆಲವರ ವಾಹನ, ಬೈಕ್‌ ಜಪ್ತಿ ಮಾಡಿ, ದಂಡ ವಿಧಿಸಿದರು.

ಹಳ್ಳಿ ಹಾಲು ಮಾರುವವರಿಗೆ ನಿರ್ಬಂಧ: ನಿತ್ಯವೂ ಬಾಗಲಕೋಟೆ ಹಾಗೂ ಬಾದಾಮಿ ತಾಲೂಕಿನ ಹಲವು ಹಳ್ಳಿಗಳ ಜನರು ಬೈಕ್‌ಗೆ ನಾಲ್ಕಾರು ಕ್ಯಾನ್‌ ಕಟ್ಟಿಕೊಂಡು, ನಗರಕ್ಕೆ ಬಂದು ಹಾಲು ಮಾರಾಟ ಮಾಡುವುದು ವಾಡಿಕೆ. ಗದ್ದನಕೇರಿ, ಛಬ್ಬಿ, ದೇವನಾಳ, ಕಗಲಗೊಂಬ, ಸಂಶಿ, ಹೊನ್ನಾಕಟ್ಟಿ, ಬೇವಿನಮಟ್ಟಿ, ಸಂಗಮ ಕ್ರಾಸ್‌ ಹೀಗೆ ಹಲವೆಡೆಯಿಂದ ಹಾಲು ಮಾರುವವರು ನಗರಕ್ಕೆ ಬರುತ್ತಾರೆ. ಆದರೆ, ಲಾಕಡೌನ್‌ ಆರಂಭಗೊಂಡ ಸೋಮವಾರ, ವಿದ್ಯಾಗಿರಿ ಸಹಿತ ಹಲವೆಡೆ ಹಳ್ಳಿಯಿಂದ ಬೈಕ್‌ ಮೇಲೆ ಬಂದಿದ್ದ ಮಾರಾಟಗಾರರನ್ನು ತಡೆಯಲಾಯಿತು. ನೀವು ಹಾಲು ಮನೆ ಮನೆಗೆ ಹೋಗಿ ಕೊಡಲು ನಮ್ಮ ತೊಂದರೆ ಇಲ್ಲ. ಆದರೆ, ವಾಹನ-ಬೈಕ್‌ ಮೇಲೆ ಹೋಗುವಂತಿಲ್ಲ. ನೀವು ನಡೆದುಕೊಂಡೇ ಹೋಗಬೇಕು ಎಂದು ಸೂಚನೆ ನೀಡಿದರು. ಹೀಗಾಗಿ ಹಾಲು ಮಾರುವವರು, ಬೈಕ್‌ ಸಮೇತ ಹಳ್ಳಿಯತ್ತ ಹೊರಟರು.

ಮೊದಲ ದಿನ 584 ಕೇಸ್‌-569 ವಾಹನ ಜಪ್ತಿ: ಲಾಕ್‌ಡೌನ್‌ ನಿಯಮ ಉಲ್ಲಂಘಿಸಿ, ರಸ್ತೆಗಿಳಿದ ವಾಹನ, ಬೈಕ್‌ ಹಾಗೂ ನಾಲ್ಕು ಚಕ್ರ ಮೇಲ್ಪಟ್ಟ ವಾಹನಗಳನ್ನು ಪೊಲೀಸರು ಸೀಜ್‌ ಮಾಡಿದರು. ಜಿಲ್ಲೆಯ 21 ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ರಬಕವಿ-ಬನಹಟ್ಟಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಅತಿಹೆಚ್ಚು ಅಂದರೆ 50 ಬೈಕ್‌ ಸೀಜ್‌ ಮಾಡಲಾಗಿದೆ. ಜಮಖಂಡಿನಗರ ಠಾಣೆ-67 ಕೇಸ್‌-60 ಬೈಕ್‌, 7 ಕಾರು ಸೀಜ್‌ ಮಾಡಿದ್ದು, ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ 15 ಪ್ರಕರಣ ದಾಖಲಿಸಿ, 13 ಬೈಕ್‌, 2 ಕಾರು ವಶಕ್ಕೆ ಪಡೆಯಲಾಗಿದೆ. ಸಾವಳಗಿ ಠಾಣೆಯಡಿ 42 ಕೇಸ್‌ ಹಾಕಿದ್ದು 41 ಬೈಕ್‌, 1 ಕಾರು, ಬನಹಟ್ಟಿ ಠಾಣೆಯಡಿ 50 ಕೇಸ್‌ ದಾಖಲಿಸಿ, 50ಬೈಕ್‌ ವಶಪಡಿಸಿಕೊಳ್ಳಲಾಗಿದೆ. ತೇರದಾಳ ಠಾಣೆಯಡಿ 34 ಕೇಸ್‌ ಹಾಕಿದ್ದು, 34 ಬೈಕ್‌ ವಶಕ್ಕೆ ಪಡೆಯಲಾಗಿದೆ. ಮುಧೋಳ ಠಾಣೆಯಡಿ 42 ಬೈಕ್‌ ವಶಕ್ಕೆ ಪಡೆದು 42 ಕೇಸ್‌ ಹಾಕಿದ್ದು, ಮಹಾಲಿಂಗಪುರ ಠಾಣೆಯಡಿ 22 ಬೈಕ್‌ ವಶಕ್ಕೆ ಪಡೆದು, 22 ಕೇಸ್‌ ದಾಖಲಿಸಲಾಗಿದೆ. ಲೋಕಾಪುರ ಠಾಣೆಯಡಿ 22 ಕೇಸ್‌-22 ಬೈಕ್‌, ಬೀಳಗಿ 17 ಬೈಕ್‌, ಕಲಾದಗಿ-20 ಬೈಕ್‌, ಬಾದಾಮಿ-45 ಬೈಕ್‌, 2 ಇತರೆ ವಾಹನ, ಕೆರೂರ-15, ಗುಳೇದಗುಡ್ಡ-19 ಬೈಕ್‌, ಹುನಗುಂದ-14 ಬೈಕ್‌, 1 ಕಾರು-15 ಕೇಸ್‌ ದಾಖಲು ಮಾಡಲಾಗಿದೆ. ಇಳಕಲ್ಲ ನಗರ ಠಾಣೆಯಡಿ 35 ಬೈಕ್‌, ಗ್ರಾಮೀಣ ಠಾಣೆಯಡಿ 18 ಬೈಕ್‌, ಅಮೀನಗಡ-20 ಬೈಕ್‌, ಬಾಗಲಕೋಟೆ ನಗರ-8, ಗ್ರಾಮೀಣ-24, ನವನಗರ-34 ಬೈಕ್‌ ಹಾಗೂ ಬಾಗಲಕೋಟೆ ಸಂಚಾರಿ ಠಾಣೆ-20 ಬೈಕ್‌ ಸೇರಿ ಒಟ್ಟು 584 ಪ್ರಕರಣ ದಾಖಲಿಸಿ, 569 ಬೈಕ್‌, 4 ಇತರೆ ವಾಹನ ವಶಕ್ಕೆ ಪಡೆಯಲಾಗಿದೆ.

ಕಟ್ಟುನಿಟ್ಟಿನ ಸೂಚನೆ: ಸರ್ಕಾರದ ಆದೇಶದ ಪ್ರಕಾರ, ಯಾವುದೇ ಕಾರಣಕ್ಕೂ ಜನರು ವಾಹನ ಸಮೇತ ರಸ್ತೆಗಿಳಿಯುವಂತಿಲ್ಲ. ತುರ್ತು ಸಂದರ್ಭ, ವೈದ್ಯಕೀಯ ಸಿಬ್ಬಂದಿಗೆ ಮಾತ್ರ ವಿನಾಯ್ತು ಇದ್ದು, ಯಾರೇ ರಸ್ತೆಗಿಳಿದರೂ ವಾಹನ ಸೀಜ್‌ ಮಾಡಲಾಗುವುದು. ಕೊರೊನಾ ನಿಯಂತ್ರಣಕ್ಕೆ ಜಿಲ್ಲೆಯ ಜನರು ಸಹಕಾರ ನೀಡಬೇಕು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ ಮನವಿ ಮಾಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next