Advertisement
ಕೋವಿಡ್- 19 ಭೀತಿಯಿಂದಾಗಿ ಮಾ. 23ರಿಂದ ಇಡೀ ಭಾರತವೇ ಲಾಕ್‌ಡೌನ್ ಆಗಿದೆ. ಕಳೆದೊಂದು ತಿಂಗಳಿನಿಂದ ಇಲ್ಲಿವರೆಗೆ ಲಾಕ್‌ಡೌನ್ ಪರಿಣಾಮವಾಗಿ ಕೆಲಸವಿಲ್ಲದೆ, ಸೇವಿಸಲು ಸರಿಯಾದ ಆಹಾರ ವ್ಯವಸ್ಥೆ ಇಲ್ಲದೆ ಹಲವಾರು ಮಂದಿ ಸಂಕಷ್ಟಕ್ಕೊಳಗಾಗಿದ್ದಾರೆ. ಅದರಲ್ಲೂ ಪ್ರಮುಖವಾಗಿ ಉತ್ತರ ಕರ್ನಾಟಕ ಭಾಗದಿಂದ ಬಂದ ವಲಸೆ ಕಾರ್ಮಿಕರೇ ಹೆಚ್ಚಿನ ಸಂಖ್ಯೆಯಲ್ಲಿ ಸಂಕಷ್ಟಕ್ಕೊಳಗಾಗಿದ್ದರು. ಹೆಚ್ಚಿನವರಿಗೆ ಜಿಲ್ಲಾಡಳಿತ, ವಿವಿಧ ಸಂಘ-ಸಂಸ್ಥೆಗಳ ಮುಖಾಂತರ ಆಹಾರ ವ್ಯವಸ್ಥೆ ಮಾಡಿದ್ದರೆ, ಕೆಲವರು ಆಹಾರ ಸಿಗದೇ ಪರದಾಟ ನಡೆಸಿದ್ದಾರೆ. ಅಂತಹವರ ಪೈಕಿ ಸುಮಾರು 50ಕ್ಕೂ ಹೆಚ್ಚು ಮಂದಿ ವಲಸೆ ಕಾರ್ಮಿಕರು ಮತ್ತು ಆಹಾರಕ್ಕೆ ಸಮಸ್ಯೆ ಇರುವವರು ಚೈಲ್ಡ್‌ಲೈನ್ ಸಂಖ್ಯೆ 1098ಕ್ಕೆ ಕರೆ ಮಾಡಿ ತಮ್ಮ ಸಮಸ್ಯೆಗಳನ್ನು ಪರಿಹರಿಸುವಂತೆ ಕೇಳಿಕೊಂಡಿದ್ದಾರೆ. ಆ ಮೂಲಕ ಮಕ್ಕಳ ಸಮಸ್ಯೆ ಪರಿಹಾರಕ್ಕಿರುವ ಚೈಲ್ಡ್‌ಲೈನ್ ಈ ಒಂದು ತಿಂಗಳ ಅವಧಿಯಲ್ಲಿ ಕಾರ್ಮಿಕರ ಸಮಸ್ಯೆಗಳನ್ನೂ ಆಲಿಸುವ ಕೆಲಸ ಮಾಡಿದೆ.
ಚೈಲ್ಡ್‌ಲೈನ್‌ಗೆ ಬಂದ ಕರೆಗಳು ನಮಗೆ ಸಂಬಂಧಪಟ್ಟವಲ್ಲ ಎಂದು ಸುಮ್ಮನಾಗದ ಚೈಲ್ಡ್‌ಲೈನ್ ಸಿಬಂದಿ ಕಾರ್ಮಿಕರು ಮತ್ತು ಸಂಕಷ್ಟದಲ್ಲಿರುವವರ ಎಲ್ಲ ಸಮಸ್ಯೆಗಳನ್ನು ಆಲಿಸಿ, ಅವರ ಮಾಹಿತಿ ಪಡೆದುಕೊಂಡು ಸಂಬಂಧಪಟ್ಟ ಇಲಾಖೆಗಳಿಗೆ ಹಸ್ತಾಂತರಿಸುವ ಕೆಲಸ ಮಾಡುತ್ತಿದ್ದಾರೆ. ಆ ಮೂಲಕ ಸಂಕಷ್ಟದಲ್ಲಿರುವವರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ. ಮಕ್ಕಳ ಸಮಸ್ಯೆಗೆ ಶೂನ್ಯ ಕರೆ
ಮಕ್ಕಳಿಗೆ ಸಂಬಂಧಪಟ್ಟಂತಹ ಯಾವುದೇ ಕರೆಗಳು ಲಾಕ್‌ಡೌನ್ ಅವಧಿಯಲ್ಲಿ ಚೈಲ್ಡ್‌ಲೈನ್‌ಗೆ ಬಂದಿಲ್ಲ. ಬೇರೆ ದಿನಗಳಲ್ಲಿ ಮಕ್ಕಳ ಮೇಲಿನ ದೌರ್ಜನ್ಯ, ಮಕ್ಕಳ ಕಳ್ಳಸಾಗಾಣಿಕೆ, ಮಕ್ಕಳ ಭಿಕ್ಷಾಟನೆಗೆ ಸಂಬಂಧಿಸಿದ ಕರೆಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದವು ಎನ್ನುತ್ತಾರೆ ಚೈಲ್ಡ್‌ಲೈನ್ ಸಿಬಂದಿ.
Related Articles
18 ವರ್ಷ ಪ್ರಾಯದೊಳಗಿನ ಮಕ್ಕಳ ಮೇಲೆ ದೈಹಿಕ ಹಾಗೂ ಮಾನಸಿಕ ಹಿಂಸೆ, ಲೈಂಗಿಕ ದೌರ್ಜನ್ಯ, ಶೋಷಣೆಗಳು ಹಾಗೂ ಆಹಾರ, ವಸತಿ ಮತ್ತಿತರ ಮೂಲ ಆವಶ್ಯಕತೆಗಳಿಂದ ವಂಚಿತವಾದ ಮಕ್ಕಳು ಕಂಡುಬಂದರೆ, ಸಾರ್ವಜನಿಕರು ಉಚಿತ ಕರೆ ದೂರವಾಣಿ ಸಂಖ್ಯೆ 1098 ಇಲ್ಲಿಗೆ ಕರೆ ಮಾಡಿ ಮಾಹಿತಿ ನೀಡಲು ಅವಕಾಶವಿದೆ. ಚೈಲ್ಡ್‌ಲೈನ್ ದಿನದ 24 ಗಂಟೆಗಳೂ ಕೆಲಸ ನಿರ್ವಹಿಸುತ್ತಿದೆ.
Advertisement
ಸಂಬಂಧಪಟ್ಟವರಿಗೆ ಹಸ್ತಾಂತರಲಾಕ್ಡೌನ್ ಅವಧಿಯಲ್ಲಿ ಚೈಲ್ಡ್‌ಲೈನ್‌ಗೆ ಮಕ್ಕಳ ದೌರ್ಜನ್ಯ, ಭಿಕ್ಷಾಟನೆ, ಕಳ್ಳ ಸಾಗಾಟ ಸಂಬಂಧಿಸಿದ ಯಾವುದೇ ಕರೆಗಳು ಬಂದಿಲ್ಲ. ಆದರೆ, ವಲಸೆ ಕಾರ್ಮಿಕರಿಗೆ ಸಂಬಂಧಿಸಿದ ಮತ್ತು ಆಹಾರ ಸಮಸ್ಯೆ ಸಂಬಂಧಿಸಿದಂತೆ ಹೆಚ್ಚು ಕರೆಗಳು ಬಂದಿವೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದು ಈ ಸಮಸ್ಯೆ ಪರಿಹರಿಸುವ ಪ್ರಯತ್ನ ಮಾಡಲಾಗಿದೆ.
- ಲವಿತಾ ಡಿ’ಸೋಜಾ
ಕೋ-ಆರ್ಡಿನೇಟರ್, ಚೈಲ್ಡ್‌ಲೈನ್