ದಾವಣಗೆರೆ: ಕೋವಿಡ್ 19 ವೈರಸ್ ಸೋಂಕು ಹರಡುವಿಕೆ ತಡೆಗೆ ಪ್ರಧಾನಿ ನರೇಂದ್ರ ಮೋದಿಯವರು ಜಾರಿಗೊಳಿಸಿರುವ ಲಾಕ್ ಡೌನ್ ಬಗ್ಗೆ ಉದಾಸೀನ ಮಾಡದೇ ಸಾರ್ವಜನಿಕರು ಬೆಂಬಲಿಸಬೇಕು ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಮನವಿ ಮಾಡಿದ್ದಾರೆ.
ಸರ್ಕ್ನೂಟ್ ಹೌಸ್‌ನಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲೂ 63 ಜನರಲ್ಲಿ ಕೋವಿಡ್ 19 ಸೋಂಕು ಪತ್ತೆಯಾಗಿದೆ. ಈಗಾಗಲೇ ಇಬ್ಬರು ಅಸುನೀಗಿದ್ದಾರೆ. ಬೇರೆ ದೇಶಗಳಿಗೆ ಹೋಲಿಸಿದರೆ ಸದ್ಯ ನಮ್ಮಲ್ಲಿ ಮರಣ ಪ್ರಮಾಣ ಕಡಿಮೆ ಇರಬಹುದು. ಆದರೆ, ನಾವು ನಿರ್ಲಕ್ಷ್ಯ ವಹಿಸಿದರೆ ಅಪಾಯ ತಪ್ಪಿದ್ದಲ್ಲ ಎಂದು ಎಚ್ಚರಿಸಿದರು.
ಪ್ರಧಾನಿ ನರೇಂದ್ರ ಮೋದಿಯವರು ಜನತಾ ಕರ್ಫ್ಯೂ ನಂತರ ಈಗ 21 ದಿನಗಳ ಲಾಕ್ ಡೌನ್ ಜಾರಿಗೊಳಿಸಿದ್ದಾರೆ. ಇನ್ನೂ ನಮ್ಮ ಜನ ಕೋವಿಡ್ 19 ಸೋಂಕು ಹರಡುವಿಕೆ ಗಂಭೀರವಾಗಿ ಪರಿಗಣಿಸಿಲ್ಲ. ಇದು ಸರಿಯಲ್ಲ. ನಮ್ಮ ನಮ್ಮ ಆರೋಗ್ಯದ ಸಲುವಾಗಿ ಲಾಕ್‌ಡೌನ್ ಕಟ್ಟುನಿಟ್ಟಾಗಿ ಪಾಲಿಸಲೇಬೇಕು ಎಂದು ಹೇಳಿದರು.
ವಿಶ್ವದಲ್ಲಿ ಇಟಲಿ ಆರೋಗ್ಯ ಕ್ಷೇತ್ರದ ಸಾಧನೆಯಲ್ಲಿ ಮೂರನೇ ಸ್ಥಾನದಲ್ಲಿದೆ. ಅಂತಹ ದೇಶದಲ್ಲೀಗ ಕೋವಿಡ್ 19 ವೈರಸ್ ಸೋಂಕಿಗೆ ಸಾವಿರಾರು ಮಂದಿ ಬಲಿಯಾಗಿದ್ದಾರೆ. ಇದಕ್ಕೆಲ್ಲಾ ಕಾರಣ ಅಲ್ಲಿನ ಜನರು ವಹಿಸಿದ ನಿರ್ಲಕ್ಷ್ಯ. ಭಾರತದಲ್ಲಿ ವೈದ್ಯರು, ದಾದಿಯರು ತಮ್ಮ ಕುಟುಂಬ ಮರೆತು ಸಾರ್ವಜನಿಕ ಹಿತದೃಷ್ಟಿಯಿಂದ ಹಗಲಿರುಳು ಶ್ರಮಿಸುತ್ತಿದ್ದಾರೆ. ನಾವು ಬದುಕಿದ್ದರೆ ತಾನೇ ಹಬ್ಬ-ಹರಿದಿನ ಮಾಡೋದು. ಈಗ ಎದುರಾಗಿರುವ ಆರ್ಥಿಕ ಸಂಕಷ್ಟ ತಾತ್ಕಾಲಿಕ. ಆರೋಗ್ಯ ಚೆನ್ನಾಗಿದ್ದಲ್ಲಿ ಬೇಕಾದ್ದನ್ನೂ ಪಡೆಯಬಹುದು. ಆದ್ದರಿಂದ ಸಾರ್ವಜನಿಕರು ಲಾಕ್‌ಡೌನ್ ಕಟ್ಟುನಿಟ್ಟಾಗಿ ಪಾಲಿಸಬೇಕಿದೆ ಎಂದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೊರೊನಾ ಸೋಂಕು ತಡೆಗೆ ನಿರಂತರವಾಗಿ ಕ್ರಮ ಕೈಗೊಳ್ಳುತ್ತಿವೆ. ಆದ್ದರಿಂದ ಪ್ರತಿಯೊಬ್ಬರೂ 21 ದಿವಸ ಮನೆಯಿಂದ ಹೊರಗಡೆಬಾರದಿದ್ದಲ್ಲಿ 3ನೇ ಮಹಾಯುದ್ದದಂತೆ ಎದುರಾಗಿರುವ ಕೋವಿಡ್ 19 ವೈರಸ್ ಹೊಡೆದೊಡಿಸಬಹುದು ಎಂದು ಅಭಿಪ್ರಾಯಪಟ್ಟರು.
ದಾವಣಗೆರೆ ಮಹಾನಗರ ಪಾಲಿಕೆ ಮೇಯರ್ ಬಿ.ಜಿ.ಅಜಯಕುಮಾರ್, ಬಿಜೆಪಿ ರೈತಮೋರ್ಚಾ ಜಿಲ್ಲಾಧ್ಯಕ್ಷ ಲೋಕಿಕೆರೆ ನಾಗರಾಜ್, ಯುವಮೋಚಾ ಜಿಲ್ಲಾಧ್ಯಕ್ಷ ಪಿ.ಸಿ.ಶ್ರೀನಿವಾಸ್, ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಈ ಸಂದರ್ಭದಲ್ಲಿದ್ದರು.