Advertisement

ಜನಾಭಿಪ್ರಾಯಕ್ಕೆ ತಕ್ಕಂತೆ ಲಾಕ್‌ಡೌನ್‌ ವಿಸ್ತರಣೆ: ಸಚಿವ ಕೋಟ

01:47 AM Apr 20, 2020 | Sriram |

ಉಡುಪಿ: ಜನರು ಕೋವಿಡ್ 19 ನಿಯಂತ್ರಿಸಲು ಲಾಕ್‌ಡೌನ್‌ ಮುಂದುವರಿಸಿ ಎಂದಿರುವುದರಿಂದ ಮುಖ್ಯಮಂತ್ರಿಗಳು ಪುನಃ ಪರಿಶೀಲನೆ ನಡೆಸಿ ಕಠಿನ ಲಾಕ್‌ಡೌನ್‌ ಮುಂದುವರಿಸಿದ್ದಾರೆ ಎಂದು ಮೀನುಗಾರಿಕಾ ಮತ್ತು ಧಾರ್ಮಿಕ ದತ್ತಿ ಇಲಾಖಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ಜನಾಭಿಪ್ರಾಯವೇ ಮುಖ್ಯ.

ಜನಾಭಿಪ್ರಾಯಕ್ಕೆ ಮಾನ್ಯತೆ ನೀಡುವುದು ಸರಕಾರದ ಜವಾಬ್ದಾರಿ. ಲಾಕ್‌ಡೌನ್‌ ಸಡಿಲಿಕೆಗೆ ಮುಖ್ಯಮಂತ್ರಿಗಳು ಒಲವು ತೋರಿದ್ದರು. ಕಠಿನವಾದ ಜೀವನ ನಡೆಸಲು ಸಿದ್ಧ ಎಂಬ ಜನಾಭಿಪ್ರಾಯ ಮೂಡಿದೆ. ಹೀಗಾಗಿ ನಿರ್ಧಾರ ವನ್ನು ಪರಿಷ್ಕರಿಸಲಾಯಿತು ಎಂದರು.

ಜನರು ಮತ್ತು ಸರಕಾರದ ಮೇಲೆ ಆರ್ಥಿಕ ಹೊರೆ ಬರುವುದು ಸಹಜ. ಕೋವಿಡ್ 19 ನಿಯಂತ್ರಣಕ್ಕೆ ಬರುವವರೆಗೆ ಮನಸ್ಸು ಕಠೊರ ಮಾಡಿಕೊಳ್ಳಬೇಕು. ಎಲ್ಲರೂ ಸರಳ ಜೀವನ ನಡೆಸು ವುದು ಅನಿವಾರ್ಯವಾಗಲಿದೆ ಎಂದರು.

ಮೀನುಗಾರಿಕೆಗೆ ಅಡ್ಡಿ ಇಲ್ಲ
ಕರ್ನಾಟಕ ಕರಾವಳಿಯಲ್ಲಿ ಮೀನುಗಾರಿಕೆಗೆ ಅಡ್ಡಿಯಿಲ್ಲ. ಸಾಮಾಜಿಕ ಅಂತರ ಕಾಯ್ದು ಕೊಳ್ಳುವುದೇ ಸವಾಲು. ಯಾಂತ್ರಿಕ ಮೀನುಗಾರಿಕೆ ಆರಂಭವಾದರೆ ಸಾವಿರಾರು ಜನ ಸೇರುತ್ತಾರೆ.ಮೀನುಗಾರಿಕೆಗೆ ಅವಕಾಶ ಹೆಚ್ಚಿಸಲು ಹಂತ ಹಂತವಾಗಿ ತೀರ್ಮಾನ ಮಾಡುತ್ತೆವೆ. ಮುಂದಿನ ಎರಡು ದಿನಗಳಲ್ಲಿ ಅಧಿಕಾರಿಗಳ ಜೊತೆ ಸಮಾಲೋಚಿಸಿ ತೀರ್ಮಾನ ತಳೆಯುತ್ತೇವೆ ಎಂದರು.

Advertisement

ಲೈಟ್‌ಫಿಶಿಂಗ್‌ಗೆ ತಡೆ
ಅತಿಕ್ರಮ ಮೀನುಗಾರಿಕೆ ಬಗ್ಗೆ ಮೀನು ಗಾರರು ದೂರು ಕೊಟ್ಟಿದ್ದಾರೆ. ಉತ್ತರ ಕನ್ನಡ ಜಿಲ್ಲಾಧಿಕಾರಿಗಳ ಜತೆ ಮಾತನಾಡಿದ್ದೇನೆ. ಕಾನೂನು ಬಾಹಿರ ಮೀನುಗಾರಿಕೆ ತಡೆಯುವಂತೆ ಸೂಚನೆ ಕೊಟ್ಟಿದ್ದೇನೆ. ಕರಾವಳಿ ಕಾವಲು ಪಡೆಗೆ ಅವರು ಆದೇಶ ನೀಡಲಿದ್ದಾರೆ. ಅನ್ಯ ರಾಜ್ಯದವರ ಲೈಟ್‌ ಫಿಶಿಂಗ್‌ಗೆ ತಡೆ ಹಾಕುತ್ತೇವೆ ಎಂದರು.

ಕನ್ನಡಿಗರ ಹಿತ ಕಾಯುತ್ತೇವೆ
ಬೆಂಗಳೂರು, ಮುಂಬಯಿಯಿಂದ ಸಾವಿರಾರು ಜನ ಕರೆ ಮಾಡುತ್ತಿದ್ದಾರೆ. ಕರಾವಳಿ ಮೂಲದ ಜನರು ಕರೆ ಮಾಡಿ ಊರಿಗೆ ಬರುತ್ತೇವೆ ಎನ್ನುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಕೋವಿಡ್ 19 ವ್ಯಾಪಕವಾಗಿ ಹಬ್ಬಿದೆ. ಕನ್ನಡಿಗರ ಹಿತ ಕಾಯಲು ಸರಕಾರ ಬದ್ಧವಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಮತ್ತು ಮುಖ್ಯ ಕಾರ್ಯದರ್ಶಿ ಜತೆಗೆ ಮಾತನಾಡಿದ್ದೇನೆ. ಕನ್ನಡಿಗರಿಗೆ ಇರುವಲ್ಲೇ ಆಹಾರ ಮತ್ತು ಔಷಧ ಸಿಗುವಂತೆ ನೋಡಿಕೊಳ್ಳುತ್ತೇವೆ. ಕೇರಳದಲ್ಲಿರುವ ನಮ್ಮ ಮೀನುಗಾರರ ಹಿತವನ್ನೂ ಕಾಯುತ್ತೇವೆ. ಕೋವಿಡ್ 19 ಗಂಡಾಂತರ ಮುಗಿಯುವವರೆಗೆ ಆತ್ಮಸ್ಥೈರ್ಯ ಕಾಪಾಡಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.

ದೇವಸ್ಥಾನಗಳಿಂದ ನೆರವು
ಕೋವಿಡ್ 19 ಹಾವಳಿಯಿಂದಾಗಿ ಅಗತ್ಯವುಳ್ಳವ ರಿಗೆ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಿಂದ 2,500 ಕಿಟ್‌, ಮಂದಾರ್ತಿ ದೇವಾಲಯದಿಂದ 2,500 ಕಿಟ್‌, ಅನಂತೇಶ್ವರ ದೇವಸ್ಥಾನದಿಂದ 1,000 ಆಹಾರ ಕಿಟ್‌ ವಿತರಣೆ ಮಾಡುತ್ತೇವೆ. ಅರ್ಚಕರಿಗೆ ಆಹಾರ ಸಾಮಗ್ರಿ ಕೊಡಲು ಶೀಘ್ರ ತೀರ್ಮಾನ ಕೈಗೊಳ್ಳುತ್ತೇವೆ. ಅರ್ಚಕರ ತಸ್ತೀಕು ಮುಂಗಡವಾಗಿ ನೀಡುವ ಚಿಂತನೆ ಇದೆ. ಕಲಾವಿದರು ಮತ್ತು ಅರ್ಚಕರಿಗೆ ಆಹಾರ ಸಾಮಗ್ರಿ ನೀಡುತ್ತೇವೆ ಎಂದು ಶ್ರೀನಿವಾಸ ಪೂಜಾರಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next