Advertisement

ಜಿಲ್ಲೆಯಲ್ಲಿ ಲಾಕ್‌ಡೌನ್‌ ವಿಸ್ತರಣೆ ಅಗತ್ಯ

06:02 PM Jun 10, 2021 | Team Udayavani |

ಬೆಳಗಾವಿ: ಮಹಾರಾಷ್ಟ್ರ ಹಾಗೂ ಗೋವಾಕ್ಕೆ ಹೊಂದಿಕೊಂಡಿರುವ ಬೆಳಗಾವಿ ಗಡಿ ಜಿಲ್ಲೆ ಆಗಿರುವುದರಿಂದ ಲಾಕಡೌನ್‌ ವಿಸ್ತರಿಸುವ ಅಗತ್ಯವಿದೆ ಎನಿಸಿದೆ. ಗುರುವಾರ ಜೂ. 10ರಂದು ನಡೆಯಲಿರುವ ಸಭೆಯಲ್ಲಿ ಈ ವಿಷಯವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದು ಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ತಿಳಿಸಿದರು.

Advertisement

ಕೋವಿಡ್‌ ಹಾಗೂ ನೆರೆಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಪ್ರವಾಸಿ ಮಂದಿರದಲ್ಲಿ ಬುಧವಾರ ನಡೆದ ಹಿರಿಯ ಅ ಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಚಿಕ್ಕೋಡಿಯಲ್ಲಿ ಕೋವಿಡ್‌ ಪರೀಕ್ಷೆಯ ಆರ್‌.ಟಿ-ಪಿಸಿಆರ್‌ ಪ್ರಯೋಗಾಲಯ ಸ್ಥಾಪನೆಗೆ ಅನುಮತಿ ಲಭಿಸಿರುವುದರಿಂದ ಸಿವಿಲ್‌ ಕಾಮಗಾರಿಗೆ ಕಾಲಹರಣ ಮಾಡದೇ ಲಭ್ಯವಿರುವ ಕಟ್ಟಡಗಳನ್ನು ಬಳಸಿಕೊಂಡು ಕೂಡಲೇ ಪ್ರಯೋಗಾಲಯ ಆರಂಭಿಸಬೇಕು. ಚಿಕ್ಕೋಡಿಯಲ್ಲಿ ಅನೇಕ ಸರ್ಕಾರಿ ಕಟ್ಟಡಗಳು ಲಭ್ಯವಿರುವುದರಿಂದ ಅದರಲ್ಲಿಯೇ ಪ್ರಯೋಗಾಲಯ ಆರಂಭಿಸಬೇಕು. ಸಣ್ಣಪುಟ್ಟ ದುರಸ್ತಿ ಅಗತ್ಯವಿದ್ದರೆ ತಕ್ಷಣ ಕೈಗೊಂಡು ಕಟ್ಟಡವನ್ನು ಆರೋಗ್ಯ ಇಲಾಖೆಗೆ ಹಸ್ತಾಂತರಿಸಬೇಕು. ಬಿಮ್ಸ್‌ ಪ್ರಯೋಗಾಲಯದ ಮಾದರಿಯಲ್ಲಿ ಚಿಕ್ಕೋಡಿಯಲ್ಲಿ ಪ್ರಯೋಗಾಲಯವನ್ನು ಎರಡು ದಿನಗಳಲ್ಲಿ ಸಿದ್ಧಪಡಿಸಿಕೊಡುವಂತೆ ಲೋಕೋಪಯೋಗಿ ಇಲಾಖೆ ಅ ಧಿಕಾರಿಗಳಿಗೆ ಸೂಚನೆ ನೀಡಿದರು.

ಬ್ಲ್ಯಾಕ್ ಫಂಗಸ್‌ ಚಿಕಿತ್ಸೆಗೆ ಅಗತ್ಯವಿರುವ ಖಾಸಗಿ ವೈದ್ಯರನ್ನು ಅಥವಾ ನಿವೃತ್ತ ವೈದ್ಯರನ್ನು ಪಾವತಿ ಆಧಾರದ ಮೇಲೆ ನೇಮಕ ಮಾಡಿಕೊಳ್ಳಬೇಕು. ವೈದ್ಯಕೀಯ ಮೂಲ ಸೌಕರ್ಯಗಳನ್ನು ಕಲ್ಪಿಸಲು ಹಣದ ಕೊರತೆಯಿಲ್ಲ. ವಿವಿಧ ಮೂಲಗಳಿಂದ ಅನುದಾನ ಲಭ್ಯವಿದೆ. ತುರ್ತು ಚಿಕಿತ್ಸೆಗೆ ಅಗತ್ಯವಿರುವ ಉಪಕರಣಗಳ ಖರೀದಿಗೆ ಇದನ್ನು ಬಳಸಿಕೊಳ್ಳಬೇಕು ಎಂದು ಬಿಮ್ಸ್‌ ಅಧಿ ಕಾರಿಗಳಿಗೆ ಸೂಚನೆ ನೀಡಿದರು.

ಪ್ಯಾಕೇಜ್‌ ನೆರವು ತಲುಪಿಸಲು ಸೂಚನೆ: ಲಾಕಡೌನ್‌ ವೇಳೆ ಆರ್ಥಿಕ ಸಂಕಷ್ಟದಲ್ಲಿರುವ ವಿವಿಧ ವರ್ಗಗಳ ಜನರಿಗೆ ಎರಡು ಪ್ಯಾಕೇಜ್‌ಗಳಲ್ಲಿ 1750 ಕೋಟಿ ರೂ. ಪರಿಹಾರವನ್ನು ಸರ್ಕಾರ ಪ್ರಕಟಿಸಿದೆ. ಎಲ್ಲ ವರ್ಗಗಳ ಜನರಿಗೆ ಕೂಡಲೇ ಪರಿಹಾರಧನ ತಲುಪಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು. ಸಂಭವನೀಯ ಮೂರನೇ ಅಲೆಯ ನಿರ್ವಹಣೆಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಬಿಮ್ಸ್‌ ಪ್ರಭಾರ ನಿರ್ದೇಶಕ ಡಾ| ಕುಲಕರ್ಣಿ ತಿಳಿಸಿದರು.

ಆಕ್ಸಿಜನ್‌ ಕೊರತೆ ಇಲ್ಲ: ಜಿಲ್ಲೆಯ ಮರಣ ಪ್ರಮಾಣ ಶೇ. 1.60ರಷ್ಟಿದೆ. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಒಟ್ಟಾರೆ 976 ಜನರು ಕೋವಿಡ್‌ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ನಿತ್ಯ 16 ಕೆ.ಎಲ್‌. ಆಕ್ಸಿಜನ್‌ ಬಳಕೆಯಾಗುತ್ತಿದ್ದು, ಸಾಕಷ್ಟು ಆಕ್ಸಿಜನ್‌ ದಾಸ್ತಾನು ಲಭ್ಯವಿದೆ. ರೆಮ್‌ಡೆಸಿವಿಯರ್‌ ಸೇರಿದಂತೆ ಯಾವುದೇ ಔಷಧಿ ಕೊರತೆ ಇಲ್ಲ ಎಂದು ಜಿಲ್ಲಾ ಧಿಕಾರಿ ಎಂ.ಜಿ. ಹಿರೇಮಠ ಮಾಹಿತಿ ನೀಡಿದರು.

Advertisement

ಪಾಸಿಟಿವಿಟಿ ದರ ಕ್ರಮೇಣ ಕಡಿಮೆಯಾಗಿದ್ದು, ಪಾಸಿಟಿವಿಟಿ ದರ ಹೆಚ್ಚಾಗಿರುವ ಕಡೆಗಳಲ್ಲಿ ಆ್ಯಂಟಿಜೆನ್‌ ಟೆಸ್ಟ್‌ (ರ್ಯಾಟ್‌) ಪ್ರಮಾಣ ಹೆಚ್ಚಿಸಲಾಗಿದೆ. ಜನಸಂಖ್ಯೆ ಆಧರಿಸಿ ಲಸಿಕೆ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ಪೂರೈಸುವಂತೆ ಕೋರಲಾಗಿದೆ. ಜಿಲ್ಲೆಯಲ್ಲಿ ಪ್ರತಿದಿನ 30 ಸಾವಿರ ಲಸಿಕೆ ನೀಡುವಷ್ಟು ವ್ಯವಸ್ಥೆ ಇದೆ. ಲಸಿಕೆ ಪೂರೈಕೆ ಆದಂತೆ ಲಸಿಕಾ ಪ್ರಮಾಣ ಹೆಚ್ಚಿಸಲಾಗುವುದು. ಜಿಲ್ಲೆಯಲ್ಲಿ ಇದುವರೆಗೆ ಒಟ್ಟಾರೆ 204 ಬ್ಲ್ಯಾಕ್‌ ಫಂಗಸ್‌ ಪ್ರಕರಣಗಳು ವರದಿಯಾಗಿವೆ. ಬಿಮ್ಸ್‌ನಲ್ಲಿ 136 ರೋಗಿಗಳು ದಾಖಲಾಗಿದ್ದರು ಎಂದು ಮಾಹಿತಿ ನೀಡಿದರು.

ಬ್ಲ್ಯಾಕ್‌ ಫಂಗಸ್‌ ಚಿಕಿತ್ಸೆಗೆ ವೈದ್ಯರ ನಿಯೋಜನೆಗೆ ಕ್ರಮ: ಬ್ಲ್ಯಾಕ್‌ ಫಂಗಸ್‌ ಸರ್ಜರಿಗೆ 2-3 ತಾಸು ಬೇಕಾಗುತ್ತದೆ. ಹುಬ್ಬಳ್ಳಿ ಕಿಮ್ಸ್‌ ಹಾಗೂ ಗದಗ ವೈದ್ಯಕೀಯ ಕಾಲೇಜಿನಿಂದ ತಲಾ ಒಬ್ಬ ತಜ್ಞರನ್ನು ಬಿಮ್ಸ್‌ಗೆ ನಿಯೋಜಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಾದೇಶಿಕ ಆಯುಕ್ತರು ಹಾಗೂ ಬಿಮ್ಸ್‌ ಆಡಳಿತ ಮೇಲುಸ್ತುವಾರಿ ಅಧಿ ಕಾರಿ ಆಮ್ಲಾನ್‌ ಆದಿತ್ಯ ಬಿಸ್ವಾಸ್‌ ಹೇಳಿದರು.

ಬಿಮ್ಸ್‌ನಲ್ಲಿ ಸದ್ಯಕ್ಕೆ ಸ್ವತ್ಛತೆ ಹಾಗೂ ಸೋಂಕಿತರಿಗೆ ಉತ್ತಮ ಪ್ರೋಟಿನ್‌ಯುಕ್ತ ಆಹಾರ ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಿಸಿದರು. ನೀರಾವರಿ ಇಲಾಖೆಯ ಉತ್ತರ ವಲಯದ ಮುಖ್ಯ ಎಂಜಿನಿಯರ್‌ ಅರವಿಂದ ಕಣಗಲಿ, ಕೋಯ್ನಾ ಸೇರಿದಂತೆ ವಿವಿಧ ಜಲಾಶಯ ಮಟ್ಟಗಳ ಮೇಲೆ ನಿಗಾ ವಹಿಸಲಾಗಿದೆ ಎಂದು ತಿಳಿಸಿದರು.

ಗ್ರಾಮ ಮಟ್ಟದಲ್ಲಿ ಟಾಸ್ಕ್ ಫೋರ್ಸ್‌ ಮೂಲಕ ಮನೆ ಮನೆ ಸಮೀಕ್ಷೆ ಮಾಡಲಾಗುತ್ತಿದೆ. ಐಸೋಲೇಷನ್‌ ಇದ್ದವರಿಗೆ ಕಿಟ್‌ ಗಳನ್ನು ನೀಡಲಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಸೋಂಕು ಪ್ರಮಾಣ ಕಡಿಮೆಯಾಗಿದೆ ಎಂದು ಜಿಲ್ಲಾ ಆರೋಗ್ಯಾ ಧಿಕಾರಿ ಡಾ. ಎಸ್‌.ವಿ. ಮುನ್ಯಾಳ ತಿಳಿಸಿದರು.

52 ಸಾವಿರ ಕ್ವಿಂಟಲ್‌ ಬೀಜ ದಾಸ್ತಾನು: ಕಳೆದ ವರ್ಷ ಸಹಾಯಧನದಡಿ ಒಟ್ಟಾರೆ 48 ಸಾವಿರ ಕ್ವಿಂ. ಬಿತ್ತನೆ ಬೀಜ ವಿತರಣೆ ಮಾಡಲಾಗಿದೆ. ಇದರಲ್ಲಿ 38 ಸಾವಿರ ಕ್ವಿಂ. ಸೋಯಾಬಿನ್‌ ಬೀಜ ವಿತರಿಸಲಾಗಿದೆ. ಈ ಬಾರಿ ಒಟ್ಟಾರೆ 52 ಸಾವಿರ ಕ್ವಿಂಟಲ್‌ ದಾಸ್ತಾನು ಇದೆ. ಇದುವರೆಗೆ 35 ಸಾವಿರ ಕ್ವಿಂಟಲ್‌ ಮಾರಾಟ ಮಾಡಲಾಗಿದೆ. ಸಾಕಷ್ಟು ಬಿತ್ತನೆ ಬೀಜ ದಾಸ್ತಾನು ಇದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ತಿಳಿಸಿದರು.

ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ರವೀಂದ್ರ ಹಕಾಟಿ, ಸರಕಾರದ ಪ್ಯಾಕೇಜ್‌ ಪ್ರಕಾರ ಈಗಾಗಲೇ ಐದು ಕೋಟಿ ರೂಪಾಯಿ ಪರಿಹಾರಧನ ಫಲಾನುಭವಿಗಳಿಗೆ ತಲುಪಿದೆ ಎಂದರು. ಪಶುಪಾಲನೆ ಇಲಾಖೆಯ ಉಪನಿರ್ದೇಶಕ ಅಶೋಕ ಕೊಳ್ಳಾ, 12.81 ಜಾನುವಾರುಗಳ ಪೈಕಿ 11.72 ಲಕ್ಷ ಜಾನುವಾರುಗಳಿಗೆ ಲಸಿಕೆ ಹಾಕಲಾಗಿದೆ. ಎರಡನೇ ಹಂತದಲ್ಲಿ ಆಗಸ್ಟ್‌ ಮಾಹೆಯಿಂದ ಲಸಿಕೆ ನೀಡಲಾಗುವುದು. 56 ಸಾವಿರ ಡೋಸ್‌ ಲಸಿಕೆ ದಾಸ್ತಾನು ಇದ್ದು, ಲಸಿಕೆ ಕೊರತೆಯಿಲ್ಲ ಎಂದು ಹೇಳಿದರು.

ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಮಹಾನಗರ ಪಾಲಿಕೆ ಆಯುಕ್ತ ಜಗದೀಶ್‌, ಜಿಲ್ಲಾ ಸರ್ವೇಕ್ಷಣಾಧಿ ಕಾರಿ ಡಾ. ಬಾಲಕೃಷ್ಣ ತುಕ್ಕಾರ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next