Advertisement

ಜಿಲ್ಲೆಯಲ್ಲಿ ಲಾಕ್‌ಡೌನ್‌ ವಿನಾಯ್ತಿ: ಡಿಸಿ

06:59 PM Apr 29, 2020 | Suhan S |

ಕೊಪ್ಪಳ: ಜಿಲ್ಲೆಯಲ್ಲಿ ಕೋವಿಡ್ 19  ನಿಯಂತ್ರಣಕ್ಕಾಗಿ ಲಾಕ್‌ಡೌನ್‌ ಜಾರಿಯಾಗಿದ್ದು, ಇದರಲ್ಲಿ ಕೆಲವೊಂದು ವಿನಾಯ್ತಿ ನೀಡಲಾಗಿದೆ. ಅಂಗಡಿ ಮುಂಗಟ್ಟುಗಳು ಹೆಚ್ಚಿನ ಸಾಮಾಜಿಕ ಅಂತರ ಕಾಯ್ದುಕೊಂಡು ವಹಿವಾಟು ನಡೆಸಬೇಕೆಂದು ಡಿಸಿ ಸುನೀಲ್‌ ಕುಮಾರ ಆದೇಶ ಹೊರಡಿಸಿದ್ದಾರೆ.

Advertisement

ವಿಶೇಷವಾಗಿ ದಿನಸಿ ವ್ಯಾಪಾರ ಮಾಡುವ ಅಂಗಡಿ ಮಾಲೀಕರು ತಮ್ಮ ಅಂಗಡಿಗಳಲ್ಲಿ ಶೇ.33 ಕಾರ್ಮಿಕರು ಮಾತ್ರ ಕೆಲಸ ನಿರ್ವಹಿಸುವಂತೆ ಮತ್ತು ಸ್ಯಾನಿಟೈಸರ್‌, ಮಾಸ್ಕ್ಗಳನ್ನು ಬಳಸಿಕೊಂಡು ವ್ಯಾಪಾರ ಮಾಡತಕ್ಕದ್ದು ಹಾಗೂ ತಮ್ಮ ಬಳಿ ಬರುವ ಸಾರ್ವಜನಿಕರಿಗೆ ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಂಡು ಬರುವಂತೆ ತಿಳಿಸಬೇಕು. ಎಲ್ಲಾ ಅಂಗಡಿಗಳ ಮಾಲೀಕರು ತಮ್ಮ ಅಂಗಡಿಗಳ ಮುಂದೆ ಗ್ರಾಹಕರಿಗಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕನಿಷ್ಠ 1 ಮೀಟರ್‌ ನಷ್ಟು ಗುರುತುಗಳನ್ನು ಮಾಡಿ ಅಂತರ ಕಾಯ್ದುಕೊಳ್ಳುವುದನ್ನು ಖಾತ್ರಿಪಡಿಸಿಕೊಳ್ಳಬೇಕು ಹಾಗೂ ಅಂಗಡಿಗಳ ಮುಂದೆ 5 ಜನಕ್ಕಿಂತ ಹೆಚ್ಚು ಜನರು ಸೇರದಂತೆ ಕ್ರಮ ವಹಿಸಬೇಕು. ಗರ್ಭಿಣಿಯರು, ಬಾಣಂತಿಯರು, 60 ವರ್ಷ ಮೇಲ್ಪಟ್ಟ ವೃದ್ಧರು ಮತ್ತು 10 ವರ್ಷದೊಳಗಿನ ಮಕ್ಕಳು ವಿನಾಕಾರಣ ಮನೆಯಿಂದ ಹೊರಗಡೆ ಬರುವುದನ್ನು ಸಾಧ್ಯವಾದಷ್ಟು ಕಡಿಮೆ ಮಾಡಬೇಕು.

ದಿನಸಿ ವರ್ತಕರು ಸಾಧ್ಯವಾದಷ್ಟು ಮನೆ-ಮನೆಗೆ ದಿನಸಿ ಸಾಮಗ್ರಿ ತಲುಪಿಸತಕ್ಕದ್ದು. ತರಕಾರಿ ವರ್ತಕರು ಕಡ್ಡಾಯವಾಗಿ ಮನೆ-ಮನೆಗಳಿಗೆ ತೆರಳಿ ಪೂರೈಸಬೇಕು.ವ್ಯಾಪಾರಸ್ಥರು ಪ್ರತಿದಿನ ರಾತ್ರಿ 9ರ ವರೆಗೂ ಮಾತ್ರ ಅಂಗಡಿ ಮುಂಗಟ್ಟುಗಳನ್ನು ತೆರೆಯಬೇಕು. ಅಂತರ್‌ ಜಿಲ್ಲಾ ಚೆಕ್‌ಪೋಸ್ಟ್‌ಗಳಲ್ಲಿ ಅನುಮತಿ ಪತ್ರವಿಲ್ಲದೆ (ಪಾಸ್‌) ಯಾವುದೇ ಮಾನವ ಸಾಗಾಣಿಕೆಗೆ ಅಥವಾ ಸಂಚಾರಕ್ಕೆ ಅವಕಾಶವಿಲ್ಲ. ಜಿಲ್ಲೆಯ ಒಳಗಡೆ ಸಂಚರಿಸುವಾಗ ದ್ವಿಚಕ್ರ ವಾಹನದಲ್ಲಿ ಕೇವಲ ಒಬ್ಬರು ಮಾತ್ರ ಮತ್ತು ನಾಲ್ಕು ಚಕ್ರ ವಾಹನಗಳಲ್ಲಿ ಚಾಲಕ ಮತ್ತು ಹಿಂದಿನ ಸೀಟಿನಲ್ಲಿ ಒಬ್ಬ ಸಹ ಪ್ರಯಾಣಿಕ ಮಾತ್ರ ಸಂಚರಿಸತಕ್ಕದ್ದು, ಶವ ಸಂಸ್ಕಾರದ ಸಮಯದಲ್ಲಿ 20 ಜನಕ್ಕಿಂತ ಹೆಚ್ಚು ಜನ ಸೇರಬಾರದು. ಜಿಲ್ಲಾಡಳಿತದಿಂದ ಕೇವಲ ತುರ್ತು ವೈದ್ಯಕೀಯ ಸೇವೆಗಳು ಮತ್ತು ಸಾವುಗಳು ಉಂಟಾದಲ್ಲಿ ಮಾತ್ರ ಅಂತರ್‌ ಜಿಲ್ಲಾ ಪಾಸ್‌ ನೀಡಲಾಗುತ್ತಿದೆ. ಇದನ್ನು ಹೊರತುಪಡಿಸಿ ಇತರೆ ಯಾವುದೇ ಉದ್ದೇಶಕ್ಕಾಗಿ ಪಾಸ್‌ಗಳನ್ನು ವಿತರಿಸುವ ಅವಕಾಶವಿಲ್ಲ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅನಗತ್ಯವಾಗಿ ಜನ ಜಂಗುಳಿ ಉಂಟು ಮಾಡಿದರೆ ಮತ್ತು ಷರತ್ತು ಉಲ್ಲಂಘಿಸಿದರೆ ಅಂತವರ ವಿರುದ್ಧ ಸೋಂಕು ಹರಡಲು ಕಾರಣಿಕರ್ತರಾಗುತ್ತಾರೆಂದು ಭಾವಿಸಿ ಅವರ ಮೇಲೆ ವಿಪತ್ತು ನಿರ್ವಹಣಾ ಕಾಯ್ದೆ 2005ರ ಕಲಂ 51ರಿಂದ 60 ಹಾಗೂ ಭಾರತ ದಂಡ ಸಂಹಿತೆ 1860ರ ಕಲಂ 188 ರನ್ವಯ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಲಾಗುವುದು. –ಸುನೀಲ್‌ ಕುಮಾರ, ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next