Advertisement

ಗೂರ್ಖಾಗಳಿಗೆ ಎದುರಾದ ಲಾಕ್‌ಡೌನ್‌ ಸಂಕಷ್ಟ

11:37 AM May 03, 2020 | Team Udayavani |

ಬೆಂಗಳೂರು: ನಗರದ ಏರಿಯಾಗಳಲ್ಲಿ ಪೊಲೀಸರಂತೆ ಪ್ರತಿ ರಾತ್ರಿ ಸೀಟಿ ಊದಿಕೊಂಡು ಗಸ್ತು ತಿರುಗಿ ತಿಂಗಳಿಗೊಮ್ಮೆ ಹಣ ಸಂಗ್ರಹಿಸಿ ಜೀವನ ನಡೆಸುತ್ತಿದ್ದ ನಗರದ ಗೂರ್ಖಾಗಳಿಗೆ ‘ಲಾಕ್‌ ಡೌನ್‌’ ಸಂಕಷ್ಟ ತಂದಿಕ್ಕಿದೆ. ನಗರದ ಬೇರೆ ಬೇರೆ ಕಡೆ ವಾಸಿಸುತ್ತಿರುವ ಗೂರ್ಖಾಗಳು ಲಾಕ್‌ಡೌನ್‌ನಿಂದ ದುಡಿಮೆಯೂ ಇಲ್ಲದೆ ಸಂಪಾದನೆಯೂ ಕಾಣದೆ ಕಷ್ಟ ಎದುರಿಸುವಂತಾಗಿದೆ.

Advertisement

ಗಸ್ತು ನಿರ್ವಹಿಸಿದ್ದಕ್ಕೆ ಮನೆಗಳ ಮುಂದೆ ಹೋಗಿ ಹಣ ಕೇಳುವ ಸಂಪ್ರದಾಯ ರೂಢಿಸಿಕೊಂಡಿರುವ ಗೂರ್ಖಾಗಳು, ಕೋವಿಡ್ ಭಯದಿಂದ ಮನೆಯ ಮಾಲೀಕರುಗಳು ಏನಂದುಕೊಳ್ಳುತ್ತಾರೋ ಎಂಬ ಅಂಜಿಕೆಯಿಂದ ಸ್ವತಃ ತಾವೇ ಹಿಂದೆ ಸರಿದಿದ್ದು, ಜೀವನೋಪಾಯದ ಆದಾಯಕ್ಕೆ ಹೊಡೆತ ಬಿದ್ದಿದೆ. ನಗರದಲ್ಲಿ ಗೂರ್ಖಾ ಕೆಲಸ ಮಾಡುವವರು ನೇಪಾಳ, ಈಶಾನ್ಯ ರಾಜ್ಯಗಳ ಮೂಲದವರಾಗಿದ್ದಾರೆ. ಕೋವಿಡ್  ಸಂದರ್ಭದಲ್ಲಿ ಹರಡಿದ ಕೆಲವು ಸುಳ್ಳು ಸುದ್ದಿಗಳಿಂದಲೂ ಇವರು ಮನೆಯಿಂದ ಬರಲು ಹಿಂದೇಟು ಹಾಕುವಂತಹ ಪರಿಸ್ಥಿತಿ ಇದೆ ಎಂದು ಅಸ್ಸಾಂನ ಜೀರ್‌ ಸಂಗ್‌ ಹೇಳುತ್ತಾರೆ.

ಗೂರ್ಖಾ ಕೆಲಸದ ಜತೆ ಖಾಸಗಿ ಕಂಪನಿಯೊಂದರಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುವ ಜೀರ್‌ ಸಿಂಗ್‌, ಕೋವಿಡ್  ಹಿನ್ನೆಲೆಯಲ್ಲಿ ಹೇರಲಾಗಿರುವ ಲಾಕ್‌ಡೌನ್‌ ನಿಂದ ತಿಂಗಳ ಆದಾಯವಿಲ್ಲದಿರುವುದನ್ನು ಒಪ್ಪಿಕೊಳ್ಳುತ್ತಾರೆ. ಕಂಪನಿಗೆ ಭದ್ರತಾ ಸಿಬ್ಬಂದಿಯ ಕೆಲಸವೇನೋ ಎಂದಿನಂತೆ ಇದೆ. ಆದರೆ, ರಾತ್ರಿ ವೇಳೆ ಗೂರ್ಖಾ ಕೆಲಸ ಸದ್ಯಕ್ಕೆ ಬಿಟ್ಟಿದ್ದೇನೆ. ಪ್ರತಿ ತಿಂಗಳು ಈ ಕೆಲಸದಿಂದಲೂ ಅಲ್ಪಸ್ವಲ್ಪ ಹಣ ಸಿಗುತ್ತಿತ್ತು. ಈಗ ಅದು ಸಿಗುತ್ತಿಲ್ಲ ಎಂದರು.

ಏಜೆನ್ಸಿಗಳಿಗೂ ಸಂಕಷ್ಟ : ಲಾಕ್‌ ಡೌನ್‌ ಹಿನ್ನೆಲೆಯಲ್ಲಿ ಕಂಪನಿ ಗಳ ಕಾರ್ಯನಿರ್ವಹಣೆ ಸ್ಥಗಿತ, ವ್ಯಾಪಾರ ವಹಿವಾಟು ಕುಸಿತ ಹಿನ್ನೆಲೆಯಲ್ಲಿ ಬಹುತೇಕ ಕಡೆ ಸೆಕ್ಯೂರಿಟಿ ಸಿಬ್ಬಂದಿಯನ್ನು
ಕಡಿತಗೊಳಿಸಲಾಗುತ್ತಿದೆ ಇದರ ಪರಿಣಾಮ ಸೆಕ್ಯೂರಿಟಿ ಏಜೆನ್ಸಿ ಗಳು ಕೂಡ ಇಕ್ಕಟ್ಟಿಗೆ ಸಿಲುಕಿವೆ. ಹೀಗಾಗಿ, ತಮ್ಮ ಬಳಿಯಿರುವ ಸಿಬ್ಬಂದಿಯನ್ನು ಅನಿವಾರ್ಯವಾಗಿ ಕೆಲಸದಿಂದ ತೆಗೆಯುವ ನಿರ್ಧಾರ ಕೈಗೊಳ್ಳಲು ಯೋಚಿಸುತ್ತಿವೆ. ಈ ಬಗ್ಗೆ ಉದಯವಾಣಿ ಜತೆ ಮಾತನಾಡಿದ ಸೆಕ್ಯೂರಿಟಿ ಏಜೆನ್ಸಿಗಳ ಒಕ್ಕೂಟದ ಅಧ್ಯಕ್ಷ ಬಿ.ಎಂ ಶಶಿಧರ್‌, ಸೆಕ್ಯೂರಿಟಿ ಸೇವೆಯನ್ನು ಪಡೆಯುತ್ತಿರುವ ಗ್ರಾಹಕರೇ ಏಜೆನ್ಸಿಯಿಂದ ಪಡೆದ ಸಿಬ್ಬಂದಿಯಲ್ಲಿ ಕಡಿತಗೊಳಿಸುತ್ತಿವೆ. ಹೀಗಾಗಿ, ಏಜೆನ್ಸಿಗಳೂ ಇಕ್ಕಟ್ಟಿಗೆ ಸಿಲುಕಿವೆ. ಸದ್ಯಕ್ಕೆ, ಏಜೆನ್ಸಿಗಳ ಕಾರ್ಯನಿರ್ವಹಣೆ ವಹಿವಾಟು ಪರವಾಗಿಲ್ಲ.. ಮುಂದೆ ಏನಾಗುತ್ತೋ ನೋಡಬೇಕಿದೆ ಎಂದರು.

ಭದ್ರತಾ ಸಿಬ್ಬಂದಿಗೂ ಕಷ್ಟ
ನಗರದಲ್ಲಿ ಸೆಕ್ಯೂರಿಟಿ ( ಭದ್ರತಾ) ವೃತ್ತಿಯನ್ನೇ ನಂಬಿ ಸಾವಿರಾರು ಮಂದಿಯಿದ್ದಾರೆ. ಬಹುತೇಕ ಮಂದಿ ಸೆಕ್ಯೂರಿಟಿ ಏಜೆನ್ಸಿಗಳ ಮೂಲಕ ನೇಮಕಗೊಂಡಿದ್ದಾರೆ. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಕಂಪನಿಗಳು ಮುಚ್ಚಿವೆ, ಎಲ್ಲ ವಾಣಿಜ್ಯ ಚಟುವಟಿಕೆಗಳು ಸ್ಥಗಿತಗೊಂಡಿವೆ. ಹೀಗಾಗಿ ಕೆಲವು ಕಂಪನಿಗಳಲ್ಲಿ ಭದ್ರತಾ ಸಿಬ್ಬಂದಿಯಲ್ಲೇ ಅರ್ಧದಷ್ಟು ಕಡಿತಗೊಳಿಸಿದ್ದಾರೆ ಎಂದೂ ಹೇಳಲಾಗುತ್ತಿದೆ. ಕಡಿಮೆ ಸಿಬ್ಬಂದಿ ಇರುವ ಕಡೆ ಮುಂದುವರಿಸಲಾಗಿದೆ. ಆದರೆ ವೇತನ ನೀಡುವಿಕೆಯಲ್ಲಿ ವ್ಯತ್ಯಯವಾಗುತ್ತಿದೆ ಎಂದು ಆಸ್ಪತ್ರೆಯೊಂದರಲ್ಲಿ ಭದ್ರತಾ ಸಿಬ್ಬಂದಿ ಆಗಿರುವ ಪ್ರತ್ಯುಶ್‌ ಹೇಳುತ್ತಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next