Advertisement

ಗೋವಾ : ವಿಸಾ ಮುಕ್ತಾಯಗೊಂಡಿದ್ರೂ ರಾಜ್ಯದಲ್ಲೇ ಉಳಿದ ವಿದೇಶಿಗರಿಗೆ ಆರ್ಥಿಕ ಸಂಕಷ್ಟ

04:51 PM Jun 09, 2021 | Team Udayavani |

ಪಣಜಿ: ಕೋವಿಡ್ ಪರಿಸ್ಥಿತಿಯಿಂದಾಗಿ ರಾಜ್ಯದಲ್ಲಿ ವೀಸಾ ಮುಕ್ತಾಯಗೊಂಡಿದ್ದರೂ ಕೂಡ ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಿಲುಕಿಕೊಂಡಿರುವ ವಿದೇಶಿ ಪ್ರವಾಸಿಗರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರ ಬಳಿಯಿದ್ದ ಹಣ ಖಾಲಿಯಾಗಿರುವ ಹಿನ್ನೆಲೆಯಲ್ಲಿ ದೈನಂದಿನ ಖರ್ಚಿಗಾಗಿ ಕೆಲವರಂತೂ ಗೋವಾದಲ್ಲಿ ಭಿಕ್ಷೆ ಬೇಡುವ ಸ್ಥಿತಿಗೆ ಬಂದು ತಲುಪಿದ್ದಾರೆ. ಇಂತಹ ಪರಿಸ್ಥಿತಿ ಗೋವಾದ ಹರಮಲ್ ಮತ್ತು ಇತರ ಕಿನಾರಿ ಭಾಗದಲ್ಲಿ ಕಂಡುಬರುತ್ತಿದೆ.

Advertisement

ಆರ್ಥಿಕ ತೊಂದರೆಗೆ ಸಿಲುಕಿರುವ ಕೆಲ ವಿದೇಶಿ ಪ್ರವಾಸಿಗರಂತೂ ರಸ್ತೆಗಿಳಿದು ಸ್ಥಳೀಯ ಜನರ ಬಳಿ ಹಣಕ್ಕಾಗಿ ಅಂಗಲಾಚುವ ಪರಿಸ್ಥಿತಿಗೆ ತಲುಪಿದ್ದಾರೆ. ಕೆಲವು ಪ್ರವಾಸಿಗರಿಗಂತೂ ಮಾಸ್ಕ ಇಲ್ಲ, ಕೆಲವರು ಅಪಘಾತದಲ್ಲಿ ಗಾಯಗೊಂಡವರೂ ಇದ್ದಾರೆ, ಚಿಕಿತ್ಸೆಗೆ ಹಣವಿಲ್ಲ. ವೀಸಾ ಅವಧಿ ಮುಗಿದು ಗೋವಾದಲ್ಲಿ ಸಿಲುಕಿಕೊಂಡಿರುವ ವಿದೇಶಿ ಪ್ರವಾಸಿಗರನ್ನು ಅವರವರ ದೇಶಕ್ಕೆ ಕಳುಹಿಸುವ ಜವಾಬ್ದಾರಿಯನ್ನು ಸರ್ಕಾರ ತೆಗೆದುಕೊಳ್ಳಬೇಕು ಎಂದು ಹರಮಲ್ ಪಂಚಾಯತಿ ಸದಸ್ಯ ಪ್ರವೀಣ ವಾಯಂಗಣಕರ್ ಸರ್ಕಾರದ ಬಳಿ ಮನವಿ ಮಾಡಿದ್ದಾರೆ.

ಪೆಡ್ನೆ ತಾಲೂಕಿನ ಮೋರಜಿ, ಆಶ್ವೆ, ಮಾಂದ್ರೆ, ಹರಮಲ್, ಕೇರಿ ಭಾಗದಲ್ಲಿ ನೂರಕ್ಕೂ ಹೆಚ್ಚು ವಿದೇಶಿ ಪ್ರವಾಸಿಗರು ಸಿಲುಕಿಕೊಂಡಿದ್ದಾರೆ. ಕಳೆದ ಕೆಲ ದಿನಗಳ ವರೆಗೆ ಜೀವನೋಪಾಯಕ್ಕಾಗಿ ಈ ಪ್ರವಾಸಿಗರು ಹೋಟೇಲ್‍ಗಳಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಸದ್ಯ ಹೋಟೆಲ್ ಕೂಡ ಬಂದ್ ಆಗಿರುವುದರಿಂದ ಅವರ ದೈನಂದಿನ ಖರ್ಚಿಗಾಗಿ ಅವರ ಬಳಿ ಹಣವಿಲ್ಲದಂತಾಗಿದೆ. ಜೇಬಿನಲ್ಲಿ ಹಣವಿಲ್ಲದೆಯೇ ಒಂದು ಹೊತ್ತಿನ ಊಟಕ್ಕೂ ತೊಂದರೆ ಅನುಭವಿಸುವಂತಾಗಿದೆ.

ಈ ವಿದೇಶಿ ಪ್ರವಾಸಿಗರು ಕಳೆದ ವರ್ಷ ಲಾಕ್‍ಡೌನ್ ಸಂದರ್ಬದಲ್ಲಿ ಗೋವಾಕ್ಕೆ ಬಂದು ಸಿಲುಕಿಕೊಂಡಿದ್ದರು. ಆದರೆ ಅಂದು ಕೆಲ ತಿಂಗಳ ವರೆಗೆ ಗೋವಾದ ಸ್ಥಳೀಯರು ಅವರಿಗೆ ಪ್ರತಿನಿತ್ಯ ಊಟ ನೀಡಿದ್ದರು. ಬಾಡಿಗೆ ಮನೆ ಮಾಲೀಕರು ಬಾಡಿಗೆ ಮಾಫ ಮಾಡಿದ್ದರು. ಆದರೆ ಇದೀಗ ಅವರ ವೀಸಾ ಅವಧಿಯೂ ಮುಕ್ತಾಯಗೊಂಡಿದ್ದು ವಸತಿ ಮತ್ತು ಊಟಕ್ಕೂ ತೊಂದರೆ ಅನುಭವಿಸುತ್ತಿದ್ದಾರೆ.

ಕೆಲ ವಿದೇಶಿ ಪ್ರವಾಸಿಗರು ಅಪಘಾತದಲ್ಲಿ ಗಾಯಗೊಂಡವರೂ ಇದ್ದಾರೆ. ಇಂತವರು ಚಿಕಿತ್ಸೆಗೂ ಹಣವಿಲ್ಲದೆಯೇ ತೊಂದರೆ ಅನುಭವಿಸುತ್ತಿದ್ದಾರೆ. ಇಂತವರಿಗೆ ಸರ್ಕಾರ ಕೂಡಲೇ ಸೂಕ್ತಿ ಚಿಕಿತ್ಸೆ ಕೊಡಿಸುವ ಅಗತ್ಯವಿದೆ. ಈ ವಿದೇಶಿ ಪ್ರವಾಸಿಗರನ್ನು ಅವರವರ ದೇಶಕ್ಕೆ ಕಳುಹಿಸಲು ಸರ್ಕಾರ ಕೂಡಲೇ ವ್ಯವಸ್ಥೆ ಮಾಡಬೇಕಿದೆ ಎಂದು ಸ್ಥಳೀಯರಿಂದ ಆಘ್ರಹ ವ್ಯಕ್ತವಾಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next