ಗದಗ: ಒಂಭತ್ತು ತಿಂಗಳ ಹಿಂದೆ ಅಪ್ಪಳಿಸಿದ್ದ ಭೀಕರ ಪ್ರವಾಹದ ಹೊಡೆತಕ್ಕೆ ಜಿಲ್ಲೆಯ ಜನರು ಅಕ್ಷರಶಃ ನಲುಗಿದ್ದಾರೆ. ಪ್ರವಾಹದಲ್ಲಿ ನರಗುಂದ, ರೋಣ ಮತ್ತು ಮುಂಡರಗಿ ತಾಲೂಕುಗಳಲ್ಲಿ ಹೆಚ್ಚು ಹಾನಿ ಸಂಭವಿಸಿದೆ. ಇದರಿಂದ ಚೇತರಿಸಿಕೊಳ್ಳುವ ಮಧ್ಯೆಯೇ ಕೋವಿಡ್ 19 ಭೀತಿ ಆವರಿಸಿದ್ದು, ಲಾಕ್ ಡೌನ್ ಜಾರಿಗೊಂಡಿದ್ದರಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ. ನೆರೆ ಸಂತ್ರಸ್ತರಿಗೆ ಮನೆ, ರಸ್ತೆ ಸೇರಿದಂತೆ ಮೂಲ ಸೌಕರ್ಯ ಒದಗಿಸಲು ಕೋವಿಡ್ 19 ಕೊಕ್ಕೆ ಹಾಕಿದೆ.
ಕಳೆದ ವರ್ಷ ಸುರಿದ ಭಾರಿ ಮಳೆಯಿಂದಾಗಿ ಮಲಪ್ರಭಾ ನದಿ ಹಾಗೂ ಬೆಣ್ಣೆಹಳ್ಳ ಉಕ್ಕಿ ಹರಿದಿದ್ದವು. ಇದರಿಂದ ನರಗುಂದ ಹಾಗೂ ರೋಣ ತಾಲೂಕಿನ ಹಲವು ಗ್ರಾಮಗಳು ನೆರೆ ಹಾವಳಿಗೆ ಒಳಗಾಗಿದ್ದವು. ತುಂಗಭದ್ರ ನದಿ ಪಾತ್ರದ ಶಿರಹಟ್ಟಿ, ಮುಂಡರಗಿ ತಾಲೂಕಿನ ಕೆಲ ಗ್ರಾಮಗಳು ಜಲಾವೃತಗೊಂಡಿದ್ದವು. ಇದರಿಂದ ಅನೇಕ ರಸ್ತೆ, ಸೇತುವೆಗಳು ಕೊಚ್ಚಿ ಹೋಗಿವೆ. ಸಾವಿರಾರು ಮನೆಗಳು ಕುಸಿದು, ಜನರ ಬದುಕು ದುಸ್ತರವಾಗಿತ್ತು. ಈ ಹಿನ್ನೆಲೆಯಲ್ಲಿ ಮನೆ ನಿರ್ಮಾಣಕ್ಕಾಗಿ ಸರ್ಕಾರ ಫಲಾನುಭವಿಗಳಿಗೆ ನೇರವಾಗಿ ಅನುದಾನ ನೀಡಿದೆ. ಆದರೆ, ಹೊಳೆಆಲೂರು ಗ್ರಾಮವೊಂದರಲ್ಲೇ 264 ಮನೆಗಳು ಕುಸಿದಿವೆ. ಕೊಣ್ಣೂರಿನಲ್ಲಿ ಶೇ. 80ಕ್ಕಿಂತ ಹೆಚ್ಚು ಮನೆಗಳು ನೆಲಕ್ಕುರುಳಿವೆ. ಹೀಗಾಗಿ ಕಟ್ಟಡ ಕಾರ್ಮಿಕರ ಸಮಸ್ಯೆ ಹಾಗೂ ಲಾಕ್‌ಡೌನಿಂದಾಗಿ ಮತ್ತಷ್ಟು ವಿಳಂಬವಾಗುತ್ತಿದೆ. ಈ ಮಧ್ಯೆ ಮತ್ತೆ ಮಳೆಗಾಲ ಎದುರಾಗುತ್ತಿದ್ದು, ನೆರೆ ಸಂತ್ರಸ್ತರನ್ನು ಚಿಂತೆಗೆ ದೂಡಿದೆ.
ಅರ್ಧಕ್ಕೆ ನಿಂತ ಕೆಲಸ: ಜಿಲ್ಲೆಯ ನರಗುಂದ ಮತ್ತು ರೋಣ ತಾಲೂಕಿನಲ್ಲಿ ಒಟ್ಟು 1,251 ಮನೆಗಳು ಸಂಪೂರ್ಣ ಕುಸಿದಿವೆ. ರೋಣ ತಾಲೂಕಿನ ಕಪ್ಪಲಿ, ಕೊಣ್ಣೂರು ಹಾಗೂ ವಾಸನದಲ್ಲಿ ನಿರ್ಮಿಸಿರುವ ತಾತ್ಕಾಲಿಕ ಶೆಡ್ ಗಳನ್ನು 190 ಕಟುಂಬಗಳಿಗೆ ಹಸ್ತಾಂತರಿಸಲಾಗಿದೆ. ಮನೆ ನಿರ್ಮಾಣಕ್ಕೆ ಈಗಾಗಲೇ ಸರಕಾರ ಘೋಷಿಸಿರುವಂತೆ ಐದು ಲಕ್ಷ ರೂ. ಪೈಕಿ ಮೊದಲ ಕಂತಿನಲ್ಲಿ ತಲಾ 1 ಲಕ್ಷ ರೂ. ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗಿದೆ. ಲಾಕ್ ಡೌನ್ ಜಾರಿಗೊಂಡಿದ್ದರಿಂದ ಬಹುತೇಕ ಮನೆಗಳ ನಿರ್ಮಾಣ ಕಾರ್ಯ ನಿಂತಿವೆ.
ನನೆಗುದಿಗೆ: ಅನೇಕ ರಸ್ತೆ, ಸೇತುವೆಗಳು ಹಾನಿಗೊಳಗಾಗಿವೆ. ಹೀಗಾಗಿ ಪಂಚಾಯತ್ ರಾಜ್ ಇಂಜನಿಯರ್ ವಿಭಾಗದಿಂದ ಒಟ್ಟು 189 ಕಾಮಗಾರಿಗಳನ್ನು 21.15 ಕೋಟಿ ರೂ. ಅಂದಾಜು ಮೊತ್ತದಲ್ಲಿ ತುಂಡು ಗುತ್ತಿಗೆ ನೀಡಲಾಗಿದೆ. ಈ ಪೈಕಿ 7.18 ಕೋಟಿ ರೂ. ಬಿಡುಗಡೆಯಾಗಿದ್ದು, 30 ಕಾಮಗಾರಿಗಳು ಪೂರ್ಣಗೊಂಡಿವೆ. ಶಿಹರಟ್ಟಿಯಲ್ಲಿ 27 ಕಾಮಗಾರಿಗಳು ಪೂರ್ಣಗೊಂಡಿವೆ. ಇನ್ನುಳಿದ ತಾಲೂಕಿಗಳಲ್ಲಿ ಪೂರ್ಣಗೊಂಡ ಕಾಮಗಾರಿಗಳ ಸಂಖ್ಯೆ ಒಂದೆರಡು ಮಾತ್ರ ಎಂಬುದು ಗಮನಾರ್ಹ. ಆಯಾ ತಾಲೂಕಿನ ಶಾಸಕರ ಬೆಂಲಿಗರೇ ಕಾಮಗಾರಿಗಳನ್ನು ಗುತ್ತಿಗೆ ಪಡೆದಿದ್ದರಿಂದ ಸಕಾಲಕ್ಕೆ ಪೂರ್ಣಗೊಳಿಸುತ್ತಿಲ್ಲ ಎನ್ನಲಾಗಿದೆ.
281 ಶಾಲೆಗಳ 770 ಕೊಠಡಿಗಳ ದುರಸ್ತಿಗಾಗಿ 1656.50 ಲಕ್ಷ ರೂ. ಕ್ರಿಯಾ ಯೋಜನೆಗೆ ಅನುಮೋದನೆ ನೀಡಿ, 10.52 ಕೋಟಿ ರೂ. ಗಳನ್ನು ಆಯಾ ಸರಕಾರಿ ಶಾಲೆಗಳ ಎಸ್ ಡಿಎಂಸಿ ಖಾತೆಗಳಿಗೆ ಬಿಡುಗಡೆ ಮಾಡಿದೆ. ಸಂಪೂರ್ಣವಾಗಿ ಬಿದ್ದಿರುವ ಐದು ಅಂಗನವಾಡಿಗಳ ಮರು ನಿರ್ಮಾಣಕ್ಕಾಗಿ 72.5 ಲಕ್ಷ ರೂ., 67ಅಂಗನವಾಡಿಗಳ ದುರಸ್ತಿಗಾಗಿ 88.69 ಲಕ್ಷ ರೂ. ಬಿಡುಗಡೆ ಮಾಡಿದ್ದು, ಕೆಲ ಕಾಮಗಾರಿಗಳು ಪ್ರಗತಿಯಲ್ಲಿವೆ.
ಲಾಕ್‌ಡೌನ್ ಸಡಿಲಿಕೆಯಾಗಿದ್ದರಿಂದ ಗ್ರಾಮೀಣ ಭಾಗದ ನೆರೆ ಸಂತ್ರಸ್ತರು ಸಾಮಾಜಿಕ ಅಂತರ ಕಾಯ್ದುಕೊಂಡು ಮನೆ ನಿರ್ಮಿಸಿಕೊಳ್ಳಬಹುದು. ಸಿಮೆಂಟ್, ಕಬ್ಬಿಣದ ಬೆಲೆಗಳ ಬಗ್ಗೆ ಪರಿಶೀಲಿಸಲಾಗುವುದು.
-ಎಂ.ಜಿ. ಹಿರೇಮಠ, ಜಿಲ್ಲಾಧಿಕಾರಿ
ನೆರೆ ಸಂತ್ರಸ್ತರು ಮೊದಲೇ ಸಂಕಷ್ಟದಲ್ಲಿದ್ದಾರೆ. ಈಗ ಲಾಕ್‌ಡೌನ್‌ನಿಂದ ಸಡಿಲಿಕೆ ನೀಡಿದರೂ, ಕಟ್ಟಡ ನಿರ್ಮಾಣ ವಸ್ತುಗಳ ಬೆಲೆಗಳು ಗಗನಕ್ಕೇರಿವೆ.ಸಿಮೆಂಟ್, ಕಬ್ಬಿಣದ ಬೆಲೆ ನಿಯಂತ್ರಣಕ್ಕೆ ಜಿಲ್ಲಾಡಳಿತ ಗಮನ ಹರಿಸಬೇಕು. ಒಂದೊಮ್ಮೆ ಮನೆ ನಿರ್ಮಾಣಕ್ಕೂ ಮುನ್ನವೇ ಮುಂಗಾರು ಮಳೆ ಆರಂಭವಾದರೆ,ಪ್ರವಾಹ ಪೀಡಿತ ಜನರ ಕಷ್ಟ ಊಹಿಸಿಕೊಳ್ಳುವುದೂ ಕಷ್ಟ.
-ಸಿದ್ದು ಪಾಟೀಲ, ಜಿಪಂ ಅಧ್ಯಕ್ಷ
–ವೀರೇಂದ್ರ ನಾಗಲದಿನ್ನಿ