ಕ್ಯಾಲಿಫೋರ್ನಿಯ: ಜಾಗತಿಕ ಮಟ್ಟದಲ್ಲಿ ಕೋವಿಡ್ ಲಾಕ್‌ಡೌನ್ ಜಾರಿಗೊಳಿಸಿದ ಕಾರಣ ಸುಮಾರು 531 ಮಿಲಿಯನ್ ಮಂದಿಗೆ ಸೋಂಕು ಹರಡುವುದು ತಪ್ಪಿರಬಹುದು ಎಂದು ಅಧ್ಯಯನಗಳಿಂದ ತಿಳಿದು ಬಂದಿದೆ. ಜಾಗತಿಕ ಮಟ್ಟದಲ್ಲಿ ಲಾಕ್‌ಡೌನ್ ಪರಿಣಾಮಗಳ ಬಗ್ಗೆ ನಡೆಸಿರುವ ಎರಡು ಹೊಸ ಅಧ್ಯಯನಗಳು ತಿಳಿಸುವ ಪ್ರಕಾರ, ಕೆಲವು ದೇಶಗಳಲ್ಲಿ ಲಾಕ್‌ಡೌನ್ ಅನ್ನು ಸರಿಯಾಗಿ ಅನುಷ್ಠಾನಗೊಳಿಸಿರುವುದರಿಂದ ಸೋಂಕು ಇಳಿಮುಖವಾಗಿದೆ ಮತ್ತು ದೊಡ್ಡ ಪ್ರಮಾಣದಲ್ಲಿ ಇತರರಿಗೆ ಹರಡುವುದನ್ನು ನಿಯಂತ್ರಿಸಲಾಗಿದೆ. ಪರಿಣಾಮವಾಗಿ ಮಿಲಿಯಗಟ್ಟಲೆ ಜನರು ಸೋಂಕಿಗೊಳಗಾಗದೆ ಸುರಕ್ಷಿತರಾಗಿ ಉಳಿದಿದ್ದಾರೆ ಎಂದು ತಿಳಿದು ಬಂದಿದೆ.
ಯೂನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯದ ವತಿ ಯಿಂದ ನಡೆಸಲಾದ ಬೆರ್ಕ್‌ಲೀ ವರದಿಯ ಪ್ರಕಾರ, ಚೀನ, ದಕ್ಷಿಣ ಕೊರಿಯ, ಇರಾನ್, ಇಟೆಲಿ, ಫ್ರಾನ್ಸ್ ಮತ್ತು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಲಾಕ್‌ಡೌನ್‌ನಿಂದಾಗಿ ಸುಮಾರು 531 ಮಿಲಿಯನ್ ಜನರಿಗೆ ಸೋಂಕು ಹರಡುವುದು ತಪ್ಪಿದೆ ಅಥವಾ ವಿಳಂಬವಾಗಿದೆ ಎಂದು ತಿಳಿಸಲಾಗಿದೆ. ಈ ವರದಿಯು ಜೂನ್ 8ರ “ನೇಚರ್’ನಲ್ಲಿ ಪ್ರಕಟವಾಗಿದೆ.
ಲಂಡನ್‌ನ ಇಂಪೀರಿಯಲ್ ಕಾಲೇಜ್‌ನ ವಿಜ್ಞಾನಿಗಳು ನಡೆಸಿದ ಇನ್ನೊಂದು ಅಧ್ಯಯನದ ಪ್ರಕಾರ, ಲಾಕ್‌ಡೌನ್‌ನಿಂದಾಗಿ ಸುಮಾರು 11 ಯೂರೋಪಿಯನ್ ದೇಶಗಳ ಅಂದಾಜು 3.1 ಮಿಲಿಯನ್ ಜನರು ಸೋಂಕಿನಿಂದ ರಕ್ಷಿಸಲ್ಪಟ್ಟಿದ್ದಾರೆ ಎಂದು ತಿಳಿದು ಬರುತ್ತದೆ. ವೈರಸ್ ತಡೆಯಲು ಕ್ರಮ ಕೈಗೊಳ್ಳುವ ಮೊದಲು ಮತ್ತು ಅನಂತರದ ಪರಿಸ್ಥಿತಿಯನ್ನು ಗಮನಿಸಿದರೆ, ಯೂರೋಪ್‌ನಲ್ಲಿ ಕ್ರಮ ಕೈಗೊಂಡ ಬಳಿಕ ಸೋಂಕಿನ ಪ್ರಮಾಣವು ಸರಾಸರಿ 81ರಷ್ಟು ಇಳಿಕೆಯಾಗಿದೆ ಎಂದು “ನೇಚರ್’ನ ವರದಿಯು ತಿಳಿಸಿದೆ. ಪ್ರತಿ ಸೋಂಕಿತನು ಸರಾಸರಿ ಒಬ್ಬನಿಂದ ಕಡಿಮೆ ವ್ಯಕ್ತಿಗೆ ವೈರಸ್ ಹರಡಿದ್ದಾನೆ ಎಂದು ತಿಳಿದು ಬರುತ್ತದೆ. ಹರಡುವಿಕೆ ಪ್ರಮಾಣವು ಇಷ್ಟು ಕನಿಷ್ಠ ಮಟ್ಟದಲ್ಲಿರುವುದನ್ನು ಗಮನಿಸಿದರೆ ಲಾಕ್‌ಡೌನ್ ಮುಗಿಯುವ ಹೊತ್ತಿಗೆ ವೈರಸ್ ಕೂಡ ನಿರ್ಮೂಲವಾಗುವ ಸಾಧ್ಯತೆಯಿದೆ ಎಂದು ಅಧ್ಯಯನದಲ್ಲಿ ತಿಳಿಸಲಾಗಿದೆ.
“ಕೋವಿಡ್ ನಿಯಂತ್ರಣಕ್ಕಾಗಿ ಬೇರೆ ಬೇರೆ ದೇಶಗಳು ವಿವಿಧ ರೀತಿಯ ಸುರಕ್ಷಾ ಕ್ರಮಗಳನ್ನು ಕೈಗೊಂಡಿವೆ. ಇವುಗಳೆಲ್ಲ ಸರಿಯಾಗಿ ಕೆಲಸ ಮಾಡಿವೆ. ಅಸಂಖ್ಯಾಕ ಮಂದಿಯ ಜೀವ ರಕ್ಷಿಸಿದೆ’ ಎಂದು ರಲೈಘ…ನಲ್ಲಿರುವ ನಾರ್ತ್ ಕ್ಯಾಲಿಫೋರ್ನಿಯ ಸ್ಟೇಟ್ ಯೂನಿವರ್ಸಿಟಿಯ ರೋಗ ಸಂಬಂಧಿ ಗಣಿತ ಶಾಸ್ತ್ರಜ್ಞ ಅಲುನ್ ಲೋಯ್ಡ ಅವರು ತಿಳಿಸಿದ್ದಾರೆ. ಆದರೆ ಈ ದೇಶಗಳೆಲ್ಲ ಈಗ ನಿರ್ಬಂಧಗಳನ್ನು ತೆಗೆದು ಹಾಕುತ್ತಿದ್ದು, ಇದರಿಂದಾಗಿ ಸೋಂಕು ಹೆಚ್ಚಾಗುವ ಅಪಾಯವಿದೆ ಎನ್ನುತ್ತಾರೆ ತಜ್ಞರು.