Advertisement

ಲಾಕ್‌ಡೌನ್‌ನಿಂದ ಶೇ. 41ರಷ್ಟು ಜನರಿಗೆ ಉದ್ಯೋಗ ನಷ್ಟ; ಅಜೀಂ ಪ್ರೇಮ್‌ ಜೀ ವಿವಿ

12:32 PM Mar 30, 2022 | Team Udayavani |

ಬೆಂಗಳೂರು, ಮಾ. 29: ಲಾಕ್‌ಡೌನ್‌ ಸಮಯದಲ್ಲಿ ಶೇ. 41ರಷ್ಟು ಜನರು ಉದ್ಯೋಗ ಕಳೆದುಕೊಂಡಿದ್ದು, ಕೊರೊನಾ ಸಾಂಕ್ರಾಮಿಕ ರೋಗ ಬಂದು ಒಂದೂವರೆ ವರ್ಷ ಕಳೆದರೂ ಶೇ. 21ರಷ್ಟು ಜನರು ಹಿಂದಿನ ವೇತನ ಪಡೆದುಕೊಳ್ಳಲು ಸಾಧ್ಯವಾಗದಿರುವುದು ಸಮೀಕ್ಷೆಯಿಂದ ಬೆಳಕಿಗೆ ಬಂದಿದೆ.

Advertisement

ಕೊರೊನಾ ಸಮಯದಲ್ಲಿ ಬೆಂಗಳೂರು ನಗರದಲ್ಲಿ ಆರ್ಥಿಕವಾಗಿ ಹಿಂದುಳಿದಿರುವವರ ಕುರಿತು ಅಜೀಂ ಪ್ರೇಮ್‌ ಜೀ ವಿಶ್ವವಿದ್ಯಾಲಯವು ಕೈಗೊಂಡ “ಕೊರೊನಾ ಸಾಂಕ್ರಾಮಿಕ ಪರಿಣಾಮಗಳು’ ಕುರಿತ ಸಮೀಕ್ಷೆಯಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ.

ನಗರದ 33 ವಾರ್ಡ್‌ಗಳಲ್ಲಿ 3 ಸಾವಿರ ಕುಟುಂಬಗಳಲ್ಲಿ ಸಮೀಕ್ಷೆ ನಡೆಸಿದ್ದು, ಲಾಕ್‌ಡೌನ್‌ ವೇಳೆ ಜನರ ಜೀವನೋಪಾಯ, ಉದ್ಯೋಗ, ಶಿಕ್ಷಣ, ಆರೋಗ್ಯ ಕ್ಷೇತ್ರ ಮತ್ತು ಆರ್ಥಿಕತೆ ಮೇಲೆ ಉಂಟಾದ ಪರಿಣಾಮಗಳನ್ನು ಕುರಿತು ಸಮೀಕ್ಷೆ ನಡೆಸಿದೆ. ವಾಹನ ಚಾಲಕರು, ದಿನಗೂಲಿ ನೌಕರರು, ಮನೆಗೆಲಸದವರು ಮತ್ತು ಕಾರ್ಖಾನೆಗಳ ಕಾರ್ಮಿಕರನ್ನು ಒಳಗೊಂಡ ಸಮೀಕ್ಷೆಯನ್ನು 2021ರ ಅಕ್ಟೋಬರ್‌ ತಿಂಗಳಿನಲ್ಲಿ ನಡೆಸಲಾಗಿದೆ.

ಶೇ. 80 ಮಂದಿಗೆ ಕನಿಷ್ಠ ವೇತನವೂ ಇರಲಿಲ್ಲ 2020ರ ಲಾಕ್‌ಡೌನ್‌ ಅವಧಿಯ ಅನಂತರವೂ ಉದ್ಯೋಗ ಮತ್ತು ಆದಾಯ ನಷ್ಟಗಳು ಮುಂದುವರಿದಿವೆ. ಫೆಬ್ರವರಿ 2021ರಲ್ಲಿ ಶೇ. 41ರಷ್ಟು ಕಾರ್ಮಿಕರು ಉದ್ಯೋಗ ಕಳೆದುಕೊಂಡಿದ್ದು, ಶೇ. 21ರಷ್ಟು ಜನರಿಗೆ ಆದಾಯ ಕುಂಠಿತವಾಗಿದೆ.

ದಿನಗೂಲಿ ಕಾರ್ಮಿಕರು, ಮನೆಗೆಲಸ ಮಾಡುವವರು ಮತ್ತು ಚಿಲ್ಲರೆ ವ್ಯಾಪಾರದಲ್ಲಿ ತೊಡಗಿರುವ ಶ್ರಮಿಕರು ಅತ್ಯಂತ ಹೆಚ್ಚು ಹಾನಿಗೆ ತುತ್ತಾಗಿದ್ದಾರೆ. 2021ರ ಅಕ್ಟೋಬರ್‌ನಲ್ಲಿಯೂ ಶೇ. 21ರಷ್ಟು ಪುರುಷರು ಮತ್ತು ಶೇ. 15ರಷ್ಟು ಮಹಿಳೆಯರು ಉದ್ಯೋಗ ಕಳೆದುಕೊಂಡ ಸ್ಥಿತಿ ಮುಂದುವರಿದಿದೆ ಎಂದರು.ಶೇ. 80ರಷ್ಟು ಜನರಿಗೆ ರಾಷ್ಟ್ರೀಯ ಕನಿಷ್ಠ ವೇತನ (ಪ್ರತಿ ದಿನಕ್ಕೆ 119 ರೂ.) ಕೂಡ ಕಡಿಮೆಯಾಗಿದೆ.

Advertisement

ಅದೇ ರೀತಿ ಆಹಾರ ಅಭದ್ರತೆ ಕೂಡ ತೀವ್ರವಾಗಿ ಏರಿಕೆ ಕಂಡಿದೆ. ಶೇ. 40ರಷ್ಟು ಕುಟಂಬಗಳ ಜನರು ಕೊರೊನಾ ಪೂರ್ವದಲ್ಲಿ ಸೇವಿಸುತ್ತಿದ್ದ ಆಹಾರಕ್ಕಿಂತ ಕಡಿಮೆ ಪ್ರಮಾಣದ ಆಹಾರವನ್ನು ಸೇವಿಸಿದ್ದಾರೆ. ಸಾಲ ತೀರಿಸುವುದಕ್ಕಾಗಿ ಸಾಲ ಕೊರೊನಾ ಸಮಯದಲ್ಲಿ ಜನರು ಈ ಹಿಂದೆ ಮಾಡಿದ್ದ ಹಳೆಯ ಸಾಲ ತೀರಿಸಲು ಹೊಸದಾಗಿ ಸಾಲ ಮಾಡಿಕೊಂಡಿದ್ದಾರೆ. ಶೇ. 11ರಷ್ಟು ಜನರು ಜೀವನ ನಿರ್ವಹಣೆ ಮತ್ತು ಹಳೆಯ ಸಾಲ ತೀರಿಸಲು ಹೊಸ ಸಾಲ ಮಾಡಿದ್ದಾರೆ. ಶೇ. 15ರಷ್ಟು ಜನರು ಒಡವೆ ಮಾರಿ ಅಥವಾ ಗಿರವಿ ಇಟ್ಟಿರುವುದು ತಿಳಿದು ಬಂದಿದೆ.

ಮೂಲಸೌಕರ್ಯ ವಂಚಿತ ಕುಟುಂಬಗಳು
* ಸರ್ವೆಯಲ್ಲಿ ಶೇ. 8ರಷ್ಟು ಜನರಿಗೆ ವೈಯಕ್ತಿಕವಾಗಿ ಅಥವಾ ಸಾರ್ವಜನಿಕವಾಗಿ ಯಾವುದೇ ಶೌಚಾಲಯಗಳಿಲ್ಲ.ಬಯಲುಗಳನ್ನೇ ಆಶ್ರಯಿಸಿದ್ದಾರೆ.

* ಶೇ. 33ರಷ್ಟು ಜನರು ಸಾರ್ವಜನಿಕವಾಗಿ ಪೈಪುಗಳಲ್ಲಿ ಬರುವ ನಳ್ಳಿ ನೀರನ್ನೇ ಆಶ್ರಯಿಸಿದ್ದಾರೆ. ಶೇ. 6ರಷ್ಟು ಜನರು ಟ್ಯಾಂಕರ್‌ಗಳಿಂದ ನೀರನ್ನು ಖರೀದಿಸುತ್ತಾರೆ.

* ಶೇ. 91.5ರಷ್ಟು ಜನರಿಗೆ ಸ್ವಂತ ಮನೆಯಿಲ್ಲ

* ಶೇ. 74ರಷ್ಟು ಜನರಿಗೆ ಬೈಕ್‌ಗಳಿಲ್ಲ

* ಶೇ. 44ರಷ್ಟು ಜನರ ಮನೆಗಳಲ್ಲಿ ವಾಷಿಂಗ್‌ ಮೆಷಿನ್‌, ಫ್ರಿಡ್ಜ್ ಮತ್ತು ಮಿಕ್ಸಿಗಳಿಲ್ಲ

Advertisement

Udayavani is now on Telegram. Click here to join our channel and stay updated with the latest news.

Next