Advertisement

ಲಾಕ್‌ಡೌನ್‌: ಭತ್ತ ಕಟಾವಿಗೂ ಅಡ್ಡಿ, ಆತಂಕ

06:13 PM Mar 30, 2020 | Sriram |

ಕಟಪಾಡಿ: ಕೋವಿಡ್-19 ವೈರಸ್‌ ಸಮಸ್ಯೆ ನಿಮಿತ್ತ ಜಾರಿಯಲ್ಲಿರುವ ಲಾಕ್‌ಡೌನ್‌ ಈಗ ಭತ್ತ ಕಟಾವಿಗೂ ಅಡ್ಡಿಯಾಗಿದೆ. ಬೆಳೆದ ಬೆಳೆಯನ್ನು ಕೊಯ್ಯಲಾಗದೆ ಈಗ ರೈತರೂ ಕಂಗಾಲಾಗಿದ್ದಾರೆ.

Advertisement

ಕುರ್ಕಾಲು ಗ್ರಾಮದ ಪಾಜೈ, ಅಂಬಡೆಪಾಡಿ ಸಹಿತ ಕಾಪು ತಾಲೂಕಿ ನಾದ್ಯಂತ ಕಟಾವಿಗೆ ಬೆಳೆದು ನಿಂತ ಕೊಳಕೆ ಬೆಳೆಯು ಸಾಕಷ್ಟು ಬಲಿತಿದ್ದು, ಪೈರು ಗದ್ದೆಯಲ್ಲಿ ಅಡ್ಡ ಬೀಳಲು ಆರಂಭವಾಗಿದೆ. ಕೆಲವೆಡೆ ಭತ್ತವು ಉದುರಲು ಶುರುವಿಟ್ಟಿದ್ದು ರೈತರನ್ನು ಮತ್ತಷ್ಟು ಚಿಂತೆಗೀಡು ಮಾಡಿದೆ.

ಸುಮಾರು 100 ಎಕರೆಗೂ ಅಧಿಕ ಗದ್ದೆಗಳಲ್ಲಿ ಫ‌ಸಲು ಬೆಳೆ ನಿಂತಿದೆ. ಕಟಾವಿಗೆ ಬರಬೇಕಿದ್ದ ಯಂತ್ರದ ಚಾಲಕನಿಗೆ ಕೋಟೇಶ್ವರದಲ್ಲಿ ಲಾಠಿ ಏಟು ಬಿದ್ದಿದ್ದು, ಕಟಾವು ಯಂತ್ರ ಬಂದಿಲ್ಲ ಎಂದು ಸ್ಥಳೀಯ ರೈತರು ಹೇಳಿದ್ದಾರೆ. ಕೃಷಿ ಇಲಾಖೆಯು ಈಸೀ ಲೈಫ್‌ ಎಂಬ ಏಜೆನ್ಸಿಗೆ ಕಟಾವು ಯಂತ್ರದ ಉಸ್ತುವಾರಿ ನೀಡಿದ್ದು, ಇದೀಗ ಅವರಲ್ಲಿ ಮತ್ತೆ ವಿನಂತಿಸಿದಾಗ ಕಟಾವು ಯಂತ್ರ ಇದೆ ಆದರೆ ಚಾಲಕರು ಲಭ್ಯವಿಲ್ಲ. ಚಾಲಕರು ಬಂದ ಕೂಡಲೇ ನಿಮ್ಮ ಗದ್ದೆಗೆ ಕಟಾವಿಗೆ ಯಂತ್ರವನ್ನು ಕಳುಹಿಸುವ ಭರವಸೆ ನೀಡಿದ್ದಾರೆ. ಆದರೆ ಇನ್ನು ಮೂರು ದಿನದೊಳಗೆ ಬರದಿದ್ದರೆ ಬೆಳೆ ಮಣ್ಣು ಪಾಲಾಗುತ್ತದೆ.

ಜಿಲ್ಲೆಯಾದ್ಯಂತ ಇಂತಹ ಸಮಸ್ಯೆ ತಲೆದೋರಿದ್ದು, ಕೃಷಿ ಅಧಿಕಾರಿಗಳು ವಿಶೇಷ ಅನುಮತಿಯ ಮೂಲಕ ಕಟಾವು ಯಂತ್ರವು ರೈತ ಕ್ಷೇತ್ರ ತಲುಪುವಂತೆ ಮಾಡಬೇಕಾದ ತೀರಾ ಅವಶ್ಯಕತೆ ಇದೆ. ಜಿಲ್ಲಾಡಳಿತವು ಈ ಬಗ್ಗೆ ಗಮನ ಹರಿಸುವಂತೆ ರೈತರು ಆಗ್ರಹಿಸಿದ್ದಾರೆ.

ಪ್ರಯತ್ನ ಮಾಡುತ್ತೇನೆ
ಸ್ಥಳೀಯರ ಕೋರಿಕೆಯನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಅವರು ಭರವಸೆಯನ್ನೂ ನೀಡಿದ್ದಾರೆ. ಕಟಾವು ಯಂತ್ರ ತರಿಸುವಲ್ಲಿ ಅಧಿಕಾರಿಗಳ ಮೂಲಕ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ .
-ಲಾಲಾಜಿ ಆರ್‌ ಮೆಂಡನ್‌, ಶಾಸಕ, ಕಾಪು ವಿಧಾನ
ಸಭಾ ಕ್ಷೇತ್ರ, ಕಾಪು

Advertisement

ಹೆಚ್ಚಿನ ಗಮನ
ಸಂವಹನದಲ್ಲಿ ಆಗಿರಬಹುದಾದ ಕೊರತೆಯಿಂದ ಕಟಾವು ಯಂತ್ರ ಒದಗಿಸುವಲ್ಲಿ ಅವ್ಯವಸ್ಥೆ ಆಗಿರಬಹುದು. ಜಿಲ್ಲಾಧಿಕಾರಿಗಳೂ ರೈತರಿಗೆ ಸವಲತ್ತು ಒದಗಿಸುವಂತೆ ತಿಳಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ಗಮನ ಹರಿಸುತ್ತೇನೆ.
-ಮಹಮ್ಮದ್‌ ಇಸಾಕ್‌, ತಹಶೀಲ್ದಾರ್‌, ಕಾಪು ತಾಲೂಕು

Advertisement

Udayavani is now on Telegram. Click here to join our channel and stay updated with the latest news.

Next