Advertisement

ಲಾಕ್‌ಡೌನ್‌ನಿಂದ ಸೋಂಕು ಇಳಿಕೆ: ಗ್ರಾ.ಪಂ. ವ್ಯಾಪ್ತಿಯಲ್ಲಿ ಮತ್ತೆ ಲಾಕ್‌ಡೌನ್‌ ಮುಂದುವರಿಕೆ

08:53 PM Jun 08, 2021 | Team Udayavani |

ಉಡುಪಿ: ಜಿಲ್ಲೆಯಲ್ಲಿ ಕೋವಿಡ್‌ ಸೋಂಕು ಗಣನೀಯವಾಗಿ ಕಡಿಮೆಯಾವವರೆಗೆ ಕೊರೊನಾ ನಿಯಂತ್ರಣ ಕ್ರಮಗಳನ್ನು ಪರಿಣಾಮಕಾರಿಯಾಗಿ ಕೈಗೊಳ್ಳುವುದರ ಜತೆಗೆ ಕೋವಿಡ್‌ನ‌ 3ನೇ ಅಲೆಯ ತಡೆಗೆ ಅಗತ್ಯವಿರುವ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದರು.

Advertisement

ಮಂಗಳವಾರ ಜಿ.ಪಂ. ಡಾ| ವಿ.ಎಸ್‌. ಆಚಾರ್ಯ ಸಭಾಂಗಣದಲ್ಲಿ ಆಯೋಜಿಸಿದ್ದ ಕೋವಿಡ್‌ ನಿಯಂತ್ರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೋವಿಡ್‌ ನಿಯಂತ್ರಣಕ್ಕೆ ಪೂರ್ಣ ಲಾಕ್‌ಡೌನ್‌ ಪರಿಣಾಮಕಾರಿಯಾಗಿ ಜಾರಿಗೊಳಿಸಿದ ಹಿನ್ನೆಲೆ ಕೋವಿಡ್‌ ಪಾಸಿಟಿವ್‌ ಪ್ರಕರಣ ಕಡಿಮೆಯಾಗುತ್ತಿದೆ. ಗ್ರಾಮೀಣ ಭಾಗದಲ್ಲಿ 50ಕ್ಕೂ ಹೆಚ್ಚು ಕೋವಿಡ್‌ ಪ್ರಕರಣಗಳಿರುವ ಗ್ರಾ.ಪಂ.ಗಳಲ್ಲಿ ಸಂಪೂರ್ಣ ಲಾಕ್‌ಡೌನ್‌ ಮುಂದುವರೆಸಬೇಕು ಎಂದರು.

ಲಾಕ್‌ಡೌನ್‌ ಮುಂದುವರಿಕೆ
50 ಕ್ಕೂ ಹೆಚ್ಚು ಪ್ರಕರಣಗಳಿರುವ ಬೈಂದೂರು ತಾಲೂಕಿನ ಜಡ್ಕಲ್‌, ಶಿರೂರು, ನಾಡ, ಕಾರ್ಕಳದ ಬೆಳ್ಮಣ್‌, ಮಿಯಾರು, ಪಳ್ಳಿ, ಕುಕ್ಕುಂದೂರು, ನಲ್ಲೂರು, ಮರ್ಣೆ, ಹೆಬ್ರಿಯ ವರಂಗ, ಕುಂದಾಪುರದ ಗಂಗೊಳ್ಳಿ, ಆಲೂರು, ಕಾಪುವಿನ ಶಿರ್ವ, ಬೆಳ್ಳೆ, ಬ್ರಹ್ಮಾವರದ ಆವರ್ಸೆ, ಕೊಕ್ಕರ್ಣೆ ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯಲ್ಲಿ ಪೂರ್ಣ ಪ್ರಮಾಣದ ಲಾಕ್‌ಡೌನ್‌ ಮುಂದುವರೆಯಲಿದೆ ಎಂದರು.

ಇದನ್ನೂ ಓದಿ :ಸಾರ್ವಜನಿಕ ಸ್ಥಳದಲ್ಲಿ ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್‌ ಗೆ ಕಪಾಳಮೋಕ್ಷ : ವಿಡಿಯೋ ವೈರಲ್

ಜಿಲ್ಲೆಯಲ್ಲಿ 4,085 ಸಕ್ರಿಯ ಪ್ರಕರಣಗಳಿದ್ದು, ಅವುಗಳಲ್ಲಿ 487 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 149 ಜನ ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ ಹಾಗೂ 3,449 ಜನರು ಹೋಂ ಐಸೋಲೇಷನ್‌ನಲ್ಲಿ ಇದ್ದಾರೆ. ಜಿಲ್ಲೆಯಲ್ಲಿ ಒಟ್ಟು 18ಬ್ಲಾÂಕ್‌ ಫ‌ಂಗಸ್‌ ಪ್ರಕರಣಗಳು ಕಂಡುಬಂದಿದ್ದು, ಅವುಗಳಲ್ಲಿ 6 ಪ್ರಕರಣಗಳು ಜಿಲ್ಲೆಯವರಾಗಿದ್ದು, 12ಪ್ರಕರಣಗಳು ಹೊರ ಜಿಲ್ಲೆಯಿಂದ ಬಂದವರದ್ದಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್‌ಲಾಕ್‌ ಆಸ್ಪತ್ರೆಗೆ 4 ಪ್ರಕರಣಗಳು ಶಿಫ್ಟ್ ಮಾಡಲಾಗಿದೆ. ಇಬ್ಬರು ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ 6 ಜನರು ಗುಣಮುಖರಾಗಿದ್ದಾರೆ ಎಂದರು.

Advertisement

3ನೇ ಅಲೆ ಸಿದ್ಧತೆ
3ನೇ ಅಲೆ ಕೋವಿಡ್‌ ನಿರೋಧಕ ಲಸಿಕೆ ಪಡೆಯದ ಮಕ್ಕಳನ್ನು ಕಾಡುವ ಸಾಧ್ಯತೆಗಳಿವೆ. ತಜ್ಞರು ಸಹ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಅಗತ್ಯವಿರುವ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಒಂದೊಮ್ಮೆ ಹೆಚ್ಚು ಪ್ರಕರಣಗಳು ಕಂಡುಬಂದಲ್ಲಿ ಅವರಿಗೆ ಚಿಕಿತ್ಸೆ ನೀಡಲು ಅಗತ್ಯವಿರುವ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸಿಕೊಂಡು ಉತ್ತಮ ಚಿಕಿತ್ಸೆ ನೀಡಬೇಕು ಎಂದರು.

ಜಿಲ್ಲೆಯಲ್ಲಿ ಸೋಂಕಿತರ ಚಿಕಿತ್ಸೆಗೆ ಅಗತ್ಯವಿರುವ ಆಕ್ಸಿಜನ್‌ ಉತ್ಪಾದನಾ ಘಟಕಗಳಿಗೆ ಇಗಾಗಲೇ ಸರಕಾರಿ ಸ್ವಾಮ್ಯದ ಹಾಗೂ ಖಾಸಗಿ ಸಂಸ್ಥೆಗಳು ಸಹಾಯಹಸ್ತ ನೀಡಿದ್ದು, ಇವುಗಳ ಕಾಮಗಾರಿಗಳನ್ನು ಆದಷ್ಟು ಶೀಘ್ರವಾಗಿ ಪೂರ್ಣಗೊಳಿಸಬೇಕು. ಜನರು ದೈನಂದಿನ ಅಗತ್ಯತೆ ವಸ್ತುಗಳನ್ನು ಖರೀದಿ ಮಾಡಲು ಅವಶ್ಯವಿದ್ದಲ್ಲಿ ಮಾತ್ರ ಮನೆಯಿಂದ ಹೊರಬರಬೇಕು. ಈ ವೇಳೆ ಕೋವಿಡ್‌ ಮಾರ್ಗಸೂಚಿಗಳನ್ನು ಚಾಚೂ ತಪ್ಪದೇ ಪಾಲಿಸಬೇಕು ಎಂದರು.

ಇದನ್ನೂ ಓದಿ :ಸಂಪೂರ್ಣ ಲಾಕ್‌ಡೌನ್‌ ಯಶಸ್ವಿ, ಪಾಸಿಟಿವಿಟಿ ದರ ಶೇ.10ಕ್ಕೆ ಇಳಿಕೆ : ಉಡುಪಿ ಜಿಲ್ಲಾಧಿಕಾರಿ

ಶಾಸಕ ಸುನೀಲ್‌ ಕುಮಾರ್‌ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಕೋವಿಡ್‌ ಸೋಂಕಿತರ ಮನೆಗಳನ್ನು ಕಡ್ಡಾಯವಾಗಿ ಸೀಲ್‌ಡೌನ್‌ ಮಾಡಬೇಕು. ಪ್ರತಿಯೊಂದು ಗ್ರಾ.ಪಂ.ಗಳಲ್ಲಿ ಕೋವಿಡ್‌ ಟೆಸ್ಟಿಂಗ್‌, ಟ್ರೇಸಿಂಗ್‌ ಹಾಗೂ ಟ್ರೀಟ್‌ಮೆಂಟ್‌ ನಿಯಮವನ್ನು ತಪ್ಪದೇ ಮಾಡಬೇಕು ಎಂದರು.

ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಮಾತನಾಡಿ, ಕೋವಿಡ್‌ ನಿರೋಧಕ ಲಸಿಕೆಯನ್ನು ನೀಡಲು ಟೋಕನ್‌ ವಿತರಣೆಯನ್ನು ಪಾರದರ್ಶಕವಾಗಿರಬೇಕು. ಗ್ರಾಮೀಣ ಭಾಗದಲ್ಲಿ ಹಬ್ಬ ಹಾಗೂ ಮದುವೆ ಕಾರ್ಯಕ್ರಮಗಳಿಂದ ಹೆಚ್ಚು ಜನರಿಗೆ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ನಿರ್ಬಂಧ ಹೇರುವುದು ಸೂಕ್ತ ಎಂದರು.

ಜಿಲ್ಲಾಧಿಕಾರಿ ಜಿ. ಜಗದೀಶ್‌ ಮಾತನಾಡಿ, ಜಿಲ್ಲೆಯಲ್ಲಿ 2,75,064 ಜನರಿಗೆ ಕೊರೊನಾ ಒಂದನೇ ಡೋಸ್‌ ಹಾಗೂ 87,360 ಜನರಿಗೆ ಎರಡನೇ ಲಸಿಕೆ ನೀಡಲಾಗಿದೆ. ಇಲ್ಲಿಯವರೆಗೆ ಶೇ. 20.37 ಗುರಿ ತಲುಪುವ ಮೂಲಕ ರಾಜ್ಯದಲ್ಲಿಯೇ ಹೆಚ್ಚು ಚುಚ್ಚುಮದ್ದು ನೀಡಿರುವ ಜಿಲ್ಲೆಯಾಗಿ ಗುರುತಿಸಿಕೊಂಡಿದೆ. ರಾಜ್ಯದಿಂದ ಹೆಚ್ಚುವರಿ ಕೋವಿಡ್‌ ಲಸಿಕೆ ಸರಬರಾಜು ಮಾಡಿದರೆ ಅವುಗಳನ್ನು ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದರು.

ಕಂಟೈನ್‌ಮೆಂಟ್‌ ಝೋನ್
ಕಾಪು ತಾಲೂಕಿನ ಕೊತ್ತಲ್‌ಕಟ್ಟೆ ಹಾಗೂ ಭರತ್‌ ನಗರಗಳಲ್ಲಿ ಹೆಚ್ಚು ಕೋವಿಡ್‌ ಪ್ರಕರಣಗಳು ಕಂಡುಬರುತ್ತಿರುವ ಹಿನ್ನೆಲೆ ಅವುಗಳನ್ನು ಕಂಟೈನ್‌ಮೆಂಟ್‌ ಝೋನ್ ಗಳೆಂದು ಘೋಷಿಸುವುದರೊಂದಿಗೆ ಸೋಂಕು ಹರಡದಂತೆ ಕ್ರಮ ವಹಿಸಬೇಕು ಎಂದು ಡಿಸಿ ತಿಳಿಸಿದರು.

ಶಾಸಕರಾದ ರಘುಪತಿ ಭಟ್‌, ಲಾಲಾಜಿ ಆರ್‌ ಮೆಂಡನ್‌, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ನವೀನ್‌ ಭಟ್‌ ವೈ, ಎಸ್ಪಿ ಎನ್‌. ವಿಷ್ಣುವರ್ಧನ್‌, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಡಿಎಚ್‌ಒ ಡಾ| ನಾಗಭೂಷಣ ಉಡುಪ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next