ಬೆಂಗಳೂರು: ಲಾಕ್‌ಡೌನ್ ಮುಂದುವರಿದರೆ ಎಸೆಸೆಲ್ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುವುದೇ ಶಿಕ್ಷಣ ಇಲಾಖೆಗೆ ಕಗ್ಗಂಟಾಗಲಿದೆ.
ದ್ವಿತೀಯ ಪಿಯುಸಿಯ ಇಂಗ್ಲಿಷ್ ಪರೀಕ್ಷೆ ಮಾತ್ರವೇ ಬಾಕಿ ಉಳಿದಿದ್ದರೆ ಎಸೆಸೆಲ್ಸಿಯ ಒಂದೂ ಪರೀಕ್ಷೆ ನಡೆದಿಲ್ಲ. ಎ.14ರ ಬಳಿಕ ಪರಿಷ್ಕಋತ ವೇಳಾಪಟ್ಟಿ ಸಿದ್ಧಪಡಿಸಲು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ತಯಾರಿ ಮಾಡಿಕೊಂಡಿವೆ.
ಕೋವಿಡ್ 19 ಭೀತಿ ದಿನೇದಿನೆ ಹೆಚ್ಚುತ್ತಲೇ ಇದೆ. ಪೂರ್ಣ ಪ್ರಮಾಣದಲ್ಲಿ ಲಾಕ್‌ಡೌನ್ ಮಾಡಿದ್ದರೂ ಜನರು ಮನೆಯಿಂದ ಹೊರಗೆ ಬರುವುದನ್ನು ನಿಲ್ಲಿಸಿಲ್ಲ. ಹೀಗಾಗಿ ಲಾಕ್‌ಡೌನ್ ಮುಂದುವರಿಸುವ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಗಂಭೀರವಾಗಿ ಚಿಂತನೆ ನಡೆಸುತ್ತಿವೆ.
ಒಂದೊಮ್ಮೆ ಲಾಕ್‌ಡೌನ್ ಮುಂದುವರಿದರೆ ಎಸೆಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ಸಾಕಷ್ಟು ಸಾಹಸ ಮಾಡಬೇಕಾಗುತ್ತದೆ. ಲಾಕ್‌ಡೌನ್ ಅನ್ನು ಹಂತಹಂತವಾಗಿ ಸಡಿಲಗೊಳಿಸಿದರೂ ಬಸ್ ಸೇವೆ ಇತ್ಯಾದಿಗಳನ್ನು ಕೂಡಲೇ ಆರಂಭಿಸಲು ಸಾಧ್ಯವಾಗದು.ಅಲ್ಲದೇ ಮಕ್ಕಳನ್ನು ಗುಂಪು ಗುಂಪಾಗಿ ಸೇರಿಸುವುದು ಕಷ್ಟವಾಗುತ್ತದೆ. ಹೀಗಾಗಿ ಎಸೆಸೆಲ್ಸಿ ಬೋರ್ಡ್ ಮತ್ತು ಪಿಯು ಇಲಾಖೆಗೆ ಈಗ ಪರೀಕ್ಷೆ ಹೇಗೆ ನಡೆಸುವುದು ಎಂಬುದೇ ತಲೆನೋವಾಗಿ ಪರಿಣಮಿಸಿದೆ.
ಸರಕಾರ ಲಾಕ್‌ಡೌನ್ ಮುಂದುವರಿಸಿದ ಅನಂತರ ಅಥವಾ ಮುಂದುವರಿಸುವ ಸಂದರ್ಭದಲ್ಲಿ ನೀಡುವ ಮಾರ್ಗಸೂಚಿಗೆ ಅನುಗುಣವಾಗಿ ಶಿಕ್ಷಣ ಇಲಾಖೆ ಕ್ರಮ ತೆಗೆದುಕೊಳ್ಳಲಿದೆ. ವಿದ್ಯಾರ್ಥಿಗಳ ಆರೋಗ್ಯಕ್ಕೆ ಯಾವುದೇ ರೀತಿಯಲ್ಲೂ ಸಂಕಷ್ಟ ಬಾರದ ಮಾದರಿಯಲ್ಲಿ ಕ್ರಮ ಇರಲಿದೆ ಎಂದು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಪುನರ್ ಮನನ ಹೇಗೆ?
ಎಸೆಸೆಲ್ಸಿ ವಿದ್ಯಾರ್ಥಿಗಳ ಪರಿಷ್ಕಋತ ವೇಳಾಪಟ್ಟಿ ಪ್ರಕಟವಾದ ಅನಂತರ ಕನಿಷ್ಠ ಒಂದು ವಾರಗಳ ಪುನರ್ ಮನನ ತರಗತಿಯನ್ನು ಆಯಾ ಶಾಲೆಯಲ್ಲೇ ನಡೆಸಬೇಕು ಎಂಬ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಈಗಾಗಲೇ ನಿರ್ದೇಶ ನೀಡಿದ್ದಾರೆ. ಪುನರ್ ಮನನ ತರಗತಿ ನಡೆದರೆ ವಿದ್ಯಾರ್ಥಿಗಳು ಭಾಗವಹಿಸುವುದು ಕಷ್ಟ. ಕೋವಿಡ್ 19 ಭೀತಿ ಇರುವುದರಿಂದ ಪಾಲಕ, ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ. ನಮಗೆ ಈಗಾಗಲೇ ಆತಂಕ ಆರಂಭವಾಗಿದೆ ಎಂದು ಪಾಲಕರೊಬ್ಬರು ಹೇಳಿದರು.