Advertisement
ರಾಜ್ಯಾದ್ಯಂತ ವಿದ್ಯುತ್ ಬಳಕೆ ದಿಢೀರ್ ಇಳಿಕೆಯಾಗಿರುವುದರಿಂದ ಇದೇ ಮೊದಲ ಬಾರಿಗೆ ಎಂಬಂತೆ ಬೇಸಗೆಯಲ್ಲಿ ಉಷ್ಣ ವಿದ್ಯುತ್ ಸ್ಥಾವರಗಳ ಕೆಲವು ಘಟಕಗಳು ಸ್ಥಗಿತಗೊಂಡು ಇತಿಹಾಸ ಸೃಷ್ಟಿಯಾಗಿದೆ. ಕೇಂದ್ರ ಸರಕಾರದ ಹಂಚಿಕೆಯಡಿ ಪೂರೈಕೆಯಾಗುವ ವಿದ್ಯುತ್ ಮತ್ತು ಸೌರಶಕ್ತಿ ಮೂಲದಿಂದ ಸಾಕಷ್ಟು ವಿದ್ಯುತ್ ಪೂರೈಕೆಯಾಗುತ್ತಿರುವುದರಿಂದ ಉಷ್ಣ ಮತ್ತು ಜಲ ವಿದ್ಯುತ್ ಘಟಕಗಳ ಮೇಲೆ ಒತ್ತಡ ಇಲ್ಲದಂತಾಗಿದ್ದು, ಬೇಸಗೆಯಲ್ಲಿ ಲೋಡ್ ಶೆಡ್ಡಿಂಗ್‌ನ ಭೀತಿ ನಿವಾರಣೆಯಾದಂತಾಗಿದೆ.
ಕೋವಿಡ್-19 ಸೋಂಕು ತಡೆಗೆ ಕೇಂದ್ರ ಮತ್ತು ರಾಜ್ಯ ಸರಕಾರ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವ ಜತೆಗೆ ಜನತಾ ಕರ್ಫ್ಯೂ, ಲಾಕ್‌ಡೌನ್ ವ್ಯವಸ್ಥೆ ಜಾರಿಗೊಳಿಸುತ್ತಿದ್ದಂತೆ ವಿದ್ಯುತ್ ಬೇಡಿಕೆಯಲ್ಲಿ ದಿಢೀರ್ ಇಳಿಕೆಯಾಗಲಾರಂಭಿಸಿತು. ದಿನ ಕಳೆದಂತೆ ಬೇಡಿಕೆ ಕುಗ್ಗುತ್ತಿದ್ದು, ಸದ್ಯ ಸುಮಾರು 1,600ರಿಂದ 2,000 ಮೆ.ವ್ಯಾ. ಗಳಷ್ಟು ಇಳಿಕೆಯಾಗಿದೆ. ಸರಾಸರಿ ಬೇಡಿಕೆ 8,500ರಿಂದ 9,000 ಮೆ. ವ್ಯಾ. ಗಳಷ್ಟಿದೆ. ಕೈಗಾರಿಕೆ, ವಾಣಿಜ್ಯ ಬಳಕೆ ವಿದ್ಯುತ್ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ. ಹವಾನಿಯಂತ್ರಣ ವ್ಯವಸ್ಥೆಯಿಂದಲೂ ಸೋಂಕು ಹರಡುತ್ತದೆ ಎಂಬ ಮಾತುಗಳ ಹಿನ್ನೆಲೆಯಲ್ಲಿ ಹವಾನಿಯಂತ್ರಣ ಉಪಕರಣಗಳ ಬಳಕೆಯೂ ಕಡಿಮೆಯಾಗಿದೆ. ಜತೆಗೆ ಕೃಷಿ ಪಂಪ್‌ಸೆಟ್ ಬಳಕೆಯೂ ಕಡಿಮೆಯಾಗಿರುವುದರಿಂದ ಬೇಡಿಕೆ ದಿಢೀರ್ ಕಡಿಮೆಯಾಗಿದೆ ಎಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ (ಕೆಪಿಟಿಸಿಎಲ್) ಅಧಿಕಾರಿ ತಿಳಿಸಿದರು.
Related Articles
ಸದ್ಯ ರಾಜ್ಯಾದ್ಯಂತ ವಿದ್ಯುತ್ ಬೇಡಿಕೆ 9,000 ಮೆ.ವ್ಯಾ.ಗಳಷ್ಟಿದೆ. ಈ ಪೈಕಿ ಕೇಂದ್ರದ ಪಾಲಿನಡಿ ಸುಮಾರು 2,000ದಿಂದ 3,000 ಮೆ.ವ್ಯಾ. ವಿದ್ಯುತ್ ಪೂರೈಕೆಯಾಗುತ್ತಿದ್ದು, ಇದನ್ನು ಬಳಸಲೇ ಬೇಕಿದೆ. ಜತೆಗೆ ಸೌರ ಶಕ್ತಿ ಮೂಲದಿಂದ ನಿತ್ಯ 4,500 ಮೆ.ವ್ಯಾ.ವಿದ್ಯುತ್ ಪೂರೈಕೆಯಾಗುತ್ತಿದೆ. ಹಾಗಾಗಿ ಉಳಿಕೆ ಬೇಡಿಕೆಯನ್ನು ಜಲ ವಿದ್ಯುತ್ ಮತ್ತು ಉಷ್ಣ ವಿದ್ಯುತ್ ಮೂಲಕ ನಿಭಾಯಿಸಲಾಗುತ್ತಿದೆ. ಜಲ ವಿದ್ಯುತ್ ಘಟಕಗಳಿರುವ ಜಲಾಶಯಗಳಲ್ಲೂ ನೀರಿನ ಉತ್ತಮ ಸಂಗ್ರಹವಿದ್ದು, ಉಷ್ಣ ಸ್ಥಾವರಗಳಲ್ಲೂ ಅಗತ್ಯ ಪ್ರಮಾಣದಲ್ಲಿ ಕಲ್ಲಿದ್ದಲು ದಾಸ್ತಾನು ಇದೆ. ಹಾಗಾಗಿ ಬೇಸಗೆಯಲ್ಲಿ ವಿದ್ಯುತ್ ಕೊರತೆ ತಲೆದೋರುವ ಸಾಧ್ಯತೆ ಕಡಿಮೆ ಎಂದು ವಿದ್ಯುತ್ ನಿಗಮದ ಮೂಲಗಳು ತಿಳಿಸಿವೆ.
Advertisement
ಚಳಿಗಾಲ ಮುಗಿಯುವ ಹೊತ್ತಿಗೆ ವಿದ್ಯುತ್ ಬೇಡಿಕೆ ಏರುಮುಖವಾಗಲಾರಂಭಿಸುತ್ತದೆ. ಹಾಗಾಗಿ ಮಳೆಗಾಲದಲ್ಲೇ ಉಷ್ಣ ಸ್ಥಾವರದ ಘಟಕಗಳ ನಿರ್ವಹಣೆಗೆ ಒತ್ತು ನೀಡಿ ಸನ್ನದ್ಧ ಸ್ಥಿತಿಯಲ್ಲಿಡಲಾಗಿರುತ್ತದೆ. ಜನವರಿ ಆರಂಭವಾಗುತ್ತಿದ್ದಂತೆ ಉಷ್ಣ ಸ್ಥಾವರಗಳ ಎಲ್ಲ ಘಟಕಗಳು ಕಾರ್ಯಾರಂಭವಾಗುತ್ತವೆ. ಹೀಗೆ ಆರಂಭವಾದ ಘಟಕಗಳು ಜೂನ್‌ವರೆಗೂ ಅವಿರತವಾಗಿ ಕಾರ್ಯ ನಿರ್ವಹಿಸುವುದು ವಾಡಿಕೆ. ಆದರೆ ಈ ಬಾರಿ ದಿಢೀರ್ ಬೇಡಿಕೆ ಕುಸಿತದ ಹಿನ್ನೆಲೆಯಲ್ಲಿ ರಾಯಚೂರಿನ ಆರ್‌ಟಿಪಿಎಸ್‌ನ ಎಂಟು ಘಟಕಗಳ ಪೈಕಿ ಮೂರು, ಬಳ್ಳಾರಿಯ ಬಿಟಿಪಿಎಸ್‌ನ ಮೂರು ಘಟಕಗಳ ಪೈಕಿ ಎರಡು ಸ್ಥಗಿತಗೊಂಡಿದ್ದು, 1,830 ಮೆ.ವ್ಯಾ. ಉತ್ಪಾದನೆ ಸ್ಥಗಿತವಾಗಿದೆ. ಬೇಸಗೆಯಲ್ಲಿ ಉಷ್ಣ ಸ್ಥಾವರದ ಘಟಕ ಗಳನ್ನು ಸ್ಥಗಿತಗೊಳಿಸಿರುವುದು ಇದೇ ಮೊದಲು ಎನ್ನಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ವಿದ್ಯುತ್ ಬೇಡಿಕೆ ಇಳಿಕೆ ಹಿನ್ನೆಲೆಯಲ್ಲಿ ಒಟ್ಟು ಉತ್ಪಾದನ ಘಟಕಗಳ ಪೈಕಿ ಅರ್ಧದಷ್ಟು ಘಟಕಗಳಷ್ಟೇ ಕಾರ್ಯ ನಿರ್ವಹಿಸುತ್ತಿವೆ. ಆ ಘಟಕಗಳಲ್ಲೂ ಶೇ. 50ರಷ್ಟು ವಿದ್ಯುತ್ ಮಾತ್ರ ಉತ್ಪಾದಿಸಲಾಗುತ್ತಿದೆ. ಒಂದು ತಿಂಗಳಿಗೆ ಸಾಕಾಗುವಷ್ಟು ಕಲ್ಲಿದ್ದಲು ದಾಸ್ತಾನು ಕೂಡ ಇದೆ. ನಿತ್ಯ 140ರಿಂದ 150 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದಿಸಲು ಅವಕಾಶವಿದ್ದು, ಸದ್ಯ 70 ದಶಲಕ್ಷ ಯೂನಿಟ್ ವಿದ್ಯುತ್ ಮಾತ್ರ ಉತ್ಪಾದಿಸಲಾಗುತ್ತಿದೆ.– ವಿ. ಪೊನ್ನುರಾಜ್,
ಕೆಪಿಸಿಎಲ್ ವ್ಯವಸ್ಥಾಪಕ ನಿರ್ದೇಶಕ