Advertisement

ಲಾಕ್‌ಡೌನ್‌: ನಿತ್ಯ 100 ಟನ್‌ ಕಸ ಕಮ್ಮಿ

04:54 PM Apr 29, 2020 | Suhan S |

ಬೆಳಗಾವಿ: ಲಾಕ್‌ಡೌನ್‌ದಿಂದಾಗಿ ಕಸ ಹಾಗೂ ಪ್ಲಾಸ್ಟಿಕ್‌ ಸಂಗ್ರಹ ಪ್ರಮಾಣದಲ್ಲಿ ಇಳಿಕೆ ಆಗಿದ್ದು, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಂದು ದಿನಕ್ಕೆ ಸರಿಸುಮಾರು 100 ಟನ್‌ ವರೆಗೆ ಕಸ ಸಂಗ್ರಹಣೆ ಇಳಿಕೆ ಆಗುತ್ತಿರುವುದರಿಂದ ಪಾಲಿಕೆಗೆ ನಿತ್ಯ ಲಕ್ಷ ರೂ. ವರೆಗೆ ಉಳಿತಾಯ ಆಗುತ್ತಿದೆ.

Advertisement

ಬೆಳಗಾವಿ ಮಹಾನಗರದಲ್ಲಿ ಈ ಮುಂಚೆ ದಿನಾಲು ಸುಮಾರು 250 ಟನ್‌ ವರೆಗೆ ಕಸ ಸಂಗ್ರಹವಾಗುತ್ತಿತ್ತು. ಈಗ ಹಸಿ ಹಾಗೂ ಒಣ ಕಸ ನಿರ್ವಹಣೆ ಮಾಡಿ ತಾಲೂಕಿನ ತುರಮುರಿ ತ್ಯಾಜ್ಯ ವಿಲೇವಾರಿ ಘಟಕಕ್ಕೆ ವಿಲೇಬವಾರಿ ಮಾಡಲಾಗುತ್ತಿದೆ. ಲಾಕ್‌ಡೌನ್‌ ದಿಂದಾಗಿ ಕೇವಲ 140ರಿಂದ 150 ಟನ್‌ವರೆಗೆ ಮಾತ್ರ ಕಸ ಸಂಗ್ರಹವಾಗುತ್ತಿದೆ. ಇದರಿಂದ ಪೌರ ಕಾರ್ಮಿಕರ ಕೆಲಸದ ಒತ್ತಡ ತುಸು ಇಳಿಕೆ ಆಗಿದೆ.

ಟಿಪ್ಪಿಂಗ್‌ ವೆಚ್ಚ ಇಳಿಕೆ: ಲಾಕ್‌ಡೌನ್‌ದಿಂದಾಗಿ ಹೊಟೇಲ್‌, ರೆಸ್ಟಾರೆಂಟ್‌, ಸಂತೆ, ಮಾರುಕಟ್ಟೆ, ಸಭೆ-ಸಮಾರಂಭಗಳು ಬಂದ್‌ ಆಗಿದ್ದರಿಂದ ಕಸ ಇಲ್ಲವಾಗಿದೆ. ಒಣ ಹಾಗೂ ಹಸಿ ಕಸವನ್ನು ವರ್ಗೀಕರಣ ಮಾಡಿಕೊಂಡು ತ್ಯಾಜ್ಯ ಘಟಕಕ್ಕೆ ಕಳುಹಿಸಲಾಗುತ್ತಿದೆ. ತುರಮುರಿ ತ್ಯಾಜ್ಯ ಘಟಕದಲ್ಲಿ ಕಸ ಪ್ರಕ್ರಿಯೆ ವೆಚ್ಚ(ಟಿಪ್ಪಿಂಗ್‌ ಚಾರ್ಜ್‌)ವನ್ನು ಪ್ರತಿ ಟನ್‌ಗೆ ನೀಡಲಾಗುತ್ತದೆ. ಕಸ ಸಂಗ್ರಹಣೆ ಕಡಿಮೆ ಆಗಿದ್ದರಿಂದ ಇದರ ವೆಚ್ಚವೂ ಇಳಿಕೆ ಆಗಿ ಪಾಲಿಕೆಗೆ ಇದು ಉಳಿತಾಯವಾಗುತ್ತಿದೆ. ಕಸದ ಟಿಪ್ಪಿಂಗ್‌ ಮಾಡಲು ತುರಮುರಿಯಲ್ಲಿರುವ ರಾಮಕಿ ಕಂಪನಿಗೆ ಪ್ರತಿ ಟನ್‌ಗೆ 1031 ರೂ. ನೀಡುತ್ತದೆ. ಈಗ ಅಂದಾಜು 100 ಟನ್‌ ಕಸ ಸಂಗ್ರಹಣ ಕಡಿಮೆ ಆಗಿದ್ದರಿಂದ ದಿನಾಲು ಒಂದು ಲಕ್ಷ ರೂ.ವರೆಗೆ ಉಳಿತಾಯವಾಗುತ್ತಿದೆ.

ಕಡಿಮೆಯಾಗಿದೆ ಪ್ಲಾಸ್ಟಿಕ್‌ ಬಳಕೆ: ನಗರದ 58 ವಾರ್ಡಗಳ ಪೈಕಿ 47 ವಾರ್ಡ್‌ಗಳಲ್ಲಿ ಸ್ವತ್ಛತಾ ಗುತ್ತಿಗೆದಾರರದಿಂದ ಕಸ ಸಂಗ್ರಹ ಮಾಡಲಾಗುತ್ತಿದ್ದು, ಇನ್ನುಳಿದ ವಾರ್ಡ್‌ಗಳಲ್ಲಿ ಪಾಲಿಕೆಯ ಪೌರ ಕಾರ್ಮಿಕರೇ ನಿರ್ವಹಣೆ ಮಾಡುತ್ತಾರೆ. ಕೆಲವೊಂದು ವಾರ್ಡ್‌ಗಳಲ್ಲಿ ಮಹಿಳಾ ಉಳಿತಾಯ ಘಟಕದಿಂದ ವಾಹನಗಳಲ್ಲಿ ಕಸ ಸಂಗ್ರಹಣೆ ಮಾಡಲಾಗುತ್ತಿದೆ. ಇದರಲ್ಲಿ ಒಣ ಹಾಗೂ ಹಸಿ ಎಂದು ಬೇರ್ಪಡಿಸಿಕೊಂಡು ಕಸ ಸಂಗ್ರಹವಾಗುತ್ತಿದ್ದು, ರಸ್ತೆ ಪಕ್ಕದಲ್ಲಿ ಹಾಗೂ ಡಸ್ಟ್‌ಬಿನ್‌ಗಳಲ್ಲಿ ಸಾಮಾನ್ಯ ಕಸಕ್ಕಿಂತ ಪ್ಲಾಸ್ಟಿಕ್‌ ಪ್ರಮಾಣ ಹೆಚ್ಚಾಗಿರುತ್ತದೆ.

ಲಾಕ್‌ಡೌನ್‌ದಿಂದಾಗಿ ರಸ್ತೆ ಪಕ್ಕದಲ್ಲಿ ರಾಶಿ ರಾಶಿಯಾಗಿ ಬೀಳುತ್ತಿದ್ದ ಕಸಕ್ಕೂ ಬ್ರೇಕ್‌ ಬಿದ್ದಿದ್ದು, ಪ್ಲಾಸ್ಟಿಕ್‌ ಬಳಕೆಯಂತೂ ಶೇ. 60-70ರಷ್ಟು ಕಡಿಮೆ ಆಗಿದೆ. ಈಗ ಏನಿದ್ದರೂ ಮನೆ ಮನೆಯಲ್ಲಿ ಸಂಗ್ರಹವಾಗುತ್ತಿರುವ ಕಸ ಮಾತ್ರ ಹೆಚ್ಚಿನ ಪ್ರಮಾಣದಲ್ಲಿ ವಿಲೇವಾರಿ ಮಡಲಾಗುತ್ತಿದೆ. ನಗರದಲ್ಲಿ ಕಸ ವರ್ಗೀಕರಣ ಮಾಡುವ ಪ್ರಕ್ರಿಯೆ ಕೆಲವೊಂದು ಕಡೆಗಳಲ್ಲಿ ನಡೆಯುತ್ತದೆ. ಹಸಿ ಹಾಗೂ ಒಣ ಕಸವನ್ನು ಬೇರ್ಪಡಿಸಿ ವಿಲೇವಾರಿ ಮಾಡಲಾಗುತ್ತದೆ. ಆದರೆ ಈಗ ಮನೆ ಮನೆಯಿಂದ ಮಾತ್ರ ಕಸ ಸಂಗ್ರಹಣೆ ಆಗುತ್ತಿರುವುದರಿಂದ ವರ್ಗೀಕರಣ ಪ್ರಕ್ರಿಯೆಯೂ ಕಡಿಮೆಯಾಗಿದೆ. ಒಣ ಕಸವನ್ನು ಕೆಲವು ತಿಂಗಳುಗಳಿಂದ ದಾಲ್ಮಿಯಾ ಸಿಮೆಂಟ್‌ ಕಾರ್ಖಾನೆಗೆ ಪೂರೈಸುತ್ತಿರುವುದರಿಂದ ಕಸದ ಸಮಸ್ಯೆಯೂ ಸ್ವಲ್ಪ ಪ್ರಮಾಣದಲ್ಲಿ ಬಗೆಹರಿದಂತಾಗಿದೆ.

Advertisement

ಪೌರಕಾರ್ಮಿಕರ ಕೆಲಸದ ಒತ್ತಡಕ್ಕೆ ಬ್ರೇಕ್‌ :  ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸ್ವತ್ಛತೆಗಾಗಿ ಶ್ರಮಿಸುತ್ತಿರುವ ಪೌರ ಕಾರ್ಮಿಕರ ಕೆಲಸ ಲಾಕ್‌ಡೌನ್‌ ದಿಂದಾಗಿ ಕಡಿಮೆ ಆಗಿಲ್ಲ. ಆದರೆ ದಿನಂಪ್ರತಿ ಕೆಲಸ ಮಾಡುವ ಅವ  ಮಾತ್ರ ಇಳಿಕೆ ಆಗಿದೆ. ಹೀಗಾಗಿ ಪೌರ ಕಾರ್ಮಿಕರ ಕೆಲಸದ ಒತ್ತಡ ತುಸು ಇಳಿಮುಖಗೊಂಡಿದೆ. ಕಸ ಸಂಗ್ರಹಣ ಹಾಗೂ ವಿಲೇವಾರಿ ಕೆಲಸದಲ್ಲಿ ಇಳಿಕೆ ಕಂಡರೂ ಇನ್ನುಳಿದಂತೆ ರಸ್ತೆ ಸ್ವಚ್ಛತೆ, ಹೋಮ್‌ ಕ್ವಾರಂಟೆ„ನ್‌ ಆಗಿರುವ ಹೋಟೆಲ್‌ಗ‌ಳ ಸ್ವತ್ಛತೆ ಕಾರ್ಯವನ್ನು ಪೌರ ಕಾರ್ಮಿಕರೇ ಮಾಡುತ್ತಿದ್ದಾರೆ.

ಬೆಳಗಾವಿ ಮಹಾನಗರದಲ್ಲಿ ಕಸ ಸಂಗ್ರಹ ದಿನನಿತ್ಯ 230ರಿಂದ 240 ಟನ್‌ ವರೆಗೆ ಆಗುತ್ತಿತ್ತು. ಈಗ ಲಾಕ್‌ಡೌನ್‌ದಿಂದಾಗಿ ಹೊಟೇಲ್‌, ಸಂತೆ, ಮಾರುಕಟ್ಟೆಗಳು ಬಂದ್‌ ಆಗಿದ್ದರಿಂದ ಕಸದ ಪ್ರಮಾಣ ಭಾರೀ ಪ್ರಮಾಣದಲ್ಲಿ ಇಳಿಕೆ ಆಗಿದೆ. ಪೌರ ಕಾರ್ಮಿಕರಿಗೆ ಸ್ವಚ್ಛತೆಯ ಕೆಲಸದಲ್ಲಿ ತುಸು ಬದಲಾವಣೆ ಮಾಡಲಾಗಿದೆ.  -ಜಗದೀಶ ಕೆ.ಎಚ್‌., ಆಯುಕ್ತರು ಮಹಾನಗರ ಪಾಲಿಕೆ

 

­-ಭೈರೋಬಾ ಕಾಂಬಳೆ

 

Advertisement

Udayavani is now on Telegram. Click here to join our channel and stay updated with the latest news.

Next