ಭಾರತೀನಗರ: ಕಬ್ಬು ಬಾಕಿ ಹಣ ಪಾವತಿಗಾಗಿ ಆಗ್ರಹಿಸಿ ರೈತರು ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಹೋಬಳಿಯ ಕಬ್ಬು ಬೆಳೆಗಾರರು ಕಾರ್ಖಾನೆ ಮುಖ್ಯದ್ವಾರಕ್ಕೆ ಬೀಗ ಜಡಿದು ಪ್ರತಿಭಟನೆ ನಡೆಸಿ, ಬಾಕಿ ಹಣ ನೀಡದಿದ್ದರೆ ನಾವು ಕಾರ್ಖಾನೆ ಬಿಟ್ಟು ಕದಲುವುದಿಲ್ಲ. ಕಳೆದ 6 ತಿಂಗಳಲ್ಲಿ ಕಬ್ಬು ಸರಬರಾಜು ಮಾಡಿ ನಾವು ಸಂಕಷ್ಟದಲ್ಲಿ ಸಿಲುಕಿದ್ದೇವೆ.
ಸಾಲದ ಸುಳಿಯಲ್ಲಿ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಬಂದೊದಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿದಿನ ಒಂದೊಂದು ಗ್ರಾಮದ ರೈತರು ಬೀಗ ಜಡಿದು ಪ್ರತಿಭಟಿಸುತ್ತಿದ್ದರೂ ಕಾರ್ಖಾನೆ ಆಡಳಿತ ಮಂಡಳಿ ಗಂಭೀರವಾಗಿ ಪರಿಗಣಿಸದೆ ರೈತರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ. ಕಬ್ಬು ಸರಬರಾಜು ಮಾಡಿದ 14 ದಿನಗಳಲ್ಲಿ ರೈತರಿಗೆ ಹಣ ಪಾವತಿ ಮಾಡಬೇಕೆಂದು ಸುಪ್ರೀಂಕೋರ್ಟ್ ಆದೇಶವಿದೆ. ಅದನ್ನೂ ಲೆಕ್ಕಿಸದ ಕಾರ್ಖಾನೆ ಆಡಳಿತ ಮಂಡಳಿ ರೈತಿಗೆ ಹಣ ಪಾವತಿ ಮಾಡದೆ ಅಲೆದಾಡಿಸುತ್ತಿದ್ದಾರೆ. ಈಗಾಗಲೇ ಚಾಂಷುಗರ್ ಕಾರ್ಖಾನೆ ಕಬ್ಬು ಅರೆಯುವಿಕೆ ಸ್ಥಗಿತಗೊಳಿಸಿ ತಿಂಗಳು ಉರುಳಿದರೂ ರೈತರಿಗೆ ಇನ್ನೂ ಹಣ ಪಾವತಿಸಿಲ್ಲ. ಪ್ರತಿ ವರ್ಷವೂ ರೈತರಿಗೆ ಹಣ ಪಾವತಿ ಮಾಡಲು ಸತಾಯಿಸುವುದು ಸಾಮಾನ್ಯವಾಗಿದೆ. ಕೂಡಲೇ ಕಬ್ಬು ಬಾಕಿ ಹಣ ಪಾವತಿಸದಿದ್ದರೆ ಅಹೋರಾತ್ರಿ ಧರಣಿ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಅಣ್ಣೂರು, ಕಾರ್ಕಹಳ್ಳಿ, ಮೆಣಸಗೆರೆ, ದೇವೇಗೌಡನದೊಡ್ಡಿ, ಆಲಭುಜನಹಳ್ಳಿ, ಬೋರಾಪುರ, ಕನ್ನಲಿ, ದೊಡ್ಡರಸಿನಕೆರೆ, ಮುಟ್ಟನಹಳ್ಳಿ, ಮಾದರಹಳ್ಳಿ, ತೊರೆಬೊಮ್ಮನಹಳ್ಳಿ, ಚಂದೂಪುರ ಸೇರಿದಂತೆ ವಿವಿಧ ಗ್ರಾಮಗಳ ರೈತರು ಪಾಲ್ಗೊಂಡಿದ್ದರು.