ರಾಣಿಬೆನ್ನೂರ: ವಾರದಿಂದ ಸುರಿಯುತ್ತಿದ್ದ ಧಾರಾಕಾರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡ ಪರಿಣಾಮ ಸರಕಾರ ಎರಡನೇ ಶನಿವಾರ ಮತ್ತು ರವಿವಾರ ರಜೆ ರದ್ದುಪಡಿಸಿ ಸರಕಾರಿ ಇಲಾಖೆಗಳು ಕಾರ್ಯನಿರ್ವಹಿಸಲು ಅಧಿಕೃತವಾಗಿ ಆದೇಶಿಸಿತ್ತು. ಆದರೆ, ಸ್ಥಳೀಯ ಅಪ್ಪರ ತುಂಗಾ ಮೇಲ್ದಂಡೆ ಯೋಜನೆಯ ವಿಶೇಷ ಭೂಸ್ವಾಧೀನ ಅಧಿಕಾರಿಗಳ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸರ್ಕಾರದ ಆದೇಶ ಪಾಲಿಸದೇ ಎಂದಿನಂತೆ ಬಾಗಿಲಿಗೆ ಬೀಗ ಹಾಕಿ ಬೇಜವಾಬ್ದಾರಿತನ ತೋರಿದ್ದಾರೆ.
ಶುಕ್ರವಾರವೇ ಕಚೇರಿಯ ನೌಕರರು ಮಧ್ಯಾಹ್ನವೇ ಮನೆಗೆ ತೆರಳಿದ್ದಾರೆ. ಜತೆಗೆ ವಿಶೇಷ ಭೂಸ್ವಾಧೀನ ಅಧಿಕಾರಿಯೂ ಸೇರಿದಂತೆ ವ್ಯವಸ್ಥಾಪಕರೂ ಕಚೇರಿಗೆ ಆಗಮಿಸದೇ ಕಚೇರಿಗೆ ಬೀಗಹಾಕಲಾಗಿದೆ.
ಜಿಲ್ಲೆಯಲ್ಲಿ ನೆರೆ ಪರಿಣಾಮ ಜನಜಾನುವಾರು ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರದ ಎಲ್ಲ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಶನಿವಾರ, ಭಾನುವಾರವೂ ಕೆಲಸ ನಿರ್ವಹಿಸಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದರು. ಅದರಂತೆ ವಿವಿಧ ಇಲಾಖೆ ಅಧಿಕಾರಿಗಳು ಹಗಲಿರುಳು ಶ್ರಮಿಸುತ್ತಿದ್ದರೆ ಅಪ್ಪರ ತುಂಗಾ ಮೇಲ್ದಂಡೆ ಯೋಜನೆ ಇಲಾಖೆ ಮಾತ್ರ ಆದೇಶ ಗಾಳಿಗೆ ತೂರಿ ಸಾರ್ವಜನಿಕರ ಆಕ್ರೋಶಕ್ಕೆ ತುತ್ತಾಗಿದ್ದು, ತಪ್ಪಿತಸ್ಥ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಜರುಗಿಸುವಂತೆ ರೈತರು, ಸಾರ್ವಜನಿಕರು ಆಗ್ರಹಿಸಿದ್ದಾರೆ.