ಮಾಗಡಿ: ಪಟ್ಟಣದಲ್ಲಿ ಎಟಿಎಂಗಳು ಇದ್ದರೂ ಇಲ್ಲದಂತಾಗಿದ್ದು, ನಿಜಕ್ಕೂ ಗ್ರಾಹಕರಿಗೆ ನಿರುಪಯುಕ್ತವಾಗಿದೆ. ದಿನದ 24 ಗಂಟೆಯೂ ಗ್ರಾಹಕರಿಗೆ ಹಣ ತೆಗೆಯಲು ಅನುಕೂಲವಾಗುವಂತದ್ದು, ಎಟಿಎಂಗಳ ಸೇವೆಯನ್ನು ಬ್ಯಾಂಕ್‌ಗಳು ಒದಗಿಸಿದೆ. ಆದರೆ ಪಟ್ಟಣದಲ್ಲಿರುವ ಬಹುತೇಕ ಎಲ್ಲಾ ಎಟಿಎಂಗಳು ಬೆಳಗ್ಗೆ ಮತ್ತು ರಾತ್ರಿ ವೇಳೆ ಮುಚ್ಚಿರುತ್ತದೆ. ಗ್ರಾಹಕರು ಎಟಿಎಂಗಳಲ್ಲಿ ತುರ್ತು ಅಗತ್ಯ ಹಣ ತೆಗೆಯಲಾಗದೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಬ್ಯಾಂಕ್‌ಗಳ ವ್ಯವಸ್ಥಾಪಕರಂತೂ ಕಂಡು ಕಾಣದಂತೆ ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ ಎಂಬುದು ಗ್ರಾಹಕರ ಆರೋಪವಾಗಿದೆ.
ಅದರಲ್ಲೂ ವಾರದ ರಜೆದಿನಗಳಂತೂ ಎಟಿಎಂಗಳು ಮುಚ್ಚಿರುವುದರಿಂದ ಗ್ರಾಹಕರು ಎಟಿಎಂಗಳಲ್ಲಿ ಹಣ ಪಡೆಯಲಾಗದೆ ಪರದಾಟದ ಸಮಸ್ಯೆ ಹೇಳತೀರದು, ಬ್ಯಾಂಕ್ ಕಾರ್ಯನಿರ್ವಹಿಸುವುದು ರಜಾ ದಿನ ಹೊರತುಪಡಿಸಿ ಸೋಮವಾರದಿಂದ ಶನಿವಾರ ಕೆಲಸದ ವೇಳೆ ಬೆಳಗ್ಗೆ 10.30 ರಿಂದ ಸಂಜೆ 4 ಗಂಟೆಯವರೆಗೆ ಕಾರ್ಯನಿರ್ವಹಿಸುತ್ತವೆ.
ಆ ವೇಳೆಗಾದರೂ ಹಣ ಪಡೆಯಲು ಗ್ರಾಹಕರು ಬ್ಯಾಂಕ್‌ಗೆ ತೆರಳಿ ತರ್ತು ಹಣ ಕೇಳಿದರೆ ಇಲ್ಲಿ ಹಣ ಕೊಡಲಾಗುವುದಿಲ್ಲ, ಎಟಿಎಂ ಬಳಸಿ ತೆಗೆದುಕೊಳ್ಳುವಂತೆ ಸೂಚನೆ ನೀಡುತ್ತಾರೆ. ಬ್ಯಾಂಕ್ ಸಮಯದಲ್ಲಿ ಮಾತ್ರ ಎಟಿಎಂಗಳು ತೆರೆದುಕೊಳ್ಳುತ್ತದೆ. ಆ ವೇಳೆ ಎಟಿಎಂ ಮುಂದೆ ಗ್ರಾಹಕರು ಸರದಿಯಲ್ಲಿ ನಿಂತಿರುತ್ತಾರೆ. ಕನಿಷ್ಠ 1 ರಿಂದ 2 ಗಂಟೆ ಹಣಕ್ಕಾಗಿ ಎಟಿಎಂ ಮುಂದೆ ನಿಲ್ಲಬೇಕಿರುತ್ತದೆ. ಸಂಜೆಯೋ ಅಥವಾ ರಾತ್ರಿಯೋ ಎಟಿಎಂಗಳಲ್ಲಿ ಹಣ ತೆಗೆದುಕೊಂಡರಾಯಿತು ಎಂದು ರಾತ್ರಿ ಸಮಯದಲ್ಲಿ ಹೋದರೆ ಬಹುತೇಕ ಎಲ್ಲಾ ಎಟಿಎಂಗಳು ಮುಚ್ಚಿರುತ್ತದೆ. ಯಾವ ಎಟಿಎಂಗಳು ಕಾರ್ಯನಿರ್ವಹಿಸುತ್ತಿರುವುದಿಲ್ಲ, ಕೆಲವು ಎಟಿಎಂಗಳು ಕಾರ್ಯನಿರ್ವಹಿಸುತ್ತಿದ್ದರೂ ಸಹ ಹಣ ಖಾಲಿಯಾಗಿರುತ್ತದೆ. ಎಟಿಎಂಗಳಲ್ಲಿ ಹಣ ಸಿಗದೆ ಇರುವುದರಿಂದ ಗ್ರಾಹಕರು ಸಾಕಷ್ಟು ತೊಂದರೆ ಅನುಭವಿಸಬೇಕಿದೆ. ಸಂಬಂಧಪಟ್ಟ ಮೇಲಧಿಕಾರಿಗಳು ಇತ್ತ ಗಮನಹರಿಸಿ ಎಟಿಎಂಗಳು ದಿನ 24 ಗಂಟೆಯೂ ಕಾರ್ಯನಿರ್ವಹಿಸುವ ಮೂಲಕ ಉತ್ತಮ ಸೇವೆಗೆ ಅನುಕೂಲ ಮಾಡಿಕೊಡಬೇಕೆಂಬುದು ಗ್ರಾಹಕರ ಒಕ್ಕರಲಿನಿಂದ ಮನವಿ ಮಾಡಿ ಕೋರಿದ್ದಾರೆ.