ಜೀಯು, ಹೊನ್ನಾವರ
ಹೊನ್ನಾವರ: ಜಿಲ್ಲಾಧಿಕಾರಿ, ಜಿಲ್ಲಾ ಉಸ್ತುವಾರಿ ಸಚಿವರ ಆದೇಶ ಒಂದಾದರೆ ಅದು ಜಾರಿಯಾಗುವಷ್ಟರಲ್ಲಿ ತಹಶೀಲ್ದಾರ್ ಆದೇಶ ಇನ್ನೊಂದು. ಯಾವುದನ್ನು ಪಾಲಿಸಬೇಕು ಎನ್ನುವುದು ಜನರಿಗೆ ಅರ್ಥವಾಗುತ್ತಿಲ್ಲ. ಕೋವಿಡ್ ಹೆಚ್ಚಿದ ಕಾರಣ ಈ ಕ್ರಮ ಕೈಗೊಂಡಿರುವುದಾಗಿ ತಹಶೀಲ್ದಾರ್ ವಿವೇಕ ಶೇಣಿ ಹೇಳುತ್ತಿದ್ದಾರೆ.
ಗ್ರಾಮಾಂತರದಲ್ಲಿ ಶೇ. 90ರಷ್ಟು ಜನ ಇದ್ದಾರೆ. ಮಳೆಗಾಲ ಜೂನ್ ಮೊದಲ ವಾರದಲ್ಲಿ ಆರಂಭವಾಗುವುದರಿಂದ ಪ್ರಕೃತಿ ಸಹಜ ಲಾಕ್‌ಡೌನ್ ಆರಂಭವಾಗಲಿದೆ. ಆದ್ದರಿಂದ ರೈತರು ಮತ್ತು ಗ್ರಾಮೀಣ ಜನ ಮಳೆಗಾಲಕ್ಕೆ ಸಂಬಂಧಿಸಿದ ಅಗತ್ಯ ವಸ್ತುಗಳ ಖರೀದಿಗೆ ಒಂದೇ ವಾರವಷ್ಟೇ ಉಳಿದಿರುವುದರಿಂದ ಸೋಮವಾರದಿಂದ ಗುರುವಾರದವರೆಗೆ ಬೆಳಗ್ಗೆ 8-12 ರವರೆಗೆ ಸಾಮಾನನ್ನು ಖರೀದಿಸಿ, ಮನೆಗೆ ತೆರಳಬೇಕು ಎಂದು ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದರು. ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲೆಯ ಶಾಸಕರ ಅನುಮೋದನೆಯೂ ಇತ್ತು. ಆದರೆ ತಹಶೀಲ್ದಾರ್ ವಿವೇಕ ಶೇಣಿÌ ವಿಡಿಯೋ ಹರಿಬಿಟ್ಟಿದ್ದು ಕೋವಿಡ್ ಹೆಚ್ಚುತ್ತಿರುವ ಕಾರಣ ಜಿಲ್ಲಾಧಿಕಾರಿಗಳು ನಮಗೆ ನೀಡಿದ ಅಧಿಕಾರದಂತೆ ಜೂ.7ರ ವರೆಗೆ ನಿರ್ಬಂಧವನ್ನು ಮುಂದುವರೆಸುತ್ತೇನೆ ಎಂದು ಹೇಳಿದ್ದಾರೆ.
ಜೂ.7ರ ನಂತರವೂ ತಿಂಗಳ ಕೊನೆಯ ವರೆಗೆ ಲಾಕ್‌ಡೌನ್ ಆಗಲಿದೆ ಎಂಬ ಸುದ್ದಿ ರಾಜ್ಯಮಟ್ಟದಲ್ಲಿದೆ. ಈ ರೀತಿ ಸತತವಾಗಿ ಬಂದ್ ಇಡುವುದು ವ್ಯಾವಹಾರಿಕವಲ್ಲ. ಇಂದಿನ ಆದೇಶ ಜನರಲ್ಲಿ ನಿರಾಸೆ ಮತ್ತು ಗೊಂದಲ ಉಂಟುಮಾಡಿದೆ. ಯಾರ ಆದೇಶ ಪಾಲಿಸಬೇಕು ಎಂದು ಜನ ಪ್ರಶ್ನಿಸುತ್ತಿದ್ದಾರೆ. ಇಂತಹ ಮಹತ್ವದ ಆದೇಶ ಹೊರಡಿಸುವಾಗ ಜನಪ್ರತಿನಿಧಿಗಳನ್ನು, ಮಾಧ್ಯಮದವರನ್ನು ಕರೆಯದೆ ಅಧಿಕಾರಿಗಳೇ ನಿರ್ಣಯ ತೆಗೆದುಕೊಳ್ಳುತ್ತಿರುವುದು ವಿಷಾದನೀಯ.
ಹೀಗೆ ದಿನಕ್ಕೆ ಒಬ್ಬೊಬ್ಬರ ಆದೇಶ ಒಂದೊಂದಾಗಿ ತಾಲೂಕು ಗೊಂದಲದಪುರವಾಗಿದೆ. ಜೂ.7ರ ನಂತರವೂ ಲಾಕ್‌ಡೌನ್ ಮುಂದುವರಿದರೆ ಹೇಗೆ ಬದುಕಬೇಕು ಎಂಬ ಪ್ರಶ್ನೆಗೆ ಜಿಲ್ಲೆಯ ಸಚಿವರು, ಜಿಲ್ಲಾಧಿಕಾರಿಗಳು ಉತ್ತರ ಹೇಳಬೇಕಾಗಿದೆ.