Advertisement

ಎರಡನೇ ದಿನವೂ ಹಾವೇರಿ ಜಿಲ್ಲೆ ಸಂಪೂರ್ಣ ಸ್ತಬ್ಧ

07:45 PM Apr 26, 2021 | Team Udayavani |

ಹಾವೇರಿ: ಕೋವಿಡ್ ಎರಡನೇ ಅಲೆ ತೀವ್ರಗೊಳ್ಳುತ್ತಿರುವುದನ್ನು ತಡೆಯಲು ಸರ್ಕಾರ ವೀಕೆಂಡ್‌ ಕರ್ಫ್ಯೂ ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ಎರಡನೇ ದಿನವಾದ ರವಿವಾರ ಸಹ ಜಿಲ್ಲೆ ಸಂಪೂರ್ಣ ಸ್ತಬ್ಧವಾಗಿತ್ತು.

Advertisement

ಬೆಳಗ್ಗೆ 6 ಗಂಟೆಯಿಂದ 10 ಗಂಟೆ ವರೆಗೆ ಅಗತ್ಯ ವಸ್ತು ಖರೀದಿಗೆ ಅವಕಾಶ ಕಲ್ಪಿಸಲಾಗಿತ್ತು. ಆದರೆ, ಈ ವೇಳೆ ಸಾಮಾಜಿಕ ಅಂತರ ಮರೆತು ಜನ ವರ್ತಿಸಿದ್ದು, ತರಕಾರಿ ಮತ್ತು ದಿನಸಿ ಖರೀದಿಗೆ ಮುಗಿಬಿದ್ದ ದೃಶ್ಯ ಕಂಡುಬಂತು. ನಗರದ ಮುನ್ಸಿಪಲ್‌ ಹೈಸ್ಕೂಲ್‌ ಮೈದಾನದಲ್ಲಿ ನಡೆಯುತ್ತಿರುವ ತಾತ್ಕಾಲಿಕ ತರಕಾರಿ ಮಾರುಕಟ್ಟೆಗೆ ಸಾವಿರಾರು ಸಂಖ್ಯೆಯ ಜನರು ಆಗಮಿಸಿದ್ದರು. ಸಾಮಾಜಿಕ ಅಂತರಕ್ಕಾಗಿ ಮಾರ್ಕ್‌ ಮಾಡಿದ ಸ್ಥಳದಲ್ಲಿ ವ್ಯಾಪಾರಸ್ಥರು ಕುಳಿತಿದ್ದರು. ಆದರೆ, ಜನರು ಸಾಮಾಜಿಕ ಅಂತರ ಮರೆತು ತರಕಾರಿ ಖರೀದಿಸಿದರು. ಕೆಲವರಂತೂ ಮಾಸ್ಕ್ ಕೂಡ ಧರಿಸದೇ ಆಗಮಿಸಿದ್ದು ಕಂಡು ಬಂದಿತು. ವೀಕೆಂಡ್‌ ಕರ್ಫ್ಯೂವನ್ನು ವಾರದ ಎಲ್ಲಾ ದಿನಗಳಿಗೆ ವಿಸ್ತರಿಸಬಹುದು ಎಂಬ ಆತಂಕದಲ್ಲಿ ಜನರು ದಿನಸಿ ಖರೀದಿಸಲು ಮುಗಿಬಿದ್ದಿದ್ದರು.

ದಿನಸಿ ಅಂಗಡಿಗಳ ಮುಂದೆ ಗುಂಪಾಗಿ ನಿಂತು ಅಗತ್ಯ ವಸ್ತುಗಳನ್ನು ಅಗತ್ಯಕ್ಕಿಂತ ಹೆಚ್ಚೇ ಖರೀದಿಸುತ್ತಿದ್ದರು. 10 ಗಂಟೆ ಬಳಿಕ ಸ್ತಬ್ಧ: ಬೆಳಗ್ಗೆ 10 ಗಂಟೆಯಾಗುತ್ತಲೇ ಪೊಲೀಸರು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾದರು. ಅದಕ್ಕಿಂತ ಮುಂಚೆಯೇ ತರಕಾರಿ ಮಾರುಕಟ್ಟೆಗೆ ಆಗಮಿಸಿದ್ದವರನ್ನು ವಾಪಸ್‌ ಕಳುಹಿಸಿದರು. ವಾಹನಗಳಲ್ಲಿ ಎಲ್ಲಾ ರಸ್ತೆಗಳಲ್ಲಿ ಸಂಚರಿಸಿ ದಿನಸಿ ಅಂಗಡಿಗಳನ್ನು ಮುಚ್ಚಿಸಿದರು.

ಆ ಬಳಿಕ ವ್ಯಾಪಾರ ವಹಿವಾಟು ಸಂಪೂರ್ಣ ಸ್ಥಗಿತಗೊಂಡಿತು. ವಾಹನ ಮತ್ತು ಜನರ ಸಂಚಾರ ಏಕಾಏಕಿ ಬಂದ್‌ ಆಯಿತು. ಆಸ್ಪತ್ರೆ, ಔಷಧಿಗಾಗಿ ನಡೆದು ಹೋಗುತ್ತಿದ್ದವರನ್ನು ಪೊಲೀಸರು ತಡೆದು ವಿಚಾರಿಸಿ ಅಗತ್ಯ ದಾಖಲೆ ಪರಿಶೀಲಿಸಿ ಬಿಟ್ಟರು. ವಿವಾಹ ಇನ್ನಿತರ ಸಮಾರಂಭಗಳಿಗೆ ಕಾರಿನಲ್ಲಿ ಹೋಗುತ್ತಿದ್ದವರ ದಾಖಲೆಗಳನ್ನು ಪೊಲೀಸರು ಪರಿಶೀಲಿಸಿ ಕಳುಹಿಸಿದರು. ಮಧ್ಯಾಹ್ನವಾಗುತ್ತಲೇ ರಸ್ತೆಗಳಲ್ಲಿ ವಾಹನ ಸಂಚಾರವಿಲ್ಲದೇ ಭಣಗುಡುತ್ತಿದ್ದವು. ಜನಜಂಗುಳಿಯಿಂದ ಗಿಜಿಗುಡುತ್ತಿದ್ದ ಪ್ರಮುಖ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರಿಲ್ಲದೇ ಬಸ್‌ ಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸಲಿಲ್ಲ. ಮಾಸ್ಕ್ ಧರಿಸದೇ ಹೊರಬಂದವರಿಗೆ ಪೊಲೀಸರು ಕೆಲವು ಕಡೆ ದಂಡ ವಿಧಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next