ಬೆಳ್ತಂಗಡಿ: ಕೋವಿಡ್ ಸೋಂಕು ಹರಡುತ್ತಿರುವ ಮಧ್ಯೆ ನಿಯಂತ್ರಣ ತರುವ ದೃಷ್ಟಿಯಿಂದ ಸರಕಾರ ಶನಿವಾರ ರಾತ್ರಿಯಿಂದ ಸೋಮವಾರ ಬೆಳಗ್ಗೆ 5 ಗಂಟೆ ವರೆಗೆ ವಿಧಿಸಿದ್ದ ಲಾಕ್ ಡೌನ್ ಗೆ ಬೆಳ್ತಂಗಡಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ತಾಲೂಕಿಗೆ ಆಗಮಿಸುವ ನಾಲ್ಕು ಸುತ್ತ ಚೆಕ್ ಪೋಸ್ಟ್ ಗಳನ್ನು ನಿರ್ಮಿಸಿ ವಾಹನ ತಪಾಸಣೆ ಕೈಗೊಳ್ಳಲಾಗಿದೆ.
ಔಷಧ ಮಳಿಗೆಗಳು ಹೊರತು ಪಡಿಸಿ ಸಂಪೂರ್ಣ ಪೇಟೆ, ಗ್ರಾಮೀಣ ಭಾಗ ಸ್ತಬ್ಧವಾಗಿದೆ. ಮುಂಜಾನೆ ಹೊತ್ತು ಹಾಲು, ಪತ್ರಿಕೆ ಅಂಗಡಿ ತೆರೆಯಲಾಗಿದ್ದರು 7 ಗಂಟೆ ಬಳಿಕ ಮುಚ್ಚುವ ಮೂಲಕ ಸರಕಾರದ ನಿಯಮಕ್ಕೆ ಜನತೆ ಸಂಪೂರ್ಣ ಸಹಕರಿಸಿದರು.
ಬೆಳ್ತಂಗಡಿ ಠಾಣೆ ವೃತ್ತನಿರೀಕ್ಷಕರ ವ್ಯಾಪ್ತಿಗೊಳಪಟ್ಟಂತೆ ಧರ್ಮಸ್ಥಳ, ಬೆಳ್ತಂಗಡಿ ಸಂತೆಕಟ್ಟೆ, ವೇಣೂರು, ಗುರುವಾಯನಕೆರೆ ಸೇರಿ ನಾಲ್ಕು ಕಡೆಗಳಲ್ಲಿ ಚೆಕ್ ಪೋಸ್ಟ್ ನಿಯೋಜಿಸಲಾಗಿದೆ.
ಒಟ್ಟು 40 ಪೊಲೀಸರು, 20 ಗೃಹರಕ್ಷಕರನ್ನು 4 ಚೆಕ್ ಪೋಸ್ಟ್ ಗಳಲ್ಲಿ ನಿಯೋಜಿಸಲಾಗಿದೆ ರಂದು ಬೆಳ್ತಂಗಡಿ ಠಾಣೆ ವೃತ್ತನಿರೀಕ್ಷಕ ಸಂದೇಶ್ ಪಿ.ಜಿ. ತಿಳಿಸಿದ್ದಾರೆ.
ಅನಾವಶ್ಯಕವಾಗಿ ಹೊರ ಬಂದ ವಾಹನ ಸವಾರರಿಗೆ ಎಚ್ಚರಿಕೆ ನೀಡಿ ಹಿಂದೆ ಕಳುಹಿಸುವ ದೃಶ್ಯ ಮುಂಜಾನೆ ಕಂಡುಬಂತು. ಆಂಬ್ಯುಲೆನ್ಸ್ ಹಾಗೂ ಆರೋಗ್ಯ ಸಂಬಂಧಿಸಿದ ತುರ್ತು ಸೇವೆಗಳಿಗಷ್ಟೆ ಸಂಚಾರಕ್ಕೆ ಅವಕಾಶ ನೀಡಲಾಯಿತು.
ಚಾರ್ಮಾಡಿ ಚೆಕ್ ಪೋಸ್ಟ್ ನಲ್ಲೂ ವಾಹನವನ್ನು ಬಿಗು ತಪಾಸಣೆಗೊಳಪಡಿದಲಾಯಿತು. ಹೆಚ್ಚಿನ ಮಂದಿ ಶಿರಾಡಿ ಮಾರ್ಗವಾಗಿ ತುರ್ತು ಸೇವೆಗೆ ಸಂಚರಿಸಲು ಸೂಚನೆ ನೀಡಲಾಯಿತು.
ಸರಕಾರದ ಆದೇಶ ಪಾಲಿಸುವುರೊಂದೊಗೆ ಸ್ವಯಂ ರಕ್ಣಣೆ ಸಲುವಾಗಿ ಪೇಟೆ, ಅಂಗಡಿ ಮುಂಗಟ್ಟುಗಳ ವರ್ತಕರು, ಸಾರ್ವಜನಿಕರು ಸಹಕಾರ ನೀಡಿದ್ದರಿಂದ ಪೇಟೆ, ಗ್ರಾಮೀಣ ಭಾಗ ಸ್ತಬ್ಧಗೊಂಡಿತ್ತು.