ಹುಬ್ಬಳ್ಳಿ: ಸದಾ ಜನಜಂಗುಳಿಯಿಂದ ತುಂಬಿರುತ್ತಿದ್ದ ಉದ್ಯಾನಗಳು ಲಾಕ್‌ಡೌನ್ ಹಿನ್ನೆಲೆಯಲ್ಲಿ ಲಾಕ್ ಆಗಿವೆ. ಕಳೆದ 40 ದಿನಗಳಿಂದ ಸಂಪೂರ್ಣ ಸ್ತಬ್ಧವಾಗಿದ್ದು, ಜನರಿಲ್ಲದೆ ಬಣಗುಡುತ್ತಿವೆ. ಬೆಳಗಿನ ಹಾಗೂ ಸಂಜೆಯ ವಾಯುವಿಹಾರ ದೂರದ ಮಾತಾಗಿದೆ. ಪ್ರೇಮಿಗಳ ಚಡಪಟಿಕೆ ಹೇಳತೀರದಾಗಿದ್ದು, ಕೆಲ ಪ್ರಮುಖ ಉದ್ಯಾನಗಳ ಚಿತ್ರಣ ಇಲ್ಲಿದೆ.
ಉಣಕಲ್ಲ ಉದ್ಯಾನ ; ಉಣಕಲ್ಲ ಕೆರೆ ಉದ್ಯಾನ ಹು-ಧಾ ಮಧ್ಯ ಸಂಚರಿಸುವವರನ್ನು ಕೈಬಿಸಿ ಕರೆಯುವ ಸ್ಥಳ. ಇದೀಗ ಯಾರೂ ಇಲ್ಲದೇ ಅನಾಥವಾಗಿದೆ. ಇಲ್ಲಿ ಸೂರ್ಯಾಸ್ತ ನೋಡಲು ಎರಡು ಕಣ್ಣುಗಳು ಸಾಲದು. ಇದಕ್ಕೀಗ ಕೋವಿಡ್ 19 ಬ್ರೇಕ್ ಹಾಕಿದೆ.
ಗಾಜಿನಮನೆ : ಹೃದಯಭಾಗದಲ್ಲಿನ ಇಂದಿರಾ ಗಾಜಿನಮನೆ ಉದ್ಯಾನ ಅನಾಥವಾಗಿ ನಿಂತಿದೆ. ಒಂದು ಕಡೆ ಸ್ಮಾರ್ಟ್ ಸಿಟಿ ಯೋಜನೆಯಡಿ ಉದ್ಯಾನ ನವೀಕರಣ ನಡೆಯುತ್ತಿದ್ದು, ಇದರ ಮಧ್ಯದಲ್ಲಿ ನೂರಾರು ಜನರು ಆಗಮಿಸುತ್ತಿದ್ದರು.
ನೃಪತುಂಗ ಬೆಟ್ಟ: ಬೆಳಗಿನ ಸಮಯದಲ್ಲಿ ನೃಪತುಂಗ ಬೆಟ್ಟಕ್ಕೆ ತೆರಳಲು ವಾಹನಗಳಿಗೆ ಅವಕಾಶ ಇಲ್ಲ. ಹೋಗುವುದಾದರೆ ಕಾಲ್ನಡಿಗೆಯಲ್ಲಿಯೇ ಹೋಗಬೇಕು. ಆದರೆ ಕಳೆದ ಒಂದೂವರೆ ತಿಂಗಳಿಂದ ನೃಪತುಂಗ ಬೆಟ್ಟವೂ ಕೂಡಾ ಕಾಲಿ ಹೊಡೆಯುತ್ತಿದೆ.
-ಬಸವರಾಜ ಹೂಗಾರ