ಹುಬ್ಬಳ್ಳಿ: ಕೋವಿಡ್ 19 ಕಾರಣದಿಂದ ಮದುವೆ ಇತರೆ ಶುಭ ಸಮಾರಂಭಗಳು ಮುಂದೂಡಿಕೆಯಾಗಿದ್ದು, ಇದರಿಂದ ಕಲ್ಯಾಣ ಮಂಟಪ, ಶಾಮಿಯಾನ ವಹಿವಾಟಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ.
ಮಾರ್ಚ್ ಹಾಗೂ ಏಪ್ರಿಲ್ ತಿಂಗಳು ಮದುವೆಗೆ ಹೇಳಿ ಮಾಡಿಸಿದ ತಿಂಗಳುಗಳಾಗಿದ್ದು, ಇವೆರಡು ತಿಂಗಳಲ್ಲೆ ನಗರದಲ್ಲಿ ಅಂದಾಜು 200ಕ್ಕೂ ಅಧಿಕ ಮದುವೆಗಳು ನಡೆಯುತ್ತಿದ್ದವು. ಆದರೆ ಕೋವಿಡ್-19 ಹಿನ್ನೆಲೆಯಲ್ಲಿ ಅವೆಲ್ಲ ರದ್ದಾಗಿವೆ. ಮಾರ್ಚ್ ಕೊನೆಯ ವಾರ, ಏಪ್ರಿಲ್ -ಮೇ ತಿಂಗಳಲ್ಲೇ ಬಹುತೇಕರು ಮದುವೆಗೆ ಸಿದ್ಧತೆ ಮಾಡಿಕೊಳ್ಳುತ್ತಾರೆ. ಶಾಲೆಗಳಿಗೆ ಬೇಸಿಗೆ ರಜೆ ಆರಂಭವಾಗುತ್ತದೆ. ನೌಕರರು, ವ್ಯಾಪಾರಿಗಳು ಇದೇ ಬಿಡುವಿನ ಸಂದರ್ಭ ನೋಡಿಕೊಂಡು ಮಕ್ಕಳ ಮದುವೆ ಮಾಡಲು ಮುಂದಾಗುತ್ತಾರೆ ಆದರೆ ಈ ಬಾರಿ ಕೋವಿಡ್ 19 ವೈರಸ್ ಮಹಾಮಾರಿ ಇವರ ಲೆಕ್ಕಾಚಾರವನ್ನೆಲ್ಲ ಬುಡಮೇಲು ಮಾಡಿದೆ. 5-6 ತಿಂಗಳ ಮೊದಲೇ ಬುಕ್: ಬಹುತೇಕರು ಮದುವೆ ನಿಗದಿಪಡಿಸುವ ಮೊದಲೇ ವರ-ಕನ್ಯೆಗೆ ಹಾಗೂ ಸಂಬಂಧಿಕರ ಸಮಯ ಖಾತ್ರಿ ಪಡಿಸಿಕೊಂಡು ಅನುಕೂಲವಾಗುವ ದಿನದಂದೇ ಮದುವೆ ದಿನಾಂಕ ನಿಶ್ಚಯಿಸಿ ಐದಾರು ತಿಂಗಳು ಮೊದಲೇ ಕಲ್ಯಾಣ ಮಂಟಪಗಳನ್ನು ಬುಕ್ ಮಾಡುತ್ತಾರೆ.
ಆದರೆ ಬುಕ್ ಮಾಡಿದ್ದವರೆಲ್ಲ ರದ್ದುಪಡಿಸಿ, ನವೆಂಬರ್ ಇಲ್ಲವೆ ಡಿಸೆಂಬರ್‌ಗೆ ಮುಂದಕ್ಕೆ ಹಾಕುತ್ತಿದ್ದಾರೆ. ಕೆಲವರು ಸಂಕ್ಷಿಪ್ತವಾಗಿ ಮದುವೆ ಕಾರ್ಯ ಮಾಡಿಕೊಂಡಿದ್ದಾರೆ. ಇನ್ನು ಮೇ ತಿಂಗಳಿನಲ್ಲಿ ಮದುವೆ ಇಟ್ಟುಕೊಂಡಿದ್ದ ಬಹುತೇಕರು ರದ್ದುಪಡಿಸಿದ್ದಾರೆ. ಮೇ ತಿಂಗಳಲ್ಲೂ ಮದುವೆ, ಸಮಾರಂಭಗಳುನಡೆಯುವುದು ಬಹುತೇಕ ಕಷ್ಟವಾಗಿದೆ. ಮದುವೆಗೆ ಕೇವಲ ಕಲ್ಯಾಣ ಮಂಟಪ ಅಷ್ಟೇಅಲ್ಲದೆ ಶಾಮಿಯಾನ, ವೇದಿಕೆ ಅಲಂಕಾರ ಇನ್ನಿತರ ಕಾರ್ಯಗಳಿಗೂ ಕೋವಿಡ್ 19 ಕುತ್ತು ತಂದೊಡ್ಡಿದೆ.
ನಮ್ಮ ಹೊಟೇಲ್‌ನಲ್ಲಿ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ 9 ಮದುವೆ, 2 ಜನ್ಮದಿನ ಸಮಾರಂಭ, 6 ಸಮಾವೇಶಕ್ಕಾಗಿ ಡಿಸೆಂಬರ್-ಜನವರಿಯಲ್ಲಿ ಬುಕ್ ಮಾಡಿದ್ದರು.ಅವೆಲ್ಲ ರದ್ದಾಗಿವೆ. ಮದುವೆಗೆಂದು ಬುಕ್ ಮಾಡಿದವರು ನವೆಂಬರ್-ಡಿಸೆಂಬರ್‌ಗೆ ಮುಂದೂಡಿದ್ದಾರೆ. ಕೆಲವು ವಧು-ವರರು ವಿದೇಶದಿಂದ ಬರುವವರಾಗಿದ್ದಾರೆ. ಹೀಗಾಗಿ ಮದುವೆಗಳು ಸಹ ಅವರ ರಜೆಯಮೇಲೆ ಅವಲಂಬಿಸಿದೆ
.- ಅರುಣ ಸವದತ್ತಿ,ವ್ಯವಸ್ಥಾಪಕ, ಡೆನಿಸನ್ಸ್ ಹೊಟೇಲ್
ಪ್ರತಿವರ್ಷ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನಮ್ಮ ಕಲ್ಯಾಣ ಮಂಟಪದಲ್ಲಿಅಂದಾಜು 18-20 ಮದುವೆಗಳು ಆಗುತ್ತಿದ್ದವು. ಆದರೆ ಲಾಕ್‌ಡೌನ್ ಹಿನ್ನೆಲೆಯಲ್ಲಿ ಬುಕ್ ಮಾಡಿದ್ದ 12 ಜನರು ಮದುವೆ ರದ್ದುಪಡಿಸಿದ್ದಾರೆ. ನವೆಂಬರ್ ಇಲ್ಲವೆ ಡಿಸೆಂಬರ್‌ವರೆಗೆ ಸಮಯ ಕೇಳುತ್ತಿದ್ದಾರೆ. ಕೆಲವರು ರಿಫಂಡ್ ಮಾಡುವಂತೆ ಕೇಳುತ್ತಿದ್ದಾರೆ. ಓರ್ವರು ಮುಹೂರ್ತ ಇದ್ದಿದ್ದರಿಂದ ಮನೆಯಲ್ಲೇ ಸಂಕ್ಷಿಪ್ತ ಮಾಡಿಕೊಂಡಿದ್ದಾಗಿ ಹೇಳಿದ್ದಾರೆ.ಈ ಬಾರಿ ನಮ್ಮ ವ್ಯವಹಾರಸಂಪೂರ್ಣ ಜಿರೋ ಆಗಿದೆ.
-ಬಾಬುರಾವ್ ಕಂಟಪಾಲ, ಶ್ರೀನಿವಾಸ ಗಾರ್ಡನ್ ಮಾಲಕ
ಪ್ರತಿವರ್ಷ ಮಾರ್ಚ್‌ನಿಂದ ಮೇವರೆಗೆ ನಮ್ಮ ಕಲ್ಯಾಣ ಮಂಟಪದಲ್ಲಿ 30-40 ಮದುವೆಗಳು ನಡೆಯುತ್ತಿದ್ದವು. ಈ ವರ್ಷ 25-30 ಜನರು ನವೆಂಬರ್, ಡಿಸೆಂಬರ್‌ನಲ್ಲೇ ಬುಕ್ ಮಾಡಿದ್ದರು. ಅವರೆಲ್ಲ ಮದುವೆ ರದ್ದುಪಡಿಸಿದ್ದಾರೆ. ನವೆಂಬರ್, ಡಿಸೆಂಬರ್ ದಂದು ಅನುಕೂಲ ಮಾಡಿಕೊಂಡುವಂತೆ ಕೋರಿದ್ದಾರೆ. ಕೋವಿಡ್ 19 ಮುಂದುವರಿದರೆ ಆವಾಗಲೂ ಕಲ್ಯಾಣ ಮಂಟಪಗಳು ತೆರೆಯುತ್ತವೋ ಇಲ್ಲವೋ ಎಂಬುದನ್ನು ಹೇಳಲಿಕ್ಕಾಗದು. ಅದೆಲ್ಲ ಸರಕಾರದ ನಿರ್ಧಾರದ ಮೇಲೆ ಅವಲಂಬಿಸಿದೆ.-
ಪ್ರೇಮಾನಂದ ಶೆಟ್ಟಿ, ಮಾಜಿ ಕಾರ್ಯದರ್ಶಿ,ಆರ್.ಎನ್. ಶೆಟ್ಟಿ ಕಲ್ಯಾಣ ಮಂಟಪ.
-ಶಿವಶಂಕರ ಕಂಠಿ