Advertisement

ಲಾಕ್‌ಡೌನ್‌ ಕೂಲಿಗಳ ಜೀವನ ದುಸ್ತರ

08:49 AM Jun 10, 2020 | Suhan S |

ಔರಂಗಾಬಾದ್‌, ಜೂ. 9: ಅತ್ಯಲ್ಪ ಶುಲ್ಕಕ್ಕಾಗಿ ಪ್ರಯಾಣಿಕರ ಭಾರವಾದ ಲಗೇಜುಗಳನ್ನು ಸಾಗಿಸಲು ಯಾವಾಗಲೂ ಸಿದ್ಧರಿರುವ ಕೂಲಿಗಳು ಇದೀಗ ಲಾಕ್‌ ಡೌನ್‌ ಕಾರಣದಿಂದಾಗಿ ಆದಾಯದ ಮೂಲವಿಲ್ಲದೆ ಸಾಲಗಳ ಹೊರೆಯಿಂದ ಬಳಲುತ್ತಿದ್ದು, ಒಂದೊತ್ತಿನ ಊಟಕ್ಕೂ ಹೆಣಗಾಡುತ್ತಿದ್ದಾರೆ.

Advertisement

ಕೆಂಪು ಸಮವಸ್ತ್ರಧಾರಿ ಕೂಲಿಗಳು ರೈಲ್ವೇ ಜೀವನದ ಅವಿಭಾಜ್ಯ ಅಂಗವಾಗಿದ್ದು, ಕೆಲವು ಬಾಲಿವುಡ್‌ ಚಲನಚಿತ್ರಗಳಿಗೂ ಸ್ಫೂರ್ತಿ ನೀಡಿದ್ದಾರೆ. ಆದರೆ ಈಗ ಅವರು ತಮ್ಮ ಬದುಕನ್ನು ಹೇಗೆ ಉಳಿಸಿಕೊಳ್ಳಬೇಕು ಎಂಬ ದೊಡ್ಡ ಸವಾಲನ್ನು ಎದುರಿಸುತ್ತಿದ್ದಾರೆ. ವ್ಯವಹಾರದ ಭರವಸೆಯೊಂದಿಗೆ ನಾನು ಪ್ರತಿದಿನ ನಿರ್ಜನ ಪ್ಲಾಟ್‌ಫಾರ್ಮ್ಗಳು ಮತ್ತು ರೈಲು ಹಳಿಗಳನ್ನು ನೋಡುತ್ತಿದ್ದೇನೆ, ಆದರೆ ಪ್ರತಿ ಬಾರಿಯೂ ಖಾಲಿ ಕೈಯಿಂದ ಮನೆಗೆ ಮರಳುತ್ತಿದ್ದೇನೆ ಎಂದು ಔರಂಗಾಬಾದ್‌ ರೈಲ್ವೇ ನಿಲ್ದಾಣದ ಕೂಲಿ ಯೂಸುಫ್ ಶಾಹ್‌ ತಮ್ಮ ಸಂಕಷ್ಟ ಹೇಳಿಕೊಂಡಿದ್ದಾರೆ. ಆರು ಹೆಣ್ಣು ಮಕ್ಕಳ ದೊಡ್ಡ ಕುಟುಂಬವನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಹೊಂದಿರುವ ಕೂಲಿ ಯೂಸುಫ‌ ಈಗ ತಮ್ಮ ಜೀವನೋಪಾಯವನ್ನು ಹೇಗೆ ಉಳಿಸಿಕೊಳ್ಳಬೇಕು ಮತ್ತು ಮಾಡಿರುವ ಸಾಲವನ್ನು ಹೇಗೆ ಮರುಪಾವತಿಸಬೇಕು ಎಂಬ ಆತಂಕದಲ್ಲಿದ್ದಾರೆ. ಆರ್ಥಿಕತೆ ಮತ್ತು ಸಾರ್ವಜನಿಕ ಚಟುವಟಿಕೆಗಳ ಹಂತವಾರು ಪುನರಾರಂಭಕ್ಕಾಗಿ ಮಹಾರಾಷ್ಟ್ರ ಸರಕಾರದ “ಮಿಷನ್‌ ಬಿಗಿನ್‌ ಎಗೈನ್‌’ ಘೋಷಣೆಯ ಅನಂತರ ಅವರು ತಮ್ಮ ಗಳಿಕೆಯನ್ನು ಪ್ರಾರಂಭಿಸುವ ನಿರೀಕ್ಷೆಯಲ್ಲಿದ್ದರೂ ಕಳೆದ ಎರಡೂವರೆ ತಿಂಗಳ ಸುದೀರ್ಘ‌ ಲಾಕ್‌ಡೌನ್‌ನ ಕಹಿ-ನೆನಪುಗಳಿಂದ ಹೊರಬರಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.

ಔರಂಗಾಬಾದ್‌ ರೈಲ್ವೇ ನಿಲ್ದಾಣದ 14 ಕೂಲಿಗಳು ಲಾಕ್‌ಡೌನ್‌ಗೆ ಮುಂಚಿತವಾಗಿ ಪ್ರತಿದಿನ 300 ರಿಂದ 400 ರೂ. ಗಳಿಸುತ್ತಿದ್ದರು. ಆದರೆ ರೈಲುಗಳು ಸ್ಥಗಿತಗೊಂಡ ಅನಂತರ, ಈ ಅಲ್ಪ ಆದಾಯವೂ ನಿಂತುಹೋಗಿದೆ ಎಂದು ಶಾಹ್‌ ಪಿಟಿಐಗೆ ತಿಳಿಸಿದ್ದಾರೆ. ಸುಮಾರು ಎರಡು ತಿಂಗಳಿನಿಂದ ನಾನು ಒಂದೇ ಒಂದು ರೂಪಾಯಿ ಆದಾಯ ಗಳಿಸಿಲ್ಲ ಎಂದರು. ಇಲ್ಲಿರುವ ಪ್ರತಿಯೊಬ್ಬ ಕೂಲಿಯ ಕಥೆಯೂ ಇದೇ ಆಗಿದೆ ಎಂದವರು ಹೇಳಿದ್ದಾರೆ. ವಲಸೆ ಕಾರ್ಮಿಕರನ್ನು ಸಾಗಿಸಲು ಕಳೆದ ತಿಂಗಳು ಶ್ರಮಿಕ ವಿಶೇಷ ರೈಲುಗಳ ಘೋಷಣೆಯಾದಾಗ ನಾವು ರೈಲು ಪ್ರಯಾಣಿಕರಿಂದ ಸ್ವಲ್ಪ ಆದಾಯವನ್ನು ನಿರೀಕ್ಷಿಸಿದ್ದೆವು ಆದರೆ ಏನೂ ಆಗಲಿಲ್ಲ. ಪ್ರಯಾಣಿಕರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು ಮತ್ತು ನಮಗೂ ಕೋವಿಡ್ ವೈರಸ್‌ ಸೋಂಕಿಗೆ ತುತ್ತಾಗುವ ಭಯ ಹುಟ್ಟಿಕೊಂಡಿತು ಎಂದವರು ಹೇಳಿದ್ದಾರೆ. ಪ್ರಸ್ತುತ ಔರಂಗಾಬಾದ್‌ನಿಂದ ಕೇವಲ ಒಂದು ರೈಲು ಮಾತ್ರ ಕಾರ್ಯನಿರ್ವಹಿಸುತ್ತಿದೆ ಎಂದು ಶಾಹ್‌ ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next