ಕಲಬುರಗಿ: ಕೊರೊನಾ ಸೋಂಕು ಹರಡುವಿಕೆ ನಿಯಂತ್ರಣಕ್ಕಾಗಿ ಲಾಕ್ ಡೌನ್ ಅನುಷ್ಠಾನಗೊಳಿಸಲು ಪೊಲೀಸರು ಎರಡನೇ ದಿನವೂ ಬಿಗಿ ಕ್ರಮ ಕೈಗೊಂಡರು. ಬೆಳಗ್ಗೆ 10 ಗಂಟೆ ನಂತರ ಸಂಪೂರ್ಣವಾಗಿ ಸಂಚಾರ ರದ್ದುಗೊಂಡಿದ್ದರಿಂದ ಜನರು ಪರದಾಟುವಂತ ಸ್ಥಿತಿ ನಿರ್ಮಾಣವಾಯಿತು.
ಬೆಳಗ್ಗೆ 6 ಗಂಟೆಯಿಂದ 10 ಗಂಟೆ ವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿತ್ತು. ಸೋಮವಾರ ವಾಹನಗಳನ್ನು ಬಿಟ್ಟು ನಡೆದುಕೊಂಡೇ ಬರಬೇಕೆಂದು ಸಾರ್ವಜನಿಕರಿಗೆ ಸೂಚಿಸಲಾಗಿತ್ತು. ಅನೇಕರು ವಾಹನಗಳಲ್ಲೇ ರಸ್ತೆಗಳಿಗೆ ಇಳಿದಿದ್ದರು. ಹೀಗಾಗಿ ಬೆಳಗ್ಗೆಯಿಂದಲೇ ಪೊಲೀಸರು ವಾಹನಗಳನ್ನು ಜಪ್ತಿ ಮಾಡಿದ್ದರು.
ಮಂಗಳವಾರ ಬೆಳಗಿನ ಹೊತ್ತು ವಾಹನಗಳಿಗೆ ಅನುಮತಿ ನೀಡಲಾಗಿತ್ತು. ಆದರೆ, 10 ಗಂಟೆ ನಂತರ ಖಾಸಗಿ ವಾಹನಗಳಿಗೂ ಸಂಪೂರ್ಣ ನಿರ್ಬಂಧ ವಿಧಿಸಿದ್ದರಿಂದ ಹಾಗೂ ಆಟೋ ಸಂಚಾರವನ್ನು ನಿಷೇಧಿಸಿದ್ದರಿಂದ ಜನರು ಸಮಸ್ಯೆ ಎದುರಿಸಿದರು. ಇತ್ತ, ಸಕಾರಣವಿಲ್ಲದೇ ರಸ್ತೆಗಿಳಿದ ಬೈಕ್ ಮತ್ತು ಕಾರು, ಇತರ ವಾಹನಗಳನ್ನು ಪೊಲೀಸರು ಜಪ್ತಿ ಮಾಡಿದರು.
ರೈಲಲ್ಲಿ ಬಂದವರ ಫಜೀತಿ: ಲಾಕ್‌ಡೌನ್ ಬಿಗಿಯಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಸಾರಿಗೆ ಬಸ್ ಸಂಚಾರ ಸೇರಿ ಅನಗತ್ಯವಾದ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಆದರೆ, ರೈಲು ಸಂಚಾರ ಯಥಾಪ್ರಕಾರ ಇದ್ದು, ವಿವಿಧ ಕಡೆಗಳಿಂದ ರೈಲುಗಳ ಮೂಲಕ ಬಂದ ನಗರ ನಿವಾಸಿಗಳು ಮತ್ತು ಗ್ರಾಮೀಣ ಜನರು ತಮ್ಮ ಊರುಗಳಿಗೆ ತೆರಳಲು ಪರದಾಡಿದರು. ಅನೇಕರು ರೈಲ್ವೆ ನಿಲ್ದಾಣದಿಂದ ಬಿಸಿಲಲ್ಲೇ ನಡೆದುಕೊಂಡೇ ಮನೆಗಳಿಗೆ ಸೇರಬೇಕಾಯಿತು.
ಹಲವರು ಲಗೇಜ್ ಗಳನ್ನು ಹೊತ್ತುಕೊಂಡು ಸಾಗಿದರು. ಗ್ರಾಮೀಣ ಪ್ರದೇಶಕ್ಕೆ ಹೋಗಬೇಕಾಗಿದ್ದ ಪ್ರಯಾಣಿಕರು ಪಜೀತಿ ಅನುಭವಿಸಿದರು. ರೈಲ್ವೆ ನಿಲ್ದಾಣದಿಂದ ಜಗತ್ ವೃತ್ತ, ಬೇರೆ-ಬೇರೆ ಕಡೆಗಳಿಂದ ನಡೆದುಕೊಂಡು ಬಂದು ವಾಹನ ಸಿಗದೇ ಸುಮಾರು ಹೊತ್ತು ರಸ್ತೆಯಲ್ಲೇ ಕುಳಿತಿದ್ದರು. ಲಾಕ್‌ಡೌನ್ ವಿಧಿಸಿರುವುದು ಒಳ್ಳೆ ಯದೇ. ಆದರೆ, ರೈಲುಗಳ ಮೂಲಕ ಬಂದವರು ಮನೆಗೆ ಹೋಗಲು ಏನು ಮಾಡಬೇಕು? ಇಲ್ಲೂ ಯಾವ ವಾಹನಗಳು ಸಿಗುತ್ತಿಲ್ಲ.
ಊರಿನಿಂದ ವಾಹನ ತೆರಳುವಾಗ ರಸ್ತೆ ಮಧ್ಯೆ ಪೊಲೀಸರು ತಡೆದರೇ ಗತಿಯೇನು? ಹೀಗಾಗಿ ನಡುರಸ್ತೆಯಲ್ಲೇ ನಾವು ಕುಳಿತುಕೊಳ್ಳುವಂತೆ ಆಗಿದೆ ಎಂದು ಬೆಂಗಳೂರಿನಿಂದ ಕಮಲಾಪುರ ತಾಲೂಕಿನ ಕವನಳ್ಳಿ ಗ್ರಾಮದ ಶಿವಾಜಿ ಪವಾರ ಅಳಲು ತೋಡಿಕೊಂಡರು. ಅಧಿಕಾರಿಗೆ ದಂಡ: ಗುಟಕಾ ಹಾಕಿ ಉಗುಳುತ್ತಾ ಕಾರಿನಲ್ಲಿ ಮಾಸ್ಕ್ ಧರಿಸದೇ ಬಂದ ಅ ಧಿಕಾರಿಯೊಬ್ಬರಿಗೆ ನಗರದ ಹುಮನಾಬಾದ್ ರಿಂಗ್ ರಸ್ತೆಯಲ್ಲಿ ಪೊಲೀಸರು ತಡೆದು ದಂಡ ಹಾಕಿದ ಘಟನೆ ನಡೆಯಿತು.
ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅಧಿಕಾರಿ ಮಾಸ್ಕ್ ಹಾಕಿಕೊಂಡು, ನೈಟ್ ಡ್ರೆಸ್ ಮೇಲೆಯೇ ರಸ್ತೆಗೆ ಬಂದಿದ್ದರು. ಆಗ ತಡೆದ ಪೊಲೀಸರು ವಿಚಾರಣೆ ನಡೆಸಿದರು. ಈ ವೇಳೆ ನಾನು ಬೆಳಗ್ಗೆಯಿಂದ ಕೆಲಸದಲ್ಲಿ ತೊಡಗಿದ್ದೇನೆ ಎಂದು ಅಧಿಕಾರಿ ವಾಗ್ವಾದ ನಡೆಸಿದರು. ಆದರೂ, ಪೊಲೀಸರು ಕೇಳದೇ 250ರೂ. ದಂಡ ಹಾಕಿ ಕಳುಹಿಸಿದರು.