ವರದಿ : ಸದಾಶಿವ ಹಿರೇಮಠ
ಬಂಕಾಪುರ: ಕಳೆದ ವರ್ಷ ಇನ್ನೇನು ಶುಭ ಸಮಾರಂಭಗಳು ಆರಂಭವಾಗಿ ಶಾಮಿಯಾನ ಉದ್ಯೋಗ ನಂಬಿಕೊಂಡ ಮಾಲಿಕರು, ಕಾರ್ಮಿಕರ ಬವಣೆಗಳು ನೀಗಲಿವೆ ಎಂದುಕೊಳ್ಳುವಷ್ಟರಲ್ಲಿಯೇ ಮತ್ತೆ ಕೊರೊನಾ ಒಕ್ಕರಿಸಿ ಲಾಕ್‌ಡೌನ್ ಘೋಷಣೆಯಾಗಿದ್ದರಿಂದ ಶಾಮಿಯಾನ ಹಾಕುವವರ ಬದುಕು ಇನ್ನಿಲ್ಲದ ಸಂಕಷ್ಟಕ್ಕೆ ಸಿಲುಕಿದಂತಾಗಿದೆ.
ಸಾಲ ಸೂಲ ಮಾಡಿ ಲಕ್ಷಾಂತರ ರೂ. ಬಂಡವಾಳ ಹೂಡಿ ಬದುಕು ಕಟ್ಟಿಕೊಳ್ಳಲು ಆರಂಭಿಸಿರುವ ಶಾಮಿಯಾನ, ಭಾಂಡೆ ಸಾಮಗ್ರಿಗಳು, ಕುರ್ಚಿ, ಅಲಂಕಾರಿಕ ವಸ್ತುಗಳು ಲಾಕ್‌ಡೌನ್‌ನಿಂದ ವರ್ಷದಿಂದ ಇಟ್ಟಲ್ಲೇ ಇಟ್ಟು ಧೂಳು ತಿನ್ನುತ್ತಲಿವೆ. ಶಾಮಿಯಾನ ಹಾಕುವವರ ಬದುಕು ಬೀದಿಗೆ ಬಂದು ನಿಂತಿದೆ. ಇನ್ನೇನು ಕೊರೊನಾ ಸಂಕಷ್ಟ ದೂರವಾಗಿ, ಕಳೆದ ವರ್ಷ ಲಾಕ್‌ಡೌನ್‌ನಿಂದ ಮುಂದೂಡಲ್ಪಟ್ಟಿದ್ದ ನಿಶ್ಚಿತಾರ್ಥ, ಮದುವೆ, ಮುಂಜಿ ಸೇರಿದಂತೆ ಇತರೇ ಶುಭ ಸಮಾರಂಭಗಳು 2021ರ ಶುಭ ಮೂಹೂರ್ತದಲ್ಲಿ ಆರಂಭವಾಗಲಿವೆ ಎಂಬ ಲೆಕ್ಕಾಚಾರದಲ್ಲಿ ಕಷ್ಟಗಳು ದೂರವಾಗಲಿವೆ ಎಂಬ ಆಶಾ ಗೋಪುರ ಕಟ್ಟಿಕೊಂಡಿದ್ದ ಶಾಮಿಯಾನ ಮಾಲಿಕರು, ಕಾರ್ಮಿಕರಿಗೆ ಎರಡನೇ ಕೊರೊನಾ ಅಲೆ ಪುನಃ ಆಘಾತ ನೀಡಿದೆ.
ವರ್ಷದಲ್ಲಿ ನಾಲ್ಕು ತಿಂಗಳು ದುಡಿದು ಎಂಟು ತಿಂಗಳು ಕುಳಿತು ತಿನ್ನುವ ಶಾಮಿಯಾನದವರ ಬದುಕಿಗೆ ಸತತ ಎರಡು ವರ್ಷ ಕೊರೊನಾ ಕರಿನೆರಳು ಆವರಿಸಿದ ಪರಿಣಾಮ ಜೀವನ ನಿರ್ವಹಣೆ ಕಷ್ಟವಾಗಿದೆ. ಸರ್ಕಾರ ಎರಡನೇ ಅಲೆಯಿಂದ ಸಂಕಷ್ಟಕ್ಕೆ ಸಿಲುಕಿದವರಿಗೆ ಆರ್ಥಿಕ ಪರಿಹಾರದ ಪ್ಯಾಕೇಜ್ ಘೋಷಿಸಿದೆ. ಆದರೆ ಅದರಲ್ಲಿ ಕಟ್ಟಡ ಕಾರ್ಮಿಕರು, ಬೀದಿ ವ್ಯಾಪಾರಸ್ಥರು, ಕಲಾವಿದರು, ಆಟೋ, ಟ್ಯಾಕ್ಸಿ ಕ್ಯಾಬ್ ಚಾಲಕರು, ಹೂ, ಹಣ್ಣು, ತರಕಾರಿ ಬೆಳೆಗಾರರು ಸೇರಿದಂತೆ ಇತರರನ್ನು ಸೇರಿಸಿರುವುದು ಸ್ವಾಗತಾರ್ಹವಾದರೂ ಅದರಲ್ಲಿ ಶಾಮಿಯಾನ ಮಾಲಿಕರು, ಕಾರ್ಮಿಕರನ್ನು ಕೈಬಿಟ್ಟಿರುವುದರಿಂದ ಈ ವರ್ಗದವರ ನೋವು ಇಮ್ಮಡಿಯಾದಂತಾಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಶಾಮಿಯಾನದವರ ಕುಟುಂಬ ನಿರ್ವಹಣೆ ಕಷ್ಟ ಸಾಧ್ಯವಾಗಿದೆ.
ಸರ್ಕಾರ ಶಾಮಿಯಾನ ಮಾಲಿಕರು, ಕಾರ್ಮಿಕರಿಗೆ ಕನಿಷ್ಠ 25 ಸಾವಿರ ರೂ. ಆರ್ಥಿಕ ಪರಿಹಾರ ಘೋಷಿಸುವಂತೆ ಶಾಮಿಯಾನ ಮಾಲಿಕ, ಕಾರ್ಮಿಕರ ಸಂಘ ಒತ್ತಾಯಿಸಿದೆ.