Advertisement

ಟ್ರಾಫಿಕ್‌ ಸುಧಾರಣೆಗೆ ಪಾಲಿಕೆಯಿಂದ ವಾರ್ಡ್‌ಗಳಲ್ಲಿ ಸ್ಥಳ ಸಮೀಕ್ಷೆ 

09:03 PM Jul 15, 2021 | Team Udayavani |

ಮಹಾನಗರ: ಸ್ಮಾರ್ಟ್‌ ಸಿಟಿಯಾಗಿ ಬೆಳೆಯುತ್ತಿರುವ ಮಂಗ ಳೂರು ನಗರದಲ್ಲಿ ಟ್ರಾಫಿಕ್‌ ಮತ್ತು ಪಾರ್ಕಿಂಗ್‌ ಸಮಸ್ಯೆ ತಲೆದೋರುತ್ತಿದ್ದು, ಇದರ ನಿವಾರಣೆಗೆ ಪಾರ್ಕಿಂಗ್‌ ಜಾಗ ಗುರುತಿಸುವ ನಿಟ್ಟಿನಲ್ಲಿ ನಗರದ ವಾರ್ಡ್‌ ಮಟ್ಟದಲ್ಲಿ ಸ್ಥಳ ಸಮೀಕ್ಷೆ ನಡೆಸಲು ಮಂಗ ಳೂರು ಮಹಾನಗರ ಪಾಲಿಕೆ ನಿರ್ಧರಿಸಿದೆ.

Advertisement

ಕೊರೊನಾ ಕಾರಣದಿಂದ ವಿಧಿಸಲಾಗಿದ್ದ ಲಾಕ್‌ಡೌನ್‌ ಸದ್ಯ ಸಡಿಲಗೊಂಡಿದ್ದು, ನಗರದ ವ್ಯಾಪಾರ ಚಟುವಟಿಕೆಗಳು ಚುರುಕುಗೊಳ್ಳುತ್ತಿವೆ. ಮುಂದಿನ ದಿನಗಳಲ್ಲಿ ನಗರದಲ್ಲಿ ಮತ್ತೆ ಪಾರ್ಕಿಂಗ್‌ ಸಮಸ್ಯೆ ಎದುರಾಗುವ ಸಾಧ್ಯತೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಈಗವೇ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದ್ದು, ಅದಕ್ಕೆಂದು ವಾಹನಗಳ ಪಾರ್ಕಿಂಗ್‌ಗೆ ವಾರ್ಡ್‌ಗಳಲ್ಲಿ ಎಲ್ಲೆಲ್ಲಾ ಸ್ಥಳಾವಕಾಶ ಇದೆ ಎಂಬ ವರದಿ ನೀಡುವಂತೆ ಕಂದಾಯಾಧಿಕಾರಿಗಳಿಗೆ ಮನಪಾ ಆಯುಕ್ತರು ಸೂಚನೆ ನೀಡಿದ್ದಾರೆ.

ಮಂಗಳೂರಿನಲ್ಲಿ ಪಾರ್ಕಿಂಗ್‌ ಸಮಸ್ಯೆಯ ಕುರಿತಂತೆ “ಉದಯವಾಣಿ ಸುದಿನ’ ಕೆಲವು ತಿಂಗಳುಗಳ ಹಿಂದೆ “ಪಾರ್ಕಿಂಗ್‌ ಪರದಾಟ’ ಎಂಬ ಸರಣಿ ಅಭಿಯಾನವನ್ನು ನಡೆಸಿತ್ತು. ಈ ವೇಳೆ ನಡೆಸಿದ ಸಂವಾದ ಕಾರ್ಯಕ್ರಮಕ್ಕೆ ಶಾಸಕ ವೇದವ್ಯಾಸ ಕಾಮತ್‌ ಮತ್ತು ಮನಪಾ ಆಯುಕ್ತ ಅಕ್ಷಯ್‌ ಶ್ರೀಧರ್‌ ಆಗಮಿಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಭರವಸೆ ನೀಡಿದ್ದರು. ಅದರಂತೆ ಮಂಗಳೂರಿನ ಟ್ರಾಫಿಕ್‌ ಸುಧಾರಣೆ ಕುರಿತಂತೆ ಮಹಾನಗರ ಪಾಲಿಕೆ, ಪೊಲೀಸ್‌ ಇಲಾಖೆಯ ನೇತೃತ್ವದಲ್ಲಿ ವಿಶೇಷ ಸಭೆ ನಡೆಸಲಾಗಿತ್ತು. ನಗರದಲ್ಲಿ ಪಾರ್ಕಿಂಗ್‌, ನೋ ಪಾರ್ಕಿಂಗ್‌ ಸಹಿತ ಟ್ರಾಫಿಕ್‌ ವ್ಯವಸ್ಥೆ ಸುಧಾರಣೆ ಮಾಡುವ ನಿಟ್ಟಿನಲ್ಲಿ ಸಲಹಾ ಸಮಿತಿ ರಚನೆ ಮಾಡುವ ನಿರ್ಧಾರ ಕೈಗೊಳ್ಳಲಾಗುತ್ತಿತ್ತು. ಇದಾದ ಕೆಲವೇ ದಿನದಲ್ಲಿ ಜಿಲ್ಲೆಯಲ್ಲಿ ಕೊರೊನಾ ತೀವ್ರತೆ ಪಡೆದು ಲಾಕ್‌ಡೌನ್‌ ಘೋಷಿಸಲಾಗಿದ್ದು, ಇದರಿಂದಾಗಿ ನಿಗದಿತ ನಿರ್ಧಾರಕ್ಕೆ ಹಿನ್ನಡೆ ಉಂಟಾಗಿತ್ತು. ಇದೀಗ ಈ ಯೋಜನೆಗೆ ಮತ್ತೆ ಚುರುಕು ನೀಡಲು ಮನಪಾ ನಿರ್ಧರಿಸಿದೆ.

ಫುಟ್‌ಪಾತ್‌ ಪಾದಚಾರಿ ಗಳಿಗಷ್ಟೇ ಮೀಸಲು :

ನಗರದಲ್ಲಿರುವ ಫುಟ್‌ಪಾತ್‌ಗಳು ಕೇವಲ ಪಾದಚಾರಿಗಳಿಗೆ ಮಾತ್ರ ಮೀಸಲು ಇರಬೇಕು. ಫುಟ್‌ಪಾತ್‌ ಅತಿಕ್ರಮಣ ಮಾಡಿದವರ ವಿರುದ್ಧ ಕಠಿನ ಕ್ರಮಕ್ಕೆ ಮನಪಾ ಮುಂದಾಗಿದೆ. ನಗರದ ಕೆಲವೊಂದು ಕಡೆಗಳಲ್ಲಿ ಫುಟ್‌ಪಾತ್‌ನಲ್ಲಿ ವಾಹನಗಳನ್ನು ನಿಲ್ಲಿಸಲಾಗುತ್ತಿದ್ದು, ಹಲವೆಡೆ ಫುಟ್‌ಪಾತ್‌ ಮೇಲೆ ಬೀದಿ ಬದಿ ವ್ಯಾಪಾರ ನಡೆಸಲಾಗುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಪಾಲಿಕೆ ಕೆಲವೇ ದಿನದಲ್ಲಿ ದಿಢೀರ್‌ ಕಾರ್ಯಾ ಚರಣೆ ನಡೆಸಲು ನಿರ್ಧರಿಸಿದೆ.

Advertisement

ನಗರದಲ್ಲಿ ಟ್ರಾಫಿಕ್‌ ಸುಧಾರಣೆ ಮತ್ತು ಪಾರ್ಕಿಂಗ್‌ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಈ ಕುರಿತಂತೆ ಈಗಾಗಲೇ ಅಧಿಕಾರಿಗಳ ಸಭೆ ನಡೆಸಿದ್ದು, ಸೂಕ್ತ ಕ್ರಮಕ್ಕೆ ಆದೇಶಿಸಿದ್ದೇನೆ. ವಾಹನಗಳ ಪಾರ್ಕಿಂಗ್‌ ಸಮಸ್ಯೆ ಕುರಿತು ನಗರದ ವಾರ್ಡ್‌ ಮಟ್ಟದ ಎಲ್ಲೆಲ್ಲಾ ಸ್ಥಳಾವಕಾಶ ಇದೆ ಎಂಬ ಸಮೀಕ್ಷೆ ನಡೆಸಲು ಕಂದಾಯಾಧಿಕಾರಿಗಳಿಗೆ ಸೂಚಿಸಿದ್ದೇನೆ. ಸದ್ಯದಲ್ಲೇ ಅವರು ವರದಿ ನೀಡಲಿದ್ದು, ಅದರ ಪ್ರಕಾರ ಕ್ರಮ ಕೈಗೊಳ್ಳುತ್ತೇವೆ. ಜತೆಗೆ ಫುಟ್‌ಪಾತ್‌ ಅತಿಕ್ರಮಣ ತಡೆಗೂ ನಿರ್ಧರಿಸಿದ್ದೇವೆ. ಅಕ್ಷಯ್‌ ಶ್ರೀಧರ್‌,  ಮನಪಾ ಆಯುಕ್ತರು

Advertisement

Udayavani is now on Telegram. Click here to join our channel and stay updated with the latest news.

Next