Advertisement
ವಿಜಯನಗರ ಕಾಲದ ಶಾಸನವಿಜಯನಗರ ಸಾಮ್ರಾಜ್ಯವನ್ನು ಸ್ಥಾಪನೆ ಮಾಡಿದ ಸಂಗಮ ರಾಜ ಮನೆತನದ ಬುಕ್ಕರಾಯನ ಆಳ್ವಿಕೆಯ ಕಾಲದ ಶಾಸನವಿದಾಗಿದೆ. ಆತನ ಆಳ್ವಿಕೆಯ ಕಾಲದಲ್ಲಿ ಗೋಪರಸ ಒಡೆಯನು ಬಾರಕೂರಿನ ರಾಜ್ಯ ಪಾಲನಾಗಿ ಆಳ್ವಿಕೆ ಯನ್ನು ನಡೆಸುತ್ತಿದ್ದನೆಂದು ಶಾಸನದಲ್ಲಿ ಹೇಳಲಾಗಿದೆ.
ಶಕವರುಷ 1290 ನೆಯ ಕೀಲಕ ಸಂವತ್ಸರ ಎಂದು ಕಾಲವನ್ನು ಉಲ್ಲೇಖೀಸಿರುವುದರಿಂದ ಶಾಸನದ ಕಾಲ ಕ್ರಿ.ಶ. 1368ಕ್ಕೆ ಸರಿ ಹೊಂದುತ್ತದೆ. ಕಬ್ಬುನಾಡ ಏಳು, ಹಂನೆರೆಡು ಯೆಕ್ಕಲ ಬಳಿಯವರು, ನಾಡ ನಾಲ್ವರು ಮತ್ತು ಸೇನಭೋವ ತಿಪ್ಪ ಕೊಲ್ಲೂರ ಕೋಟೆಗೆ ಮುತ್ತಿಗೆ ಹಾಕಿದ್ದನ್ನು ಈ ಶಾಸನದಲ್ಲಿ ಪ್ರಸ್ಥಾಪಿಸಲಾಗಿದೆ. ಈ ಕಾಳಗದಲ್ಲಿ ಕಾಡದಿ ಮುತ್ತ ಎಂಬುವನು ವೀರಮರಣವನ್ನು ಹೊಂದಿದ ವಿಷಯವನ್ನು ಮತ್ತು ಆತನಿಗೆ ನೀಡಿದ ಮಾನ್ಯವನ್ನು ಶಾಸನದಲ್ಲಿ ವಿವರಿಸಲಾಗಿದೆ. ಆತನಿಗೆ ನೀಡಿದ ಮಾನ್ಯವನು ಬಾರಕೂರ ಸಭೆಯ ಮಾನ್ಯವೆಂದು ಶಾಸನದಲ್ಲಿ ಹೇಳಲಾಗಿದೆ. ಆದರೆ ಬಾರಕೂರ ಸಭೆಯ ಮಾನ್ಯವೆಂದರೆ ಏನು ಎನ್ನುವುದು ಸ್ಪಷ್ಟವಿಲ್ಲ. ಕದಳಿ ಹೆಸರಿನ ಸ್ವಾರಸ್ಯ
ಶಾಸನ ಇರುವ ಕದಳಿಯನ್ನು ಶಾಸನದಲ್ಲಿ ಕಡುವಳಿ ಎಂದು ಕರೆಯಲಾಗಿದೆ. ಕದಳಿಯ ಮಹಾಲಿಂಗೇಶ್ವರನನ್ನು ಕಡುವಳಿ ಮಹಾದೇವನೆಂದು ಕರೆಯಲಾಗಿದೆ. ಅಂದರೆ ಕದಳಿಯ ಮೂಲರೂಪ ಕಡುವಳಿ ಯಾಗಿದ್ದು ಜನರ ಆಡುಮಾತಿನಲ್ಲಿ ಕಡುವಳಿ ಕದಳಿಯಾಗಿ ಬದಲಾಗಿರುವುದನ್ನು ಶಾಸನ ಸ್ಪಷ್ಟಪಡಿಸುತ್ತದೆ. ಈ ಶಾಸನಾಧ್ಯಯನದಲ್ಲಿ ಕದಳಿ ಶ್ರೀಧರ ಉಡುಪ, ರಮಾನಂದ ಮಧ್ಯಸ್ಥ, ಹೊಸೂರು ಮೂಕಾಂಬಿಕಾ ಹೈಸ್ಕೂಲಿನ ಮುಖ್ಯೋ ಪಾಧ್ಯಾಯ ಚಂದ್ರ ಶೆಟ್ಟಿ, ವಂಡಬಳ್ಳಿ ಸುಧಾಕರ ಶಟ್ಟಿ, ಕೊಲ್ಲೂರಿನ ಮುರಳೀಧರ ಹೆಗಡೆ, ಕಾಲೇಜಿನ ವಿದ್ಯಾರ್ಥಿಗಳಾದ ಪ್ರಜ್ಞಾ, ರಕ್ಷಿತಾ, ಸುರಕ್ಷಾ ಮತ್ತು ಸುಭಾಷ್ ಸಹಕರಿಸಿದ್ದರು.