Advertisement

ಸೋಂಕಿತರ ಸಂಪರ್ಕಿತರ ಪತ್ತೆ ಮಾಡಿ

07:25 PM Aug 31, 2020 | Suhan S |

ಹಿರಿಯೂರು: ಕೋವಿಡ್ ವೈರಸ್‌ ವ್ಯಾಪಕವಾಗಿ ಹರಡುತ್ತಿದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ಪರ್ಯಾಯ ಚಿಂತನೆಗಳನ್ನು ರೂಪಿಸುವುದರ ಜೊತೆಗೆ ಸೋಂಕಿತರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರನ್ನು ಪತ್ತೆ ಹಚ್ಚಿ ಚಿಕಿತ್ಸೆ ನೀಡಲು ಬಿಎಲ್‌ಒಗಳು ಮುಂದಾಗಬೇಕು ಎಂದು ಉಪವಿಭಾಗಾಧಿಕಾರಿ ಪ್ರಸನ್ನ ಸೂಚಿಸಿದರು.

Advertisement

ನಗರದ ತಾಲೂಕು ಕಚೇರಿಯಲ್ಲಿ ನಡೆದ ಬಿಎಲ್‌ಒಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಆರೋಗ್ಯವಂತ ದೇಹಕ್ಕೆ ಕೋವಿಡ್ ವೈರಸ್‌ ಪ್ರವೇಶಿಸಿದರೆ ಅಪಾಯ ತಪ್ಪಿದ್ದಲ್ಲ. ಪಾಸಿಟಿವ್‌ ದೃಢಪಟ್ಟ ತಕ್ಷಣ ಆ ವ್ಯಕ್ತಿಯ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದವರನ್ನು ಪತ್ತೆ ಹಚ್ಚಬೇಕು. ವಿಶೇಷವಾಗಿ ಅಂತಹ ಮನೆಗಳಲ್ಲಿ 60 ವರ್ಷ ದಾಟಿದವರು, ಹತ್ತು ವರ್ಷದ ಒಳಗಿನ ಮಕ್ಕಳು, ಗರ್ಭಿಣಿಯರು ಇದ್ದಲ್ಲಿ ತಪಾಸಣೆಗೆ ಒಳಪಡುವಂತೆ ಜಾಗೃತಿ ಮೂಡಿಸಬೇಕು. ಅರ್ಧ ಗಂಟೆಯಲ್ಲಿ ವರದಿ ಸಿಗಲಿದ್ದು, ನೆಗೆಟಿವ್‌ ಕಂಡುಬಂದಲ್ಲಿ ಕ್ವಾರಂಟೈನ್‌ ಅಗತ್ಯವಿಲ್ಲ ಎಂದರು.

ತಾಲೂಕು ಆರೋಗ್ಯಾಧಿಕಾರಿ ಡಾ| ವೆಂಕಟೇಶ್‌ ಮಾತನಾಡಿ, ಕೋವಿಡ್ ಪಾಸಿಟಿವ್‌ ದೃಢಪಟ್ಟಲ್ಲಿ ಕೋವಿಡ್‌ ಆಸ್ಪತ್ರೆಗೆ ದಾಖಲಾಗಬೇಕಾಗುತ್ತದೆ ಎಂಬ ಕಾರಣಕ್ಕೆ ಕೆಲವರು ರೋಗದ ಲಕ್ಷಣಗಳಿದ್ದರೂ ಪರೀಕ್ಷೆ ಮಾಡಿಸಿಕೊಳ್ಳುತ್ತಿಲ್ಲ. ಈ ನಿಟ್ಟಿನಲ್ಲಿ ಕೊರೊನಾ ಪಾಸಿಟಿವ್‌ ಬಂದ ವ್ಯಕ್ತಿಯ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರನ್ನು ಪತ್ತೆ ಹಚ್ಚಿದಾಗ ಮಾತ್ರ ರೋಗ ನಿಯಂತ್ರಣ ಸಾಧ್ಯ ಎಂದರು. ಕಿರಿಯ ಆರೋಗ್ಯ ಸಹಾಯಕ ವಿನಯ್‌ ಮಾತನಾಡಿ, ಅಗತ್ಯ ವಸ್ತು ಖರೀದಿಸಲು ಹೋದಾಗ ಸಂಪರ್ಕಕ್ಕೆ ಬಂದವರು, ಹಾಗೂ ವ್ಯಾವಹಾರಿಕ ಸಂಪರ್ಕದವರು ಎಂದು ವಿಂಗಡಿಸಿಕೊಂಡಲ್ಲಿ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರನ್ನು ಪತ್ತೆ ಮಾಡುವುದು ಸುಲಭವಾಗುತ್ತದೆ. ಬಿಎಲ್‌ಒಗಳು ದೂರವಾಣಿ ಕರೆ ಮಾಡಿದಾಗ ಕೆಲವರು ಬೇಕೆಂದೇ ತಪ್ಪು ಮಾಹಿತಿ ನೀಡುತ್ತಿರುವ ಕಾರಣ ನಮ್ಮ ಕರ್ತವ್ಯಕ್ಕೆ ಅಡ್ಡಿಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸಭೆಯಲ್ಲಿ ತಹಶೀಲ್ದಾರ್‌ ಸತ್ಯನಾರಾಯಣ, ಕ್ಷೇತ್ರ ಶಿಕ್ಷಣಾಧಿಕಾರಿ ರಾಮಯ್ಯ, ನಗರಸಭೆ ಪೌರಾಯುಕ್ತೆ ಲೀಲಾವತಿ ಮತ್ತಿತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next