Advertisement

ನಿವೇಶನದ ನಕಲಿ ಹಂಚಿಕೆ ಪತ್ರ ಮಾರಾಟ ಜಾಲ ಪತ್ತೆ

05:38 AM Jun 13, 2020 | Lakshmi GovindaRaj |

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಹೆಸರನ್ನು ದುರುಪಯೋಗ ಪಡಿಸಿಕೊಂಡು ನಾಡಪ್ರಭು ಕೆಂಪೇಗೌಡ ಬಡಾವಣೆಯ ನಿವೇಶನಗಳ ನಕಲಿ ಹಕ್ಕು ಪತ್ರಗಳನ್ನು ಸೃಷ್ಟಿಸಿ ಸಾರ್ವಜನಿಕರಿಗೆ ವಂಚನೆ ಮಾಡುತ್ತಿದ್ದ ಜಾಲವನ್ನು ಪತ್ತೆ ಹಚ್ಚುವಲ್ಲಿ ಬಿಡಿಎ  ಯಶಸ್ವಿಯಾಗಿದೆ. ಪ್ರಕರಣದ ಪ್ರಮುಖ ಆರೋಪಿ ಚಾಮರಾಜಪೇಟೆಯ ವಿಜಯಾನಂದಸ್ವಾಮಿ ಎಂಬಾತನನ್ನು ಬಂಧಿಸಿ ಕಾಗದ ಪತ್ರಗಳನ್ನು ಸ್ವಾಧೀನಪಡಿಸಿಕೊಂಡಿದೆ.

Advertisement

ವಿಜಯಾನಂದಸ್ವಾಮಿ ಬಿಡಿಎ ಹೆಸರಿನಲ್ಲಿ ನಿವೇಶನದ ನಕಲಿ ಹಂಚಿಕೆ ಪತ್ರ ತಯಾರಿಸಿದ್ದ. ಬಿಡಿಎ ಹೆಸರಿನ ನಕಲಿ ರಬ್ಬರ್‌ ಸ್ಟಾಂಪ್‌ ಹಾಗೂ ಪ್ರಾಧಿಕಾರದ ಆಯುಕ್ತರ ನಕಲಿ ಸಹಿಯನ್ನು ಬಳಸಿದ್ದ. ಈ ರೀತಿ ಈಗಾಗಲೇ 50ಕ್ಕೂ ಹೆಚ್ಚು  ಜನರಿಗೆ ನಿವೇಶನದ ನಕಲಿ ಹಕ್ಕುಪತ್ರಗಳನ್ನು ನೀಡಿ 50 ಸಾವಿರದಿಂದ 3 ಲಕ್ಷಗಳವರೆಗೆ ಹಣವನ್ನು ವಸೂಲಿ ಮಾಡಿ ವಂಚಿಸಿದ್ದಾನೆ ಎಂದು ಬಿಡಿಎ ಅಧಿಕಾರಿಗಳು ತಿಳಿಸಿದ್ದಾರೆ.

ಉತ್ತರ ಕರ್ನಾಟಕ ಪ್ರದೇಶ ರೈತ ಸಂಘದ ರಾಜ್ಯಾಧ್ಯಕ್ಷ  ಎಂದು ಹೇಳಿಕೊಂಡಿದ್ದ ಆರೋಪಿಯು ಈ ಸಂಘದ ಮೂಲಕ ಬಿಡಿಎಯ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ರಚಿಸಿರುವ ನಿವೇಶನಗಳನ್ನು ರಿಯಾಯಿತಿ ದರದಲ್ಲಿ ಹಂಚಿಕೆ ಮಾಡಿಸಿಕೊಡುತ್ತೇನೆ ಎಂದು ರಮೇಶ್‌ ಎಂಬಾತನ ಜತೆ ಸೇರಿಕೊಂಡು ಜನರನ್ನು ನಂಬಿಸುತ್ತಿದ್ದ.  ಸದಸ್ಯತ್ವ ನೋಂದಣಿಗಾಗಿ ಪ್ರತಿಯೊಬ್ಬರಿಂದ 15ಸಾವಿರ ಪಡೆದು ಸುಮಾರು 1ಸಾವಿರ ಜನರನ್ನು ಸದಸ್ಯರನ್ನಾಗಿ ನೋಂದಾಯಿಸಿಕೊಂಡಿದ್ದಾನೆ.

3 ಸಾವಿರ ಜನರನ್ನು  ಸದಸ್ಯರನ್ನಾಗಿಕೊಳ್ಳುವ ಯೋಜನೆಯಿತ್ತು ಎಂದು ಆರೋಪಿಯು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ. ಈ ಸಂಬಂಧ ಶೇಷಾದ್ರಿಪುರ ಠಾಣೆಯಲ್ಲಿ ಆರೋಪಿ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗಿದೆ ಎಂದು ಬಿಡಿಎ  ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?: 3 ಲಕ್ಷ ಪಾವತಿಸಿ, ಒಟ್ಟು ಆರು ನಿವೇಶನಗಳ ನಕಲಿ ಹಕ್ಕುಪತ್ರಗಳನ್ನು ಪಡೆದಿದ್ದ ವ್ಯಕ್ತಿಯೊಬ್ಬರು ಅದರ ಅಸಲಿಯತ್ತು ಪರಿಶೀಲಿಸಲು ಬಿಡಿಎ ಉಪ ಕಾರ್ಯ ದರ್ಶಿ-1 ಅವರ ಕಚೇರಿಯನ್ನು  ಸಂಪರ್ಕಿಸಿದ್ದರು. ತಕ್ಷಣವೇ ಜಾಗೃತಗೊಂಡ ಉಪ ಕಾರ್ಯದರ್ಶಿ, ಈ ವಿಚಾರವನ್ನು ಬಿಡಿಎ ಆಯುಕ್ತ ಡಾ.ಎಚ್‌. ಆರ್‌. ಮಹಾದೇವ್‌ ಅವರ ಗಮನ ತಂದಿದ್ದರು.

Advertisement

ಆಯುಕ್ತರು ತಕ್ಷಣವೇ ಪ್ರಾಧಿಕಾರದ ಜಾಗೃತ ದಳದ ಸೂಪರಿಂ ಟೆಂಡೆಂಟ್‌  ಆಫ್ ಪೊಲೀಸ್‌ ಶಿವಕುಮಾರ್‌ ಗುನಾರೆ ಅವರಿಗೆ ಈ ವಿಚಾರ ತಿಳಿಸಿ ಪ್ರಕರಣದ ಸಮಗ್ರ ತನಿಖೆ ನಡೆಸುವಂತೆ ಸೂಚಿಸಿದ್ದರು. ಪ್ರಕರಣದ ತನಿಖೆ ನಡೆಸಿದ ಜಾಗೃತ ದಳ ಆರೋಪಿಯಾದ ವಿಜಯಾನಂದಸ್ವಾಮಿ ಯನ್ನು ವಶಕ್ಕೆ ಪಡೆದು  ವಿಚಾರಣೆಗೆ ಒಳಪಡಿಸಿದಾಗ ನಕಲಿ ಜಾಲದ ಬಗ್ಗೆ ಗೊತ್ತಾಗಿದೆ.

ಘಟನೆ ಸಂಬಂಧ ಆರೋಪಿಗಳ ವಿರುದ್ಧ ಶೇಷಾದ್ರಿಪುರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಇಂತಹ ವಂಚನೆ ಪ್ರಕರಣ ಗಳ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು. 
-ಡಾ.ಎಚ್‌. ಆರ್‌. ಮಹಾದೇವ್‌, ಬಿಡಿಎ ಆಯುಕ್ತ

Advertisement

Udayavani is now on Telegram. Click here to join our channel and stay updated with the latest news.

Next