Advertisement

ದೇಶದ್ರೋಹಿಗಳನ್ನು ಗಡಿಪಾರು ಮಾಡಲು ಒತ್ತಾಯ

03:29 PM Feb 26, 2020 | Team Udayavani |

ಬ್ಯಾಡಗಿ: ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಮೂಲ್ಯ ಲಿಯೋನ ಪಾಕಿಸ್ತಾನ್‌ ಪರ ಹೇಳಿಕೆ ಖಂಡಿಸಿ ಮತ್ತು ತಪ್ಪಿತಸ್ಥಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಪಟ್ಟಣದಲ್ಲಿ ವಿವಿಧ ಸಂಘಟನೆಗಳು ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಸಿ ನಂತರ ತಹಸೀಲ್ದಾರಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.

Advertisement

ಪಟ್ಟಣದ ಬಿಇಎಸ್‌ ವರ್ತಕರ ಮಹಾ ವಿದ್ಯಾಲಯದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ರಟ್ಟಿಹಳ್ಳಿ ರಸ್ತೆ, ಬೀರೆಶ್ವರ ದೇವಸ್ಥಾನ ಹಳೇ ಪುರಸಭೆ ಮುಖ್ಯ ರಸ್ತೆ ಮೂಲಕ ಸಂಚರಿಸಿ ತಹಸೀಲ್ದಾರ್‌ ಕಚೇರಿ ತಲುಪಿತು. ದೇಶದ್ರೋಹಿ ಹೇಳಿಕೆ ಕೂಗಿದ ಅಮೂಲ್ಯಳನ್ನು ಗಡಿ ಪಾರು ಮಾಡುವಂತೆ ಘೋಷಣೆ ಕೂಗಿದರು. ಪುರಸಭೆ ಸದಸ್ಯ ಬಾಲಚಂದ್ರಗೌಡ ಪಾಟೀಲ ಮಾತನಾಡಿ, ಅಮೂಲ್ಯ ಲಿಯೋನ್‌ ಎನ್ನುವ ಸೋಕಾಲ್ಡ್‌ ಮಹಿಳಾ ಸಾಮಾಜಿಕ ಕಾರ್ಯಕರ್ತೆ ಸಾರ್ವಜನಿಕ ಸಮಾರಂಭವೊಂದರಲ್ಲಿ ನೀಡಿರುವಂತಹ ಪಾಕಿಸ್ತಾನ್‌ ಪರ ಹೇಳಿಕೆ ನೀಡಿರುವುದು ಅತ್ಯಂತ ಖಂಡನೀಯ. ನಿಜವಾದ ಭಾರತೀಯರು ಯಾವುದೇ ಕಾರಣಕ್ಕೂ ಇದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದರು.

ಸುರೇಶ ಆಸಾದಿ ಮಾತನಾಡಿ, ದೇಶ ವಿರೋಧಿ  ಚಟುವಟಿಕೆ ಅಥವಾ ಹೇಳಿಕೆಗಳನ್ನು ನೀಡುವವರು ಕೂಡಲೇ ದೇಶ ಬಿಟ್ಟು ತೊಲಗಬೇಕು. ಇಲ್ಲವೇ ಅವರು ಬಯಸಿದಂತಹ ದೇಶಕ್ಕೆ ಕಳುಹಿಸಿಕೊಡಲು ಭಾರತದಲ್ಲಿ ಕೋ ಟ್ಯಾಂತರ ದೇಶಭಕ್ತರು ಸಿದ್ಧವಾಗಿದ್ದೇವೆ ಎಂದರು.

ಪಿಎಲ್‌ಡಿ ಬ್ಯಾಂಕ್‌ ಮಾಜಿ ಅಧ್ಯಕ್ಷ ಶಿವಯೋಗಿ ಶಿರೂರ ಮಾತನಾಡಿ, ಅಮೂಲ್ಯ ಲಿಯೋನ್‌ ಬಾಯಲ್ಲಿ ಬಂದಂತಹ ಮಾತುಗಳಲ್ಲಿ ದೇಶ ವಿರೋಧಿ ಗಳ ಶಡ್ಯಂತ್ರವಿದೆ. ಇದರ ಹಿಂದಿರುವ ಕರಾಳ ಸತ್ಯವನ್ನು ಸರ್ಕಾರ ಬಯಲು ಮಾಡುವ ಮೂಲಕ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವ ಕೆಲಸವಾಗಬೇಕು. ಇಲ್ಲದೇ ಇದ್ದಲ್ಲಿ ತೀವ್ರ ಸ್ವರೂಪದ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

ಪುರಸಭೆ ಸದಸ್ಯರಾದ ಈರಣ್ಣ ಬಣಕಾರ, ಹನುಮಂತಪ್ಪ ಮ್ಯಾಗೇರಿ, ಶಿವರಾಜ ಅಂಗಡಿ, ಸುಭಾಷ ಮಾಳಗಿ, ಸಂಜೀವ ಮಡಿವಾಳರ, ವಿಜಯಭರತ ಬಳ್ಳಾರಿ, ವೀರೇಶ ಮತ್ತಿಹಳ್ಳಿ, ನಂದೀಶ್‌ ವೀರನಗೌಡ್ರ, ಅರುಣಕುಮಾರ ಪಾಟೀಲ, ಸುರೇಶ ಛಲವಾದಿ, ವಿಷ್ಣುಕಾಂತ ಬೆನ್ನೂರ, ಗಿರೀಶ ಇಂಡಿಮಠ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Advertisement

ಪ್ರತಿಭಟನೆಗೆ ಪಟ್ಟಣದಲ್ಲಿನ ಹಲವು ಕಾಲೇಜ್‌ ನ ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ಪಾಲ್ಗೊಂಡಿದ್ದರು. ಅಲ್ಲದೇ ಪ್ರತಿಭಟನೆಗೆ ನ್ಯಾಯವಾದಿಗಳ ಸಂಘ ಸಹ ಸಾಥ್‌ ನೀಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next