Advertisement

ಕಲ್ಲು ಗಣಿಗಾರಿಕೆ ಸಮಸ್ಯೆ ಬಿಚ್ಚಿಟ್ಟ ಸ್ಥಳೀಯರು

04:05 PM Apr 05, 2022 | Team Udayavani |

ಪಾಂಡವಪುರ: ಕನಗನಮರಡಿ ಹೊರವಲಯದಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆ ಸ್ಥಗಿತಗೊಳಿಸುವಂತೆ ಒತ್ತಾಯಿಸಿ ತಾಲೂಕಿನ ಕನಗನಮರಡಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಕನಗನಮರಡಿ ಗ್ರಾಮದಲ್ಲಿ ಗ್ರಾಮಸ್ಥರು ರಸ್ತೆ ತಡೆದು ಗಣಿ ಮಾಲಿಕರು ಹಾಗೂ ಪೊಲೀಸ್‌ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದರು.

Advertisement

ಪ್ರಾಕೃತಿಕ ಸಂಪತ್ತು ಲೂಟಿ: ಕನಗನಮರಡಿ ಗ್ರಾಮದ ಹೊರವಲಯದ ಅರಣ್ಯ ಪ್ರದೇಶದ ಪಕ್ಕದಲ್ಲಿ ಕಲ್ಲು ಗಣಿಗಾರಿಕೆ ಅಕ್ರಮವಾಗಿ ನಡೆಯುತ್ತಿದೆ. ಇಲ್ಲಿ ನಡೆಯುತ್ತಿರುವ ಗಣಿಗಾರಿಕೆಯಿಂದ ಜನರಿಗೆ ಅನಾ ನುಕೂಲದ ಜತೆಗೆ ಪ್ರಾಕೃತಿಕ ಸಂಪತ್ತು ಲೂಟಿಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೂಳು ಹೆಚ್ಚಾಗಿದೆ: ಕಲ್ಲು ಗಣಿಗಾರಿಕೆ ಜತೆಗೆ ಕ್ರಷರ್‌ ಗಳಿಂದ ದೂಳು ಹಾಗೂ ಶಬ್ಧ ಹೆಚ್ಚಾಗಿದೆ. ಕಲ್ಲಿನ ದೂಳು ಜಮೀನು ಹಾಗೂ ಕೆರೆಕಟ್ಟೆಗಳ ಮೇಲೆ ಬೀಳುತ್ತಿರುವುದರಿಂದ ಸುತ್ತಮುತ್ತಲಿನ ಪ್ರದೇಶದಲ್ಲಿ ಕೃಷಿ ಮಾಡಲು ಸಾಧ್ಯವಾಗುತ್ತಿಲ್ಲ, ಜತೆಗೆ ಜನರ ಆರೋಗ್ಯದ ಮೇಲೂ ಕೆಟ್ಟಪರಿಣಾಮ ಬೀರುತ್ತಿದೆ. ಇನ್ನೂ ಜನಜಾನುವಾರು ಮೇವಿಗೂ ಸಾಕಷ್ಟು ಅನಾನುಕೂಲ ಉಂಟಾಗಿದೆ ಎಂದು ಕಿಡಿಕಾರಿದರು.

ಪೊಲೀಸ್‌ ಅಧಿಕಾರಿಗಳ ವಿರುದ್ಧ ಆಕ್ರೋಶ: ತಾಲೂಕಿನ ಸರ್ಕಲ್‌ ಇನ್ಸ್‌ಪೆಕ್ಟರ್‌ ಪ್ರಭಾಕರ್‌ ಅವರು ಗಣಿ ಮಾಲಿಕ ಅಶೋಕ್‌ಪಾಟೀಲ್‌ ಕೈಬೊಂಬೆಯಂತೆ ಕುಣಿಯುತ್ತಿದ್ದಾರೆ. ಗ್ರಾಮದ ರೈತರು ಕಲ್ಲುಗಣಿಗಾರಿಕೆಯಿಂದ ತೊಂದರೆಯಾಗುತ್ತಿದೆ ಎಂದು ಕ್ರಷರ್‌ ಬಳಿ ಹೋಗಿ ಕೇಳಿದ್ದಕ್ಕೆ ಗಣಿ ಮಾಲಿಕ ಅವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಅದಕ್ಕೆ ಪೊಲೀಸರು ರೈತರನ್ನು ಬಂಧಿಸಲು ಬಂದಿದ್ದಾರೆ. ಅದೇ ರೈತರು, ಸ್ಥಳೀಯರು, ಗ್ರಾಮಸ್ಥರು ಗಣಿ ಮಾಲಿಕನ ವಿರುದ್ದ ದೂರು ನೀಡಿದರೆ ನಮ್ಮ ದೂರನ್ನು ಸ್ವೀಕರಿಸೋದೆ ಇಲ್ಲ. ಗಣಿ ಮಾಲಿಕರು ಹೇಳಿದ ಹಾಗೆ ಸರ್ಕಲ್‌ ಇನ್ಸ್‌ಪೆಕ್ಟರ್‌ ಪ್ರಭಾಕರ್‌ ಕುಣಿಯುತ್ತಿದ್ದಾರೆ.ಪೊಲೀಸ್‌ ವ್ಯವಸ್ಥೆಯೇ ಹೀಗಾದರೆ ಹೇಗೆ ಎಂದು ಆಕ್ರೋಶ ಹೊರಹಾಕಿದರು.

ಅವರು ಹೀಗೆ ಮುಂದುವರಿದರೆ ಮುಂದಿನ ದಿನಗಳಲ್ಲಿ ಪೊಲೀಸ್‌ ಠಾಣೆ ಎದುರೇ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಇಲ್ಲಿನ ಕಲ್ಲುಗಣಿಗಾರಿಕೆ ಸ್ಥಗಿತಗೊಳಿಸುವಂತೆ ಜಿಲ್ಲಾ ಧಿಕಾರಿ, ಎಸಿ, ತಹಶೀಲ್ದಾರ್‌, ಗಣಿ ಅಧಿಕಾರಿಗಳಿಗೆ ಮನವಿ ನೀಡಿದ್ದೇವೆ. ಹೀಗಿದ್ದರೂ  ಅಧಿಕಾರಿಗಳು ಕ್ರಮವಹಿಸುತ್ತಿಲ್ಲ. ಹೀಗೆಯೇ ನಮ್ಮ ಬದುಕಿಗೆ ತೊಂದರೆಯಾಗುತ್ತಿದ್ದರೆ ಇಡೀ ಗ್ರಾಮಸ್ಥರೆಲ್ಲಾ ಮುಂದಿನ ದಿನಗಳಲ್ಲಿ ಉಗ್ರವಾದ ಚಳವಳಿ ಹಮ್ಮಿ ಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಸಂದರ್ಭದಲ್ಲಿ ಮೈಷುಗರ್‌ ಅಧ್ಯಕ್ಷ ಜೆ.ಶಿವಲಿಂಗೇಗೌಡ, ಮುಖಂಡರಾದ ಕೃಷಮೂರ್ತಿ, ಜೆ.ಗಿರೀಶ್‌, ಚಿಕ್ಕಣ್ಣೇಗೌಡ, ಉಮೇಶ್‌, ಅಂಕೇಗೌಡ, ಶಂಕರೇಗೌಡ, ನಾಗರಾಜು, ಸುರೇಶ್‌, ಗುರುವಯ್ಯ, ತಮ್ಮಣ್ಣ ಮತ್ತಿತರರು ಉಪಸ್ಥಿತರಿದ್ದರು.

Advertisement

ಮನೆ, ದೇಗುಲಗಳ ಗೋಡೆ ಬಿರುಕು ಬಿಟ್ಟಿವೆ… : ಗಣಿಮಾಲಿಕರು ಕಲ್ಲು ಸಿಡಿಸಲು ಮೆಗ್ಗರ್‌, ರಿಗ್‌ ಬೋರ್‌ ಬ್ಲಾಸ್ಟಿಂಗ್‌ ಮಾಡುತ್ತಿದ್ದಾರೆ. ಇದರಿಂದಾಗಿ ಮನೆಗಳು, ದೇವಸ್ಥಾನ ಗೋಡೆಗಳು ಬಿರುಕು ಬಿಡುತ್ತಿವೆ. ಜತೆಯಲ್ಲಿ ಗ್ರಾಮದಲ್ಲಿ ವಿಶ್ವೇಶ್ವರಯ್ಯ ನಾಲೆಯ ಅಕ್ವಡೆಟ್‌(ನಾಲೆಯ ಮೇಲ್ಸೇತುವೆ) ನಾಲೆಯೂ ಹಾದು ಹೋಗಿದೆ. ಬ್ಲಾಸ್ಟಿಂಗ್‌ ಶಬ್ಧಕ್ಕೆ ನಾಲೆಗೂ ಅಪಾಯ ಎದುರಾಗಿದೆ. ಇಲ್ಲಿಗೆ ಸಮೀಪವೇ ವಿಸಿ ನಾಲೆಯ ಸುರಂಗವಿದ್ದು ಅದಕ್ಕೂ ಅಪಾಯ ಎದುರಾಗಿದೆ. ರಾತ್ರಿಯ ವೇಳೆಯಲ್ಲಿ ಬ್ಲಾಸ್ಟಿಂಗ್‌ ಮಾಡುವುದರಿಂದ ಮನೆಯಲ್ಲಿ ಮಲಗುವ ಮಕ್ಕಳು, ವಯೋವೃದ್ಧರು ಬೆಚ್ಚಿಬೀಳುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next